ಮೂರು ವರ್ಷದ ಸಾಧನೆ ನೆನೆದ ಸಿಎಂ ಸಿದ್ದರಾಮಯ್ಯ; “ಗ್ಯಾರಂಟಿ ಯೋಜನೆಗಳು ಮನೆಮನೆ ತಲುಪಿವೆ” ಎಂದ ಮುಖ್ಯಮಂತ್ರಿ
ಬೆಂಗಳೂರು, ಮೇ 27: ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಸ್ಮರಿಸಿಕೊಂಡಿದ್ದು, ಚುನಾವಣೆಗೆ ಮುನ್ನ ನೀಡಿದ್ದ ಪ್ರತಿಯೊಂದು ಭರವಸೆಯನ್ನೂ ಈಡೇರಿಸಿದ್ದೇವೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸಿದ್ದರಾಮಯ್ಯ, ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯಸ್ಸನ್ನು ರಾಜ್ಯದ ಜನತೆಗೆ ಅರ್ಪಿಸಿದ್ದಾರೆ.
“ರಾಜ್ಯದ ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ್ದೇವೆ. ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯಸ್ಸನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತೇವೆ,” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಚುನಾವಣೆಗೆ ಮುನ್ನ ನೀಡಿದ್ದ ಮಾತಿನಂತೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ರಾಜ್ಯದ ಪ್ರತಿ ಮನೆಗೂ ತಲುಪಿಸಿದೆ ಎಂದು ಸಿಎಂ ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆ ಕುರಿತು ವಿಶೇಷವಾಗಿ ಉಲ್ಲೇಖಿಸಿರುವ ಸಿದ್ದರಾಮಯ್ಯ, “ಯಾರೂ ಹಸಿವಿನಿಂದ ಮಲಗಬಾರದು” ಎಂಬ ಸಂಕಲ್ಪದೊಂದಿಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.
ಈ ಯೋಜನೆಯಿಂದ ಕೋಟ್ಯಾಂತರ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಭದ್ರತೆ ದೊರೆತಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಉಚಿತ ಆಹಾರಧಾನ್ಯ ವಿತರಣೆಗಾಗಿ ಸರ್ಕಾರ ಇದುವರೆಗೆ ₹18,897 ಕೋಟಿ ವೆಚ್ಚ ಮಾಡಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಸುಮಾರು 4.26 ಕೋಟಿ ಪಡಿತರದಾರರು ಇಂದು ಮೂರೂ ಹೊತ್ತು ನೆಮ್ಮದಿಯಿಂದ ಊಟ ಮಾಡುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಜನರಿಗೆ ನೀಡಿದ ಪ್ರತಿಯೊಂದು ಭರವಸೆಯನ್ನೂ ಈಡೇರಿಸುವ ಮೂಲಕ “ನುಡಿದಂತೆ ನಡೆದ” ಸರ್ಕಾರ ಎಂಬ ಹೆಮ್ಮೆಯನ್ನು ಕಾಂಗ್ರೆಸ್ ಸರ್ಕಾರ ಪಡೆದಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯದ ಸಾಮಾನ್ಯ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶದಿಂದಲೇ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
