ಬೆಂಗಳೂರು ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026; ಎಐ ಆಧಾರಿತ ಜಲ ಆಡಳಿತಕ್ಕೆ ಕರ್ನಾಟಕದ ಒತ್ತು
ಬೆಂಗಳೂರು, ಮೇ 27: ಹವಾಮಾನ ಬದಲಾವಣೆ, ವೇಗವಾದ ನಗರೀಕರಣ, ಅಂತರ್ಜಲ ಕುಸಿತ ಮತ್ತು ಮೂಲಸೌಕರ್ಯಗಳ ಮೇಲಿನ ಒತ್ತಡದಂತಹ ಭವಿಷ್ಯದ ಸವಾಲುಗಳನ್ನು ಎದುರಿಸಲು ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ತಂತ್ರಜ್ಞಾನಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದ್ದಾರೆ. ಎಐ ಆಧಾರಿತ ನಗರ ಜಲ ಆಡಳಿತದಲ್ಲಿ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಜಲಮಂಡಳಿ (BWSSB) ಎಲೆಟ್ಸ್ ಹಾಗೂ ಕೆಪಿಎಂಜಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ ಮತ್ತು ಬೆಳಗಾವಿ ಸೇರಿದಂತೆ ಪ್ರಮುಖ ನಗರಗಳಲ್ಲಿ ನೀರಿನ ಮೇಲಿನ ಒತ್ತಡ ಹೆಚ್ಚಾಗುತ್ತಿದ್ದು, ದಕ್ಷ, ಪಾರದರ್ಶಕ ಮತ್ತು ಜವಾಬ್ದಾರಿಯುತ ಸಾರ್ವಜನಿಕ ಸೇವೆಗಾಗಿ ತಂತ್ರಜ್ಞಾನ ಆಧಾರಿತ ಇಂಟಲಿಜೆಂಟ್ ಆಡಳಿತ ವ್ಯವಸ್ಥೆಗಳು ಅಗತ್ಯವಾಗಿದೆ ಎಂದು ಹೇಳಿದರು.
“ನಗರದ ನೀರು ಸರಬರಾಜು ಮಂಡಳಿಗಳಿಗೆ ಎಐ ಮತ್ತು ಡಿಜಿಟಲ್ ಇಂಟೆಲಿಜೆನ್ಸ್ ಇನ್ನು ಆಯ್ಕೆಯ ಸಾಧನಗಳಲ್ಲ. ನೈಜ-ಸಮಯದ ಮೇಲ್ವಿಚಾರಣೆ, ಪ್ರಿಡಿಕ್ಟಿವ್ ಅನಾಲಿಟಿಕ್ಸ್, ನೀರಿನ ಬೇಡಿಕೆ ಮುನ್ಸೂಚನೆ ಮತ್ತು ದತ್ತಾಂಶ ಆಧಾರಿತ ಆಡಳಿತವೇ ಭವಿಷ್ಯದ ಜಲ ನಿರ್ವಹಣೆಯನ್ನು ನಿರ್ಧರಿಸಲಿದೆ,” ಎಂದು ಅವರು ಹೇಳಿದರು.
ಕರ್ನಾಟಕ ಈಗಾಗಲೇ ಎಐ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಡಿಜಿಟಲ್ ಸಂಗ್ರಹಣೆ, ಡೇಟಾ ಹಂಚಿಕೆ ಮತ್ತು ಕಾರ್ಯಕ್ಷಮತೆ ಆಧಾರಿತ ಆಡಳಿತ ವ್ಯವಸ್ಥೆಗಳಿಗೆ ಬೆಂಬಲ ನೀಡುವ ನೀತಿ ಚೌಕಟ್ಟುಗಳನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು.
ಡಿಜಿಟಲ್ ರೂಪಾಂತರದಲ್ಲಿ ಹೊಣೆಗಾರಿಕೆ ಪ್ರಮುಖವಾಗಿರಬೇಕು ಎಂದು ಒತ್ತಿ ಹೇಳಿದ ಅವರು, ತಂತ್ರಜ್ಞಾನವು ಸಾರ್ವಜನಿಕರ ವಿಶ್ವಾಸ ಮತ್ತು ಸಾಂಸ್ಥಿಕ ದಕ್ಷತೆಯನ್ನು ಬಲಪಡಿಸಬೇಕು ಎಂದು ತಿಳಿಸಿದರು.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಬೆಂಗಳೂರಿನ ವೇಗವಾದ ವಿಸ್ತರಣೆ ಮತ್ತು ನಗರ ಸಂಕೀರ್ಣತೆ ಜಲ ನಿರ್ವಹಣೆಯನ್ನು ಬುದ್ಧಿವಂತ ಹಾಗೂ ಮುನ್ಸೂಚಕ ವ್ಯವಸ್ಥೆಗಳತ್ತ ಕೊಂಡೊಯ್ಯುತ್ತಿದೆ ಎಂದರು.
“ಬೆಂಗಳೂರು ಜಲಮಂಡಳಿ ಇಂದು 14 ದಶಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಸೇವೆ ನೀಡುತ್ತಿದೆ. ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರಿನ ನೀರಿನ ನಿರ್ವಹಣೆಗೆ ತಂತ್ರಜ್ಞಾನ ಮತ್ತು ಬುದ್ಧಿವಂತ ಆಡಳಿತ ಅಗತ್ಯವಾಗಿದೆ,” ಎಂದು ಹೇಳಿದರು.
ಜಲಮಂಡಳಿ ಈಗಾಗಲೇ ಏಷ್ಯಾದ ಅತಿದೊಡ್ಡ ನಗರ ಮಟ್ಟದ SCADA ವ್ಯವಸ್ಥೆ, GIS ಆಧಾರಿತ ಮ್ಯಾಪಿಂಗ್, IoT ಮೇಲ್ವಿಚಾರಣೆ, ಸ್ವಯಂಚಾಲಿತ ಸೋರಿಕೆ ಪತ್ತೆ ವ್ಯವಸ್ಥೆ ಮತ್ತು ಸ್ಮಾರ್ಟ್ ಮೀಟರಿಂಗ್ ಪೈಲಟ್ ಯೋಜನೆಗಳನ್ನು ಅಳವಡಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಈ ತಂತ್ರಜ್ಞಾನಗಳ ನೆರವಿನಿಂದ ನಾನ್-ರೆವಿನ್ಯೂ ವಾಟರ್ (NRW) ಪ್ರಮಾಣವನ್ನು ಶೇಕಡಾ 50ರಿಂದ 26.5ಕ್ಕೆ ಇಳಿಸಲಾಗಿದ್ದು, ಪ್ರತಿದಿನ ಸುಮಾರು 200 ಮಿಲಿಯನ್ ಲೀಟರ್ ನೀರು ಉಳಿತಾಯವಾಗುತ್ತಿದೆ ಎಂದು ಹೇಳಿದರು.
ಎಐ ಆಧಾರಿತ ಎನರ್ಜಿ ಆಪ್ಟಿಮೈಸೇಶನ್ ಪಂಪ್ಗಳ ಮೂಲಕ ವರ್ಷಕ್ಕೆ ಸುಮಾರು ₹42 ಕೋಟಿ ಮೌಲ್ಯದ ವಿದ್ಯುತ್ ವೆಚ್ಚ ಉಳಿತಾಯವಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.
“ಎಐ ಅಂದ್ರೆ ಕೇವಲ ಡ್ಯಾಶ್ಬೋರ್ಡ್ಗಳಲ್ಲ. ಇದು ಮುನ್ಸೂಚಕ ಆಡಳಿತ, ಹೊಣೆಗಾರಿಕೆ ಮತ್ತು ಅಳೆಯಬಹುದಾದ ಫಲಿತಾಂಶಗಳ ಬಗ್ಗೆ. ನಾವು ರಿಯಾಕ್ಟಿವ್ ಕಾರ್ಯಾಚರಣೆಗಳಿಂದ ಇಂಟಲಿಜೆಂಟ್ ಯುಟಿಲಿಟಿ ನಿರ್ವಹಣೆಯತ್ತ ಸಾಗುತ್ತಿದ್ದೇವೆ,” ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ನಗರಾದ್ಯಂತ ಸ್ಮಾರ್ಟ್ ಮೀಟರಿಂಗ್ ಅಳವಡಿಸಿ, NRW ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡಿ, ಇಂಟಲಿಜೆಂಟ್ ನಗರ ಯುಟಿಲಿಟಿ ನಿರ್ವಹಣೆಯಲ್ಲಿ ರಾಷ್ಟ್ರದ ಮಾದರಿಯಾಗುವ ಗುರಿ ಹೊಂದಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಎಫ್ಕೆಸಿಸಿಐ ಅಧ್ಯಕ್ಷೆ ಉಮಾರೆಡ್ಡಿ, ಎಲೆಟ್ಸ್ ಟೆಕ್ನೋ ಮೀಡಿಯಾ ಸಂಸ್ಥಾಪಕ ಹಾಗೂ ಸಿಇಒ ರವಿ ಗುಪ್ತಾ, ಕೆಪಿಎಂಜಿ ಪಾಲುದಾರ ನಿಲಾಚಲ್ ಮಿಶ್ರಾ ಸೇರಿದಂತೆ ಜಾಗತಿಕ ಜಲ ತಜ್ಞರು, ಎಐ ಪರಿಣತರು, ನೀತಿ ನಿರೂಪಕರು, ತಂತ್ರಜ್ಞಾನ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು ಮತ್ತು ದೇಶ-ವಿದೇಶಗಳ ನಗರ ಆಡಳಿತ ತಜ್ಞರು ಭಾಗವಹಿಸಿದ್ದರು.
ಶೃಂಗಸಭೆಗೆ ಸಂದೇಶ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ನೀರಿನ ಬೇಡಿಕೆಯ ನಡುವಿನ ಸವಾಲುಗಳನ್ನು ಎದುರಿಸಲು ಎಐ ಆಧಾರಿತ ಆಡಳಿತ ಮತ್ತು ಬುದ್ಧಿವಂತ ಜಲ ವ್ಯವಸ್ಥೆಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಹೇಳಿದರು.
“ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ಬೆಂಗಳೂರು ಜಲಮಂಡಳಿ ದೇಶಕ್ಕೆ ಮಾದರಿಯಾಗುತ್ತಿದೆ,” ಎಂದು ಅವರು ತಿಳಿಸಿದ್ದಾರೆ.
