ಪ್ರಶ್ನೆಪತ್ರ ಸೋರಿಕೆ ಮಸೂದೆ ಕುರಿತು ಪ್ರಧಾನಿ ಹೇಳಿಕೆ ಬಳಿಕ ಉಪವಾಸ ಅಂತ್ಯಗೊಳಿಸಿದ ಸೋನಂ ವಾಂಗ್ಚುಕ್
ಗುರುಗ್ರಾಮ/ನವ ದೆಹಲಿ, ಜುಲೈ 24: ಪ್ರಶ್ನೆಪತ್ರ ಸೋರಿಕೆ ಪ್ರಕರಣಗಳಿಗೆ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳು ಹಾಗೂ ಕಠಿಣ ಶಿಕ್ಷೆಯ ಪ್ರಾವಧಾನವಿರುವ ಮಸೂದೆ ತರಲಾಗುವುದು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಬಳಿಕ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಡೆಸುತ್ತಿದ್ದ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ.
ಕೇಂದ್ರ ಸಚಿವ ಜೆ.ಪಿ. ನಡ್ಡಾ ಹಾಗೂ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಸಮ್ಮುಖದಲ್ಲಿ ಅವರು ಉಪವಾಸವನ್ನು ಅಂತ್ಯಗೊಳಿಸಿದರು.
ಪ್ರಶ್ನೆಪತ್ರ ಸೋರಿಕೆ ಪ್ರಕರಣಗಳನ್ನು ತಡೆಯಲು ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳು ಮತ್ತು ಕಠಿಣ ಶಿಕ್ಷೆಯ ವ್ಯವಸ್ಥೆ ಕಲ್ಪಿಸುವ ಮಸೂದೆಯನ್ನು ಕೇಂದ್ರ ಸಚಿವ ಸಂಪುಟದ ಮುಂದೆ ತರಲಾಗುವುದು ಹಾಗೂ ಸಾಧ್ಯವಾದಷ್ಟು ಬೇಗ ಸಂಸತ್ತಿನಲ್ಲಿ ಅಂಗೀಕರಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು.
