ನವೆಂಬರ್ 25ರಂದು ಜಪಾನ್‌ನಲ್ಲಿ ಸುಮಿಟೊಮೊ ಕಾರ್ಪೊರೇಷನ್ ಪ್ರತಿನಿಧಿಗಳೊಂದಿಗೆ ನಡೆದ ಕರ್ನಾಟಕ ನಿಯೋಗದ ಸಭೆ.
ಬೆಂಗಳೂರು: ಕರ್ನಾಟಕಕ್ಕೆ ಬಂಡವಾಳ ಆಕರ್ಷಿಸುವ ಗುರಿಯೊಂದಿಗೆ ಜಪಾನ್ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಬುಧವಾರ, ನವೆಂಬರ್ 25ರಂದು ಸುಮಿಟೊಮೊ ಕಾರ್ಪೊರೇಷನ್, ಮೀಜಿ ಸೇಕಾ ಫಾರ್ಮಾ ಮತ್ತು ಮಿತ್ಸುಬಿಷಿ ಕೆಮಿಕಲ್ ಗ್ರೂಪ್ ಜೊತೆ ಮಾತುಕತೆ ನಡೆಸಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ಪಾಟೀಲ ಅವರು, ಮುಕಂದ್ ಸುಮಿ ಸ್ಪೆಷಲ್ ಸ್ಟೀಲ್ ಕಳೆದ ವರ್ಷ ಕೊಪ್ಪಳದಲ್ಲಿ ವಿಶೇಷ ದರ್ಜೆಯ ಉಕ್ಕು ತಯಾರಿಸಲು 2,000 ಕೋಟಿ ರೂ.ಗಿಂತ ಹೆಚ್ಚು ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿತ್ತು. ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು ಹೆಚ್ಚಿನ ಚರ್ಚೆ ನಡೆಯಿತು ಎಂದು ತಿಳಿಸಿದ್ದಾರೆ.
ಸುಮಿಟೊಮೊ ಕಾರ್ಪೊರೇಷನ್: ಜಪಾನಿನ ಉತ್ಪಾದನಾ ಕಂಪನಿಗಳನ್ನು ಕರ್ನಾಟಕಕ್ಕೆ ಆಕರ್ಷಿಸಲು ಬೆಂಗಳೂರಿನ ಸಮೀಪ 100 ಎಕರೆ ವಿಸ್ತೀರ್ಣದ ಖಾಸಗಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ಈ ಕಂಪನಿ ಆಸಕ್ತಿ ವ್ಯಕ್ತಪಡಿಸಿದೆ. ಬೀದರ್‌ನಲ್ಲಿ ಹೀರೋ ಫ್ಯೂಚರ್ ಎನರ್ಜೀಸ್ ಜೊತೆಗೂಡಿ ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿಯೂ ಹೂಡಿಕೆ ಮಾಡಿದ್ದು, ಈ ವಲಯದಲ್ಲಿ ತನ್ನ ಚಟುವಟಿಕೆ ವಿಸ್ತರಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯಿತು ಎಂದು ಪಾಟೀಲ ತಿಳಿಸಿದ್ದಾರೆ.
ಮೀಜಿ ಸೇಕಾ ಫಾರ್ಮಾ: ಔಷಧ ತಯಾರಿಕಾ ಕ್ಷೇತ್ರದ ಈ ಪ್ರಸಿದ್ಧ ಕಂಪನಿ ಕರ್ನಾಟಕದಲ್ಲಿ ತನ್ನ ಇರುವಿಕೆ ವಿಸ್ತರಿಸಲು ಬಯಸಿದೆ. ಬೆಂಗಳೂರಿನಲ್ಲಿ ಈಗಾಗಲೇ ಹಲವು ತಯಾರಿಕಾ ಘಟಕಗಳನ್ನು ಹೊಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಔಷಧ ಪೂರೈಸುತ್ತಿದೆ. ರಾಜ್ಯದಲ್ಲಿ ಪ್ರತಿಜೀವಕಗಳು, ಲಸಿಕೆಗಳು ಮತ್ತಿತರ ಉನ್ನತ ಮೌಲ್ಯದ ಔಷಧ ಉತ್ಪನ್ನಗಳ ತಯಾರಿಕೆಗೆ ವಿಸ್ತರಿಸುವ ಅವಕಾಶಗಳನ್ನು ಕಂಪನಿಗೆ ವಿವರಿಸಲಾಗಿದೆ. ಉದ್ದೇಶಿತ ಫಾರ್ಮಾ ಪಾರ್ಕ್‌ನಲ್ಲಿ ಕಂಪನಿಗೆ ಭೂಮಿ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಪಾಟೀಲ ಹೇಳಿದ್ದಾರೆ.
ಮಿತ್ಸುಬಿಷಿ ಕೆಮಿಕಲ್ ಗ್ರೂಪ್: ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಅಡ್ವಾನ್ಸ್ಡ್ ಮೆಟೀರಿಯಲ್ಸ್ ಕ್ಷೇತ್ರಗಳಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆ ಕಂಪನಿಗೆ ಮಾಹಿತಿ ನೀಡಲಾಯಿತು. ಅಪ್ಲೈಡ್ ಮೆಟೀರಿಯಲ್ಸ್ ಮತ್ತು ಲ್ಯಾಮ್ ರೀಸರ್ಚ್ ಕಂಪನಿಗಳು ಕರ್ನಾಟಕದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗಾಗಲೇ ಮಾಡಿರುವ ಗಮನಾರ್ಹ ಹೂಡಿಕೆಯನ್ನೂ ಅವರ ಗಮನಕ್ಕೆ ತರಲಾಯಿತು ಎಂದು ಪಾಟೀಲ ತಿಳಿಸಿದ್ದಾರೆ.
ಭಾಗವಹಿಸಿದವರು: ಸುಮಿಟೊಮೊ ಕಾರ್ಪೊರೇಷನ್ ಪರವಾಗಿ ಸ್ಟೀಲ್ ಪ್ರಾಡಕ್ಟ್ಸ್ ಸ್ಟ್ರಾಟಜಿಕ್ ಬಿಸಿನೆಸ್ ಯೂನಿಟ್‌ನ ಜನರಲ್ ಮ್ಯಾನೇಜರ್ ಕಝುವಾಕಿ ತ್ಸುಡಾ ಮತ್ತು ಗ್ಲೋಬಲ್ ಸ್ಟ್ರಾಟಜಿ ಆ್ಯಂಡ್ ಕೋಆರ್ಡಿನೇಷನ್ ವಿಭಾಗದ ಮುಖ್ಯಸ್ಥ ಯೋಶಿಕಝು ಇಶಿಕಾವ; ಮೀಜಿ ಸೇಕಾ ಫಾರ್ಮಾ ಪರವಾಗಿ ಅಧ್ಯಕ್ಷ ಮತ್ತು ಪ್ರತಿನಿಧಿ ನಿರ್ದೇಶಕ ತೋಶಿಯಾಕಿ ನಗಸಾಟೊ ಮತ್ತು ಇಂಟರ್‌ನ್ಯಾಷನಲ್ ಹೆಡ್‌ಕ್ವಾರ್ಟರ್ಸ್‌ನ ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ ತಕಾಯುಕಿ ಮತ್ಸುಮೊಟೊ; ಮಿತ್ಸುಬಿಷಿ ಕೆಮಿಕಲ್ ಕಾರ್ಪೊರೇಷನ್ ಪರವಾಗಿ ಇನ್ಫರ್ಮೇಷನ್ ಎಲೆಕ್ಟ್ರಾನಿಕ್ಸ್ ಬಿಸಿನೆಸ್ ಗ್ರೂಪ್‌ನ ಬಿಸಿನೆಸ್ ವೈಸ್ ಪ್ರೆಸಿಡೆಂಟ್ ಮತ್ತು ವ್ಯವಹಾರ ಕಾರ್ಯತಂತ್ರ ಹಾಗೂ ಯೋಜನೆ ವಿಭಾಗದ ಮುಖ್ಯಸ್ಥ ಯೋಶಿಕಝು ಹಯಾಶಿ ಭಾಗವಹಿಸಿದ್ದರು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಖುಷ್ಬೂ ಗೋಯಲ್ ಉಪಸ್ಥಿತರಿದ್ದರು.
ಇದನ್ನೂ ಓದಿ:
