ಬೆಂಗಳೂರು:
ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ರ ಅಂಗವಾಗಿ “ಸ್ಟ್ರೀಟ್ ಪ್ಲೇ ಮತ್ತು ಪ್ಲಾಶ್ ಮೊಬ್” (ಬೀದಿ ನಾಟಕ ಹಾಗೂ ಜಾಗೃತಿ ನೃತ್ಯ)ಗೆ ಕಾರ್ಯಕ್ರಮಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರು (ಘನತ್ಯಾಜ್ಯ) ಡಿ. ರಂದೀಪ್ ರವರು ಚಾಲನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ರಸ್ತೆಗಳಲ್ಲೂ ಚರ್ಚ್‌ಸ್ಟ್ರೀಟ್ ಮಾದರಿಯ ಸ್ವಚ್ಛತೆ ಕಾಪಾಡಿಕೊಳ್ಳಲು ಪಾಲಿಕೆ ಶ್ರಮಿಸುತ್ತಿದ್ದು, ಸಾರ್ವಜನಿಕರು ಅದಕ್ಕೆ ಸಹಕಾರ ನೀಡಬೇಕು ಎಂದು ರಂದೀಪ್ ರವರು ತಿಳಿಸಿದರು.
ಚರ್ಚ್ ಸ್ಟ್ರೀಟ್ ನಗರದ ಉಳಿದ ರಸ್ತೆಗಳಿಗೆ ಮಾದರಿಯಾಗಿದ್ದು, ರಸ್ತೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಕಸದ ಬಿನ್ ಗಳನ್ನು ಇರಿಸಲಾಗಿದೆ. ಚರ್ಚ್‌ಸ್ಟ್ರೀಟ್‌ನಲ್ಲಿ ಜನ ಈಗ ಎಲ್ಲೆಂದರಲ್ಲಿ ಕಸ ಎಸೆಯದೆ ಎಲ್ಲರೂ ಜಾಗೃತರಾಗಿದ್ದಾರೆ. ಈ ಪೈಕಿ ಚರ್ಚ್‌ಸ್ಟ್ರೀಟ್ ರಸ್ತೆ ಉಳಿದ ರಸ್ತೆಗಳಿಗೆ ಮಾದರಿಯುಗುತ್ತಿದೆ. ಇದೇ ರೀತಿ ಉಳಿದ ಕಡೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಪಾಲಿಕೆಯ ಗುರಿಯಾಗಿದೆ. ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ರ ಬಗ್ಗೆ ಸಾರ್ವಜನಿಕರಿಗೆ ಹಾಗೂ ಪ್ರಮುಖವಾಗಿ ಯುವಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪಾಲಿಕೆ ರೂಪಿಸಿಕೊಂಡಿದೆ ಎಂದರು.
ಪ್ರೇಮಿಗಳ ದಿನಾಚರಣೆಯಂದು ಚರ್ಚ್‌ಸ್ಟ್ರೀಟ್‌ನಲ್ಲಿ ಹೆಚ್ಚು ಜನ ಸೇರುತ್ತಾರೆ. ಹೀಗಾಗಿ, ಸ್ವಚ್ಛತೆಯ ಸಂದೇಶ ಹೆಚ್ಚು ಜನರಿಗೆ ತಲುಪಿಸಬಹುದು ಎನ್ನುವ ಉದ್ದೇಶದಿಂದ ಇಂದು ಬೀದಿ ನಾಟಕ ಕಾರ್ಯಕ್ರಮ ರೂಪಿಸಲಾಗಿದೆ. ಈ ಬಾರಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಪಾಲಿಕೆಗೆ ಉತ್ತಮ ಅಂಕ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ನಗರದಲ್ಲಿ ಹಸಿಕಸ ಹಾಗೂ ಒಣಕಸ ಪ್ರತ್ಯೇಕ ಸಂಗ್ರಹ ಮಾಡುವ ಯೋಜನೆ ಜಾರಿಯಾದ ಬಳಿಕ ನಾಗರಿಕರು ಕಸ ವಿಂಗಡಣೆ ಮಾಡಿಕೊಡುವ ಪ್ರಮಾಣ ಹೆಚ್ಚಾಗಿದ್ದು, ಕಸ ವಿಂಗಡಣೆ ಪ್ರಮಾಣ ಶೇ.40 ಹೆಚ್ಚಾಗಿದೆ. ಅಲ್ಲದೆ, ಈ ಬಾರಿ ಸಾರ್ವಜನಿಕರು ಸ್ವಚ್ಛ ಸರ್ವೇಕ್ಷಣ್ ಜನಾಭಿಪ್ರಾಯಕ್ಕೂ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.
ಬೀದಿ ನಾಟಕದ ಮೂಲಕ ಜಾಗೃತಿ:
ನಗರದಲ್ಲಿ ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ)ಗಳಿರುವ ಬಗ್ಗೆ, ಕಸ ವಿಂಗಡಣೆ ಮಾಡುವ ಬಗ್ಗೆ, ಪ್ಲಾಸ್ಟಿಕ್ ಬಳಕೆ ಮಾಡದಿರುವ ಬಗ್ಗೆ, ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ನಾಗರಿಕರು ಪಾಲ್ಗೊಂಡು ಓಟಿಂಗ್ ಮಾಡುವ ಬಗ್ಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು. ಹಸಿ, ಒಣ ಹಾಗೂ ಅಪಾಯಕಾರಿ ತ್ಯಾಜ್ಯವನ್ನು ವಿಂಗಡಿಸಿ ಕೊಡುವಂತೆ ಮನವಿ ಮಾಡಲಾಯಿತು. ನಗರದಲ್ಲಿ ಬ್ಲಾಕ್‌ಸ್ಪಾಟ್‌ಗಳು ನಿರ್ಮಾಣವಾಗುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ.
ನಮ್ಮ ಕಸ ನಮ್ಮ ಜವಾಬ್ದಾರಿ, ನಮ್ಮ ಬೆಂಗಳೂರು ಸ್ವಚ್ಛ ಬೆಂಗಳೂರು ಎಂಬ ಘೋಷಾವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮುಖ್ಯ ಇಂಜಿನಿಯರ್ ವಿಶ್ವನಾಥ್, ಅಧೀಕ್ಷಕ ಅಭಿಯಂತರರು ಬಸವರಾಜ್ ಕಬಾಡೆ, ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.