ಹೆಲ್ಮೆಟ್ ಧರಿಸದಿದ್ದ ಬೈಕ್ ಸವಾರನ ಮೇಲೆ ಮರದ ಒಣ ಕೊಂಬೆ; ಗಂಭೀರ ಗಾಯ, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಬೆಂಗಳೂರು, ಜೂ. 26: ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ 50 ವರ್ಷದ ಬೈಕ್ ಸವಾರನ ಮೇಲೆ ಒಣಗಿದ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತದ ಬಳಿಕ ತಲೆಗೆ ತೀವ್ರ ಪೆಟ್ಟಾಗಿರುವ ಅವರು ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ, ಅಪಾಯಕಾರಿಯಾಗಿ ಒಣಗಿದ್ದ ಮರಗಳ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಮಂಗಳವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಒಣಗಿದ ಮರದ ಕೊಂಬೆ ಬೈಕ್ ಸವಾರನ ತಲೆಯ ಮೇಲೆ ಬೀಳುವ ದೃಶ್ಯಗಳು ಇದೀಗ ವೈರಲ್ ಆಗಿವೆ.
ಗಾಯಗೊಂಡಿರುವ ಸುರೇಶ್, ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಕಳೆದ ಹತ್ತು ವರ್ಷಗಳಿಂದ ಫೀಲ್ಡ್ ಕಲೆಕ್ಷನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಕಲೆಕ್ಷನ್ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಏಕಾಏಕಿ ಮರದ ಒಣ ಕೊಂಬೆ ಅವರ ಮೇಲೆ ಬಿದ್ದಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಕೊಂಬೆ ಬಿದ್ದ ರಭಸಕ್ಕೆ ಸುರೇಶ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಸುರೇಶ್ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಕುಟುಂಬದವರು ಹಾಗೂ ಸ್ಥಳೀಯ ಮೂಲಗಳು ತಿಳಿಸಿವೆ. ಮರದ ಕೊಂಬೆ ಬೀಳುವುದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದ್ದರೂ, ಹೆಲ್ಮೆಟ್ ಧರಿಸದಿರುವುದು ತಲೆಯ ಗಾಯದ ತೀವ್ರತೆಯನ್ನು ಹೆಚ್ಚಿಸಿರಬಹುದೆಂಬ ಪ್ರಶ್ನೆಯೂ ಮೂಡಿದೆ. ಆದರೆ ಈ ಕುರಿತು ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಗಾಯಗೊಂಡ ಸುರೇಶ್ ಅವರನ್ನು ಮೊದಲು ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ದಾಖಲಿಸಿ ಬಳಿಕ ಯಶವಂತಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ವೈದ್ಯರು ಮುಂದಿನ 48 ಗಂಟೆಗಳು ಅತ್ಯಂತ ನಿರ್ಣಾಯಕ ಎಂದು ಕುಟುಂಬಕ್ಕೆ ತಿಳಿಸಿರುವುದಾಗಿ ಹೇಳಲಾಗಿದೆ. ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ.
ಸುರೇಶ್ ಅವರ ಪುತ್ರಿ ರಕ್ಷಿತಾ ಸ್ಥಳೀಯ ಕನ್ನಡ ವಾಹಿನಿಗೆ ಪ್ರತಿಕ್ರಿಯಿಸಿ, “ಅಪ್ಪನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ತಲೆ ಊದಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ. ಮತ್ತೊಂದು ಶಸ್ತ್ರಚಿಕಿತ್ಸೆ ಬೇಕಾಗಬಹುದು ಎಂದಿದ್ದಾರೆ. ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದೇ ನಮಗೆ ಅರ್ಥವಾಗುತ್ತಿಲ್ಲ. ನಮಗೆ ನಮ್ಮ ತಂದೆ ಬೇಕು. ಇಂತಹ ಅಪಾಯಕಾರಿಯಾದ ಮರಗಳನ್ನು ಕೂಡಲೇ ತೆರವುಗೊಳಿಸಬೇಕು. ನಮ್ಮ ಕುಟುಂಬ ಅನುಭವಿಸುತ್ತಿರುವ ನೋವು ಮತ್ತೊಬ್ಬರಿಗೂ ಬರಬಾರದು,” ಎಂದು ಭಾವುಕರಾದರು.
‘ಹಲವು ಬಾರಿ ದೂರು ಕೊಟ್ಟರೂ ಕ್ರಮ ಕೈಗೊಳ್ಳಲಿಲ್ಲ’
ಸುರೇಶ್ ಕೆಲಸ ಮಾಡುತ್ತಿದ್ದ ಹಣಕಾಸು ಸಂಸ್ಥೆಯ ಮಾಲೀಕ ರಾಘವೇಂದ್ರ ಮಾತನಾಡಿ, ಕಳೆದ ಸುಮಾರು ಹತ್ತು ವರ್ಷಗಳಿಂದ ಸುರೇಶ್ ತಮ್ಮ ಸಂಸ್ಥೆಯಲ್ಲಿ ಫೀಲ್ಡ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.
ಘಟನೆ ನಡೆದ ಸ್ಥಳದಲ್ಲಿರುವ ಅಪಾಯಕಾರಿಯಾಗಿ ಒಣಗಿದ ಮರಗಳ ಬಗ್ಗೆ ಸ್ಥಳೀಯರು ಹಲವು ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸಿದರು.
“ಘಟನೆ ನಡೆದ ನಂತರ ಜಿಬಿಎ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕೆಲವು ಕೊಂಬೆಗಳನ್ನು ತೆರವು ಮಾಡಿದ್ದಾರೆ. ಆದರೆ ಈ ಕೆಲಸ ಮೊದಲೇ ಆಗಬೇಕಿತ್ತು. ಬೆಂಗಳೂರಿನ ಹಲವೆಡೆ ಇಂತಹ ಅಪಾಯಕಾರಿಯಾದ ಮರಗಳಿವೆ. ಯಾವಾಗ ಯಾರ ಮೇಲೆ ಬಿದ್ದು ಮತ್ತೊಂದು ಕುಟುಂಬವನ್ನು ಸಂಕಷ್ಟಕ್ಕೆ ತಳ್ಳುತ್ತವೆಯೋ ಗೊತ್ತಿಲ್ಲ,” ಎಂದು ಅವರು ಹೇಳಿದರು.
ಘಟನೆ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಸ್ಥಳೀಯರ ಪ್ರಕಾರ, ಘಟನೆ ಬಳಿಕ ಜಿಬಿಎ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಪಾಯಕಾರಿಯಾದ ಕೆಲವು ಕೊಂಬೆಗಳನ್ನು ತೆರವುಗೊಳಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ ಕುರಿತು ಸಂಬಂಧಪಟ್ಟ ಇಲಾಖೆಯ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಗಿದ್ದು, ಅದು ಇನ್ನಷ್ಟೇ ಲಭ್ಯವಾಗಬೇಕಿದೆ.