ಚಾಮರಾಜನಗರ: ಅಪ್ರಾಪ್ತಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಅಪರಾಧಿಗಳಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಹಾಗೂ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ, ತಲಾ 55 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ತಾಲೂಕಿನ ಆಲೂರು ಗ್ರಾಮದ ಮಹೇಶ್‌ಪ್ರಸಾದ್ (32) ಹಾಗೂ ವೆಂಕಟಯ್ಯನಛತ್ರ ಗ್ರಾಮದ ಸಿದ್ದಮಲ್ಲು (28) ಶಿಕ್ಷೆಗೊಳಗಾದ ಅಪರಾಧಿಗಳು.
2 ನೇ ಆರೋಪಿ ಸಿದ್ದಮಲ್ಲು ಸಂತ್ರಸ್ತ ಅಪ್ರಾಪ್ತೆಯನ್ನು ಮದುವೆ ಆಗುವುದಾಗಿ ನಂಬಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. 1ನೇ ಆರೋಪಿ ಮಹೇಶ್‌ಪ್ರಸಾದ್, ನೊಂದ ಬಾಲಕಿ ಪ್ರೀತಿ ಮಾಡುತ್ತಿರುವ ವಿಚಾರ ತನಗೆ ಗೊತ್ತಿದೆ. ಇದನ್ನು ಮನೆಯವರಿಗೆ ಹೇಳುತ್ತೇನೆ ಎಂದು ಬೆದರಿಸಿ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ಸಂಬಂಧ 2019ರ ಜೂನ್ ನಲ್ಲಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಕ್ಸೋ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ನ್ಯಾಯಾಧೀಶ ಎನ್. ಆರ್. ಲೋಕಪ್ಪ ಅವರು ಅಪರಾಧಿಗಳಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಕೆ. ಯೋಗೇಶ್ ವಾದಿಸಿದ್ದರು