ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್ ಗೋಡೆ ಪಕ್ಕದ ಒತ್ತುವರಿ ತೆರವು; ಕೆ.ಆರ್. ಮಾರುಕಟ್ಟೆ ಬಳಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಹಾ ಕಾರ್ಯಾಚರಣೆ
ಬೆಂಗಳೂರು: ಬುಧವಾರ ಕೆ.ಆರ್. ಮಾರುಕಟ್ಟೆ ಮುಂಭಾಗದ ಮೈಸೂರು ರಸ್ತೆಯಲ್ಲಿ, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ಒತ್ತುವರಿಗಳನ್ನು ತೆರವುಗೊಳಿಸುವ ಮಹತ್ವದ ಕಾರ್ಯಾಚರಣೆಯನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ನ್ಯಾಯಾಲಯದ ಆದೇಶದ ಮೇರೆಗೆ ಆರಂಭಿಸಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಒಟ್ಟು 150 ಅಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ.
ಕಾರ್ಯಾಚರಣೆಗೆ 6 ಜೆಸಿಬಿಗಳು, 4 ಹತ್ತು ಚಕ್ರದ ಲಾರಿಗಳು ಹಾಗೂ 10 ಟ್ರ್ಯಾಕ್ಟರ್ಗಳನ್ನು ನಿಯೋಜಿಸಲಾಗಿದೆ. ಜೊತೆಗೆ 60 ಎಂಜಿನಿಯರ್ಗಳು, 60 ಬಿಎಸ್ಡಬ್ಲ್ಯುಎಂಎಲ್ ಸಿಬ್ಬಂದಿ ಹಾಗೂ 20 ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಸ್ಥಳದಲ್ಲಿ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ಕೆಎಸ್ಆರ್ಪಿ ಸಿಬ್ಬಂದಿ, ವೈದ್ಯಕೀಯ ತಂಡ, ಆಂಬುಲೆನ್ಸ್ಗಳು ಹಾಗೂ ಬೆಸ್ಕಾಂ ಅಧಿಕಾರಿಗಳನ್ನು ನಿಯೋಜಿಸಿ ಅಗತ್ಯ ಭದ್ರತೆ ಮತ್ತು ತುರ್ತು ಸೇವೆಗಳನ್ನು ಕಲ್ಪಿಸಲಾಗಿದೆ.
ಅಭಿವೃದ್ಧಿ ವಿಭಾಗದ ಅಪರ ಆಯುಕ್ತ ವೆಂಕಟಾಚಲಪತಿ, ಜಂಟಿ ಆಯುಕ್ತ ಹೇಮಂತ್, ಮುಖ್ಯ ಎಂಜಿನಿಯರ್, ಚಾಮರಾಜಪೇಟೆ ಕಾರ್ಯಪಾಲಕ ಎಂಜಿನಿಯರ್, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಅಧಿಕಾರಿಗಳು, ಮಾರುಕಟ್ಟೆ ವಿಭಾಗದ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ನ್ಯಾಯಾಲಯದ ಆದೇಶದ ಅನುಸಾರ ಕೈಗೊಳ್ಳಲಾಗುತ್ತಿರುವ ಈ ಕಾರ್ಯಾಚರಣೆಯ ಉದ್ದೇಶ, ಕೆ.ಆರ್. ಮಾರುಕಟ್ಟೆ ಸಮೀಪ ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ಸಾರ್ವಜನಿಕ ಜಾಗವನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಸಂಚಾರ ಹಾಗೂ ಸಾರ್ವಜನಿಕ ಅನುಕೂಲತೆಗಳನ್ನು ಸುಧಾರಿಸುವುದಾಗಿದೆ.
