ವಿಜಯಪುರ ಟಿಕೋಟಾ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ: ಒಎಂಆರ್, ಪ್ರಶ್ನೆಪತ್ರಿಕೆ ಸೀರಿಯಲ್ ಸಂಖ್ಯೆ ಹೊಂದಿಕೆಯಾಗಬೇಕಿಲ್ಲ ಎಂದು ಕೆಇಎ ಸ್ಪಷ್ಟನೆ
ಬೆಂಗಳೂರು, ಆ. 2: ರಾಜ್ಯಾದ್ಯಂತ ಭಾನುವಾರ ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ವಿಜಯಪುರ ಜಿಲ್ಲೆಯ ಟಿಕೋಟಾ ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆಪತ್ರಿಕೆಯ ಸೀರಿಯಲ್ ಸಂಖ್ಯೆಗಳು ಹೊಂದಿಕೆಯಾಗಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೊಂದಲಕಾರಿ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟನೆ ನೀಡಿದೆ.
ಕೆಇಎ ಪ್ರಕಟಿಸಿರುವ ಸ್ಪಷ್ಟೀಕರಣದ ಪ್ರಕಾರ, ಪರೀಕ್ಷಾ ಕೇಂದ್ರದಲ್ಲಿ ಕೆಲವರು ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆಪತ್ರಿಕೆಯ ಸೀರಿಯಲ್ ಸಂಖ್ಯೆಗಳು ಒಂದೇ ಆಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಸ್ಪಷ್ಟನೆ ನೀಡಿ, ಒಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆಪತ್ರಿಕೆಯ ಸೀರಿಯಲ್ ಸಂಖ್ಯೆಗಳು ಒಂದೇ ಆಗಿರಬೇಕು ಅಥವಾ ಹೊಂದಿಕೆಯಾಗಬೇಕು ಎಂದು ಕೆಇಎ ಯಾವುದೇ ಅಧಿಸೂಚನೆ, ಸೂಚನೆ ಅಥವಾ ಪರೀಕ್ಷಾ ಮಾರ್ಗಸೂಚಿಯಲ್ಲಿ ಎಲ್ಲಿಯೂ ತಿಳಿಸಿಲ್ಲ ಎಂದು ಹೇಳಿದ್ದಾರೆ.
ಪ್ರಾಧಿಕಾರದ ಪ್ರಕಾರ, ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆಪತ್ರಿಕೆಗಳನ್ನು ಅಭ್ಯರ್ಥಿಗಳಿಗೆ ಒಂದೇ ಪರೀಕ್ಷಾ ಕಿಟ್ ರೂಪದಲ್ಲಿ ವಿತರಿಸಲಾಗುತ್ತದೆ. ಆದರೆ ಎರಡಕ್ಕೂ ಪ್ರತ್ಯೇಕ ಸೀರಿಯಲ್ ಸಂಖ್ಯೆಗಳಿರುತ್ತವೆ. ಆದ್ದರಿಂದ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆಪತ್ರಿಕೆಯ ಸೀರಿಯಲ್ ಸಂಖ್ಯೆಗಳು ಒಂದೇ ಆಗಿರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಹಾಗೂ ತಪ್ಪು ಮಾಹಿತಿಯನ್ನು ನಂಬಬಾರದು ಎಂದು ಕೆಇಎ ಅಭ್ಯರ್ಥಿಗಳು ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಅಧಿಕೃತ ಮಾಹಿತಿಗಾಗಿ ಪ್ರಾಧಿಕಾರದ ಪ್ರಕಟಣೆಗಳನ್ನು ಮಾತ್ರ ಅವಲಂಬಿಸುವಂತೆ ಸೂಚಿಸಿದೆ.
