Home ಬೆಂಗಳೂರು ನಗರ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಆರಂಭ

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕ ಆರಂಭ

55
0

ಎರಡು ವರ್ಷದಲ್ಲಿ ಕಸ ಸಂಸ್ಕರಣೆ ಪೂರ್ಣ: ಜೆ.ಸಿ.ಮಾಧುಸ್ವಾಮಿ

ಬೆಂಗಳೂರು:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಕ್ರಮ ಕೈಗೊಳ್ಳಲಾಗುತ್ತಿದ್ದು,ಮುಂದಿನ ಎರಡು ವರ್ಷದಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳನ್ನು ಆರಂಭಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಶ್ವಾಸನೆ ನೀಡಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎನ್.ಎ.ಹ್ಯಾರಿಸ್ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ ಅವರು,ಪ್ರತಿ ದಿನ ಸುಮಾರು ನಾಲ್ಕುವರೆ ಮೆಟ್ರಿಕ್ ಟನ್‌ನಷ್ಟು ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Screenshot 913

ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಖಾಯಂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಈ ಹಿಂದೆ ಮಧುಗಿರಿ ಮತ್ತು ಕನಕಪುರದಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ತ್ಯಾಜ್ಯಪುನರ್ ಬಳಕೆ ಪಾರ್ಕ್ ಸ್ಥಾಪನೆ ಮಾಡುವ ಸಂಬಂಧ ಪ್ರಸ್ತಾವನೆ ಇತ್ತು.ಆದರೆ,ಈ ಪ್ರದೇಶದಲ್ಲಿ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾಗಿರುವುದರಿಂದ ಸದ್ಯಕ್ಕೆ ಪ್ರಸ್ತಾವನೆಯನ್ನು ತಡೆಹಿಡಿಯಲಾಗಿದೆ.ಘನ್ಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಐದು ಕಂಪನಿಗಳಿಗೆ ಅನುಮೋದನೆ ನೀಡಲಾಗಿದೆ.ಈ ಪೈಕಿ ಎರಡು ಸಂಸ್ಥೆಗಳಿಂದ ಘಟಕಗಳ ಸಿದ್ದತಾ ಕಾರ್ಯ ನಡೆಯುತ್ತಿದ್ದು,ಮುಂದಿನ ಎರಡು ವರ್ಷದಲ್ಲಿ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಲಿವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕೆಪಿಸಿಎಲ್)ವತಿಯಿಂದ ಬಿಡದಿಯಲ್ಲಿ ಪ್ರತಿದಿನ ೬೦೦ಮೆಟ್ರಿಕ್ ಟನ್ ಸಾಮರ್ಥ್ಯದ ಘನತ್ಯಾಜ್ಯ ಉಪಯೋಗಿಸಿ ೧೧.೫೦ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಯೋಜನೆಯು ೨೬೦ ಕೋಟಿ ರು.ಗೆ ಅನುಮೋದನೆಗೊಂಡು ಕಾರ್ಯದೇಶನೀಡಲಾಗಿದೆ.ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸತಾರೆಂ ಎಂಟರ್‌ಪ್ರೈಸಸ್ ಪ್ರೈ.ಲಿ.ವತಿಯಿಂದ ಪ್ರತಿದಿನ ಒಂದು ಸಾವಿರ ಮೆಟ್ರಿಕ್ ಟನ್ ಮಿಶ್ರ ಘನತ್ಯಾಜ್ಯವನ್ನು ಉಪಯೋಗಿಸಿ, ೧೨ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಕನ್ನಲ್ಲಿ ಘಟಕದಲ್ಲಿ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.ಯೋಜನೆಯು ಮುಂದಿನ ೨ ವರ್ಷದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.ಇನ್ನು,ಪಿಪಿಪಿ ಮಾದರಿಯಲ್ಲಿ ಇಂಡಿಯಂ ಸಂಸ್ಥೆಯಿಂದ ೩೦೦ ಮೆಟ್ರಿಕ್ ಟನ್ ಪ್ರತಿದಿನ ಮಿಶ್ರ ಘನತ್ಯಾಜ್ಯವನ್ನು ಉಪಯೋಗಿಸಿ ೪ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಘಟಕವನ್ನು ದೊಡ್ಡಬಿದರಕಲ್ಲು ಘಟಕದಲ್ಲಿ ಸ್ಥಾಪಿಸಲು ಸರ್ಕಾರವು ಅನುಮೋದನೆ ನೀಡಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಪಿಪಿಪಿ ಮಾದರಿಯಲ್ಲಿ ಮಾವಳ್ಳಿಪುರ ಘಟಕದಲ್ಲಿ ಫರ್ಮ್‌ಗ್ರೀನ್ ಸಂಸ್ಥೆಯಿಂದ ಪ್ರತಿದಿನ ಒಂದು ಸಾವಿರ ಮೆಟ್ರಿಕ್ ಟನ್ ಘನತ್ಯಾಜ್ಯ ಉಪಯೋಗಿಸಿ ಸಂಕುಚಿತ ನೈಸರ್ಗಿಕ ಅನಿಲ ಉತ್ಪಾದನೆ ಮಾಡಲು ಸರ್ಕಾರವು ಅನುಮೋದನೆ ನೀಡಿದೆ. ಅಂತೆಯೇ ಇನ್ನಿತರೆ ಎರಡು ಯೋಜನೆಗಳಾದ ಮಾರೇನಹಳ್ಳಿ ಸ್ಥಳದಲ್ಲಿ ೬೦೦ ಮೆಟ್ರಿಕ್ ಟನ್ ಪ್ರತಿದಿನ ಘನತ್ಯಾಜ್ಯ ದಿಂದ ವಿದ್ಯುತ್ ಉತ್ಪಾದನೆ ಮಾಡಲು ನೆಕ್ಸಸ್ ನೋವಸ್ ಸಂಸ್ಥೆಯವರಿಗೆ ಒಪ್ಪಂದ ಮಾಡಿಕೊಳ್ಳಲು ಕ್ರಮ ಕೈಗೊಳ್ಳ ಲಾಗುತ್ತಿದೆ. ಎನ್‌ಇಜಿ ಸಂಸ್ಥೆಯವರಿಂದ ಮಾವಳ್ಳಿಪುರ ಘಟಕದಲ್ಲಿ ೫೦೦ ಮೆಟ್ರಿಕ್ ಟನ್ ಪ್ರತಿದಿನ ಘನತ್ಯಾಜ್ಯವನ್ನು ಉಪಯೋಗಿಸಿ ೮ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here