ಜಾರಕಿಹೊಳಿ ಅವರೇ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ ಯುವತಿ
ಬೆಂಗಳೂರು:
ಮಾಜಿ ಸಚಿವ ರಮೇಶ್ ಜಾರಕಿಹೋಳಿ ಅವರ ರಾಸಲೀಲೆ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಡಿಯೋದಲ್ಲಿ ಯುವತಿ ಮೊದಲ ಬಾರಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ಅವರೇ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕೊನೆಗೂ ಸಿಡಿ ಬಿಡುಗಡೆಯಾದ 12 ದಿನಗಳ ನಂತರ ಪ್ರತ್ಯಕ್ಷವಾಗಿರುವ ಯುವತಿ, ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸಕೊಡಿಸುವುದಾಗಿ ಹೇಳಿ ನಂಬಿಸಿ ವಂಚಿಸಿದ್ದಾರೆ. ಆದರೆ ಈ ವಿಡಿಯೋದಿಂದಾಗಿ ನನ್ನ ಮಾನ ಹರಾಜಾಗಿದೆ. ನನಗೆ ಯಾವುದೇ ರಾಜಕೀಯ ನಾಯಕರ ಬೆಂಬಲ ಇಲ್ಲ ಎಂದು ಹೇಳಿದ್ದಾರೆ.
ಈ ವಿಡಿಯೋ ಹೇಗೆ ಮಾಡಿದರು ಅಂತ ನನಗೆ ಗೊತ್ತಿಲ್ಲ. ರಮೇಶ್ ಜಾರಿಕಿಹೊಳಿ ಅವರೇ ಸಿಡಿ ಬಿಡುಗಡೆ ಮಾಡಿದ್ದಾರೆ. ಇದರಿಂದ ನನ್ನ ತಂದೆ, ತಾಯಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನೂ ಕೂಡ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಯುವತಿ ಮನವಿ ಮಾಡಿದ್ದಾರೆ.
ಅಜ್ಞಾತ ಸ್ಥಳದಿಂದ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ಅವರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇನ್ನು ಯುವತಿ ವಿಡಿಯೋ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ ಅವರು, ಆ ಯುವತಿ ಸಂಚುಕೋರರ ಕೈಗೊಂಬೆಯಾಗಿದ್ದಾಳೆ. ಇದು ಸಹ ಷಡ್ಯಂತ್ರದ ಒಂದು ಭಾಗ ಎಂದಿದ್ದಾರೆ.
ರಾಸಲೀಲೆ ಪ್ರಕರಣದಲ್ಲಿ ತಮಗೆ ಬ್ಯ್ಯಾಕ್ ಮೇಲ್ ಮಾಡಲಾಗಿದೆ ಎಂದು ಆರೋಪಿಸಿ ರಮೇಶ್ ಜಾರಕಿಹೊಳಿ ಅವರು ಇಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಕಾನೂನು ತಜ್ಞರು, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ ನಂತರ ರಮೇಶ್ ಜಾರಕಿಹೊಳಿ ಅಧಿಕೃತವಾಗಿ ದೂರು ನೀಡಿದ್ದಾರೆ.
ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೋಳಿ ತಮ್ಮ ಆಪ್ತ ಎಂ ವಿ ನಾಗರಾಜ್ ಮೂಲಕ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.