ಮಳೆ ಅವಾಂತರದ ಬಳಿಕ ಬೆಂಗಳೂರಿನಲ್ಲಿ ಅಪಾಯಕಾರಿ ಮರಗಳ ತೆರವು ಕಾರ್ಯ ತೀವ್ರಗೊಳಿಸಿದ ಕೇಂದ್ರ ನಗರ ಪಾಲಿಕೆ
ಬೆಂಗಳೂರು, ಮೇ 23: ಇತ್ತೀಚಿನ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ನಗರದಲ್ಲಿ ಉಂಟಾದ ಮರ ಉರುಳುವ ಘಟನೆಗಳ ಹಿನ್ನೆಲೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಅಪಾಯಕಾರಿ ಮರಗಳು ಹಾಗೂ ಕೊಂಬೆಗಳ ತೆರವು ಕಾರ್ಯವನ್ನು ತೀವ್ರಗೊಳಿಸಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರ ಕಟ್ಟುನಿಟ್ಟಿನ ಸೂಚನೆಯಂತೆ ನಗರದ ವಿವಿಧ ಭಾಗಗಳಲ್ಲಿ ಅಪಾಯಕಾರಿ ಮರಗಳು, ಮಳೆಯಿಂದ ದುರ್ಬಲಗೊಂಡ ಮರಗಳು ಹಾಗೂ ಉರುಳಿದ ಕೊಂಬೆಗಳ ತೆರವು ಕಾರ್ಯವನ್ನು ವೇಗವಾಗಿ ಕೈಗೊಳ್ಳಲಾಗಿದೆ.
ಪಾಲಿಕೆ ಮಾಹಿತಿ ಪ್ರಕಾರ, ಏಪ್ರಿಲ್ 29, 2026ರಿಂದ ಇಂದಿನವರೆಗೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 260 ಮರಗಳು ಹಾಗೂ 761 ಕೊಂಬೆಗಳು ಉರುಳಿವೆ. ಬಹುತೇಕ ಸ್ಥಳಗಳಲ್ಲಿ ತೆರವು ಕಾರ್ಯ ಪೂರ್ಣಗೊಂಡಿದ್ದು, ಕೆಲವೆಡೆ ಮಾತ್ರ ಇನ್ನೂ ಕಾರ್ಯ ಮುಂದುವರಿದಿದೆ.
ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಪಾಯಕಾರಿ ಮರಗಳು ಹಾಗೂ ಗಾಳಿ-ಮಳೆಗೆ ಉರುಳುವ ಸಾಧ್ಯತೆ ಇರುವ ಮರಗಳ ತೆರವಿಗೆ ಆದ್ಯತೆ ನೀಡಲಾಗಿದೆ ಎಂದು ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಮರ ತೆರವು ಕಾರ್ಯಕ್ಕಾಗಿ ಅಗತ್ಯ ಯಂತ್ರೋಪಕರಣಗಳು, ಕ್ರೇನ್ಗಳು ಹಾಗೂ ಪರಿಣತಿ ಹೊಂದಿದ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮಳೆಯಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.
ಕಳೆದ ಮೂರು ದಿನಗಳಲ್ಲಿ ರಾಜಭವನ್ ರಸ್ತೆ, ಎಂಎಸ್ ಬಿಲ್ಡಿಂಗ್ ಸುತ್ತಮುತ್ತ, ಇಂದಿರಾನಗರದ ಸಿಎಂಎಚ್ ರಸ್ತೆ, 100 ಅಡಿ ರಸ್ತೆ, ಡಿಫೆನ್ಸ್ ಕಾಲೋನಿ, ಶ್ರೀರಾಮ ದೇವಸ್ಥಾನ ರಸ್ತೆಯ ಅಯ್ಯಪ್ಪ ದೇವಸ್ಥಾನದ ಬಳಿ, ಈಶ್ವರ ಲೇಔಟ್, HAL ಫೇಸ್-1, ಫೇಸ್-2 ಹಾಗೂ ಫೇಸ್-3 ಪ್ರದೇಶಗಳು, ಹಲಸೂರು, ಬ್ರಿಗೇಡ್ ರಸ್ತೆ, ದೊಮ್ಮಲೂರು, ರಾಮಸ್ವಾಮಿ ಪಾಳ್ಯ, ಪಿಳ್ಳಪ್ಪ ಗಾರ್ಡನ್, ಗೋರಿಪಾಳ್ಯ, ಅಶೋಕನಗರ, ನ್ಯೂ ತಿಪ್ಪಸಂದ್ರ, LIC ಕಾಲೋನಿ, ಜೀವನ್ ಭೀಮಾನಗರ, ವಿವೇಕನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ ಹಾಗೂ ಬಸವನಗುಡಿ ಪೊಲೀಸ್ ಠಾಣೆ ರಸ್ತೆಯಲ್ಲಿ ಮರ ಮತ್ತು ಕೊಂಬೆಗಳ ತೆರವು ಕಾರ್ಯ ಕೈಗೊಳ್ಳಲಾಗಿದೆ.
ನಗರದ ಇನ್ನೂ ಹಲವು ಭಾಗಗಳಲ್ಲಿಯೂ ಇದೇ ರೀತಿಯ ಕಾರ್ಯಾಚರಣೆ ಮುಂದುವರಿದಿದ್ದು, ಮಳೆಗಾಲದ ಅವಾಂತರಗಳ ನಡುವೆಯೂ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಪಾಲಿಕೆ ಆದ್ಯತೆ ನೀಡಿದೆ.
ಅಪಾಯಕಾರಿ ರೀತಿಯಲ್ಲಿ ವಾಲಿರುವ ಮರಗಳು ಅಥವಾ ಮುರಿಯುವ ಸ್ಥಿತಿಯಲ್ಲಿರುವ ಕೊಂಬೆಗಳು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ.
