ಬೆಂಗಳೂರು:
ಲೋಕಸಭಾ ಚುನಾವಣೆ ಬಿಜೆಪಿಗೆ ದೊಡ್ಡ ಸವಾಲಲ್ಲ. ನಾವು ಗರಿಷ್ಠ ಸ್ಥಾನದೊಂದಿಗೆ ಗೆಲ್ಲಲಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಎದ್ದು ಕುಳಿತಿದೆ. ಆದ್ದರಿಂದ ರಾಜ್ಯದ ವಿಧಾನಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕಿದೆ. ಇದಕ್ಕಾಗಿ ಬೂತ್‍ಗಳಲ್ಲಿ ಸಂಘಟನೆ ಬಲಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ದಾವಣಗೆರೆಯಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ಉದ್ಘಾಟನಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಕೆಲಸ ಕಾರ್ಯಗಳ ಮೂಲಕ ನಾವು ಗೆಲ್ಲಬೇಕಿದೆ. ಆದರೆ, ಗೆಲುವಿನ ಭ್ರಮೆಯಲ್ಲಿ ಇರುವುದು ಬೇಡ ಎಂದು ಕಿವಿಮಾತು ಹೇಳಿದರು.
ಜನರಿಗೆ ಸ್ಪಂದಿಸಿ ನಿರಂತರ ಬೆಳವಣಿಗೆ ಸಾಧಿಸಿದ ಪಕ್ಷ ಬಿಜೆಪಿ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ, ರಾಜ್ಯ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿವೆ. ಮೋದಿ ಯುಗ ಉತ್ಸವ ಕಾರ್ಯಕ್ರಮ ವಿನೂತನವಾಗಿ ಎಲ್ಲೆಡೆ ನಡೆದಿದೆ ಎಂದರು.
ಒಂದು ತಿಂಗಳ ಕಾಲ ನಿರಂತರ ಪ್ರವಾಸ ಮಾಡಿ ಸಂಘಟನೆ ಬಲಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಒಂದಲ್ಲ ಒಂದು ಚುನಾವಣೆ ನಡೆಯಲಿದೆ. ಎಲ್ಲ ಚುನಾವಣೆಗಳಲ್ಲೂ ಯಶಸ್ಸು ಅಗತ್ಯ. ಪ್ರತಿಪಕ್ಷಗಳನ್ನು ಹಗುರವಾಗಿ ತೆಗೆದುಕೊಳ್ಳದಿರಿ. ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಮುಖಂಡರು ಸಂಪರ್ಕಿಸುತ್ತಿದ್ದಾರೆ. ಇದು ಗಮನದಲ್ಲಿರಲಿ ಎಂದು ತಿಳಿಸಿದರು.
Yediyurappa cautions party workers against taking opposition lightlyhttps://t.co/rgQtW4ZqVs#Davangere #Bangalore #Bengaluru #Karnataka #Yediyurappa @BSYBJP @BJP4Karnataka @BJP4India #BSyediyurappa #KarnatakaPolitics pic.twitter.com/cPd8ON7PV4
— Thebengalurulive/ಬೆಂಗಳೂರು ಲೈವ್ (@bengalurulive_) September 19, 2021
ರಾಜ್ಯದಲ್ಲಿ 140ಕ್ಕೂ ಹೆಚ್ಚು ಶಾಸಕರ ಸ್ಥಾನ ಗೆದ್ದು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಎಲ್ಲ ವರ್ಗದ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೆಜ್ಜೆ ಇಡಬೇಕು ಎಂದರು.
ಪಕ್ಷದ ಗೆಲುವಿನ ದೃಷ್ಟಿಯಿಂದ ಮಹಿಳೆಯರ, ಯುವಕರ ತಂಡಗಳನ್ನು ರಚಿಸಬೇಕು. ಕೇಂದ್ರ, ರಾಜ್ಯದ ಸರಕಾರಗಳ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಗೆಲುವಿನತ್ತ ಮುನ್ನಡೆಯೋಣ ಎಂದು ಸಲಹೆ ನೀಡಿದರು. ಎಲ್ಲ ಜನಪ್ರತಿನಿಧಿಗಳು, ಮುಖಂಡರ ಜೊತೆಗೂಡಿ ರಾಜ್ಯ ಪ್ರವಾಸ ಮಾಡುತ್ತೇನೆ. ನಾನೊಬ್ಬನೇ ಅಲ್ಲ ಎಂದು ಅವರು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‍ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ನೆರವೇರಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯದ ಉಸ್ತುವಾರಿಗಳಾದ ಶ್ರೀ ಅರುಣ್ ಸಿಂಗ್, ರಾಜ್ಯದ ಸಹ ಉಸ್ತುವಾರಿಗಳಾದ ಶ್ರೀಮತಿ ಬಿ.ಕೆ.ಅರುಣಾ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್, ಶ್ರೀ ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಷಿ, ಶ್ರೀ ಭಗವಂತ್ ಖೂಬಾ, ಶ್ರೀ ನಾರಾಯಣಸ್ವಾಮಿ, ಕು. ಶೋಭಾ ಕರಂದ್ಲಾಜೆ, ಸಂಸದ ಶ್ರೀ ಸಿದ್ದೇಶ್ವರ್, ಪಕ್ಷದ ಜನಪ್ರತಿನಿಧಿಗಳು, ಆಹ್ವಾನಿತರು ಭಾಗವಹಿಸಿದ್ದರು.
Also Read: Yediyurappa cautions party workers against taking opposition lightly