ಅಂಗನವಾಡಿ ಕಟ್ಟಡದ ಬಾಡಿಗೆ ಪಾವತಿಸಲು ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ಚಿನ್ನಾಭರಣ ಮತ್ತು ಪೀಠೋಪಕರಣಗಳನ್ನು ಒತ್ತೆ ಇಟ್ಟಿರುವ ಬೆಳವಣಿಗೆಗಳು ಬಳ್ಳಾರಿ ಜಿಲ್ಲೆಯಲ್ಲಿ ಕಂಡು ಬಂದಿದೆ. ಬಳ್ಳಾರಿ: ಅಂಗನವಾಡಿ ಕಟ್ಟಡದ ಬಾಡಿಗೆ ಪಾವತಿಸಲು ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ಚಿನ್ನಾಭರಣ ಮತ್ತು ಪೀಠೋಪಕರಣಗಳನ್ನು ಒತ್ತೆ ಇಟ್ಟಿರುವ ಬೆಳವಣಿಗೆಗಳು ಬಳ್ಳಾರಿ ಜಿಲ್ಲೆಯಲ್ಲಿ ಕಂಡು ಬಂದಿದೆ.
”ಹಲವು ತಿಂಗಳಿನಿಂದ ಬಾಡಿಗೆ ಬಾಕಿ ಇರುವ ಕಾರಣ ಕಟ್ಟಡದ ಮಾಲೀಕರು ಅಂಗನವಾಡಿಯನ್ನು ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಬಹುತೇಕ ಅಂಗನವಾಡಿಗಳು ವಿದ್ಯುತ್ ಬಿಲ್ ಹೊರತುಪಡಿಸಿ 4 ಸಾವಿರ ರೂ.ಬಾಡಿಗೆಯನ್ನು ಸಾಮಾನ್ಯವಾಗಿ ಪಾವತಿಸುತ್ತವೆ. ಹೀಗಾಗಿ 20,000 ರೂಪಾಯಿ ಪಡೆಯಲು ಚಿನ್ನವನ್ನು ಒತ್ತೆ ಇಟ್ಟು ಬಾಡಿಗೆ ಕಟ್ಟಬೇಕಾಯಿತು. ಅಂಗನವಾಡಿಗಳಿಗೆ ಸರ್ಕಾರವು ಹಣವನ್ನು ಬಿಡುಗಡೆ ಮಾಡದ ಕಾರಣ ನಮ್ಮ ವೇತನದಿಂದ ಬಾಡಿಗೆ ಪಾವತಿಸುವಂತಾಗಿದೆ ಎಂದು ಬಳ್ಳಾರಿಯ ಅಂಗನವಾಡಿ ಶಿಕ್ಷಕಿ ನೇತ್ರಾವತಿ (ಹೆಸರು ಬದಲಿಸಲಾಗಿದೆ) ಎಂದು ಹೇಳಿದ್ದಾರೆ.
ಬಳ್ಳಾರಿಯ ಬಿಸರಹಳ್ಳಿಯ ಮತ್ತೋರ್ವ ಅಂಗನವಾಡಿ ಶಿಕ್ಷಕಿ ಮಾತನಾಡಿ, ಬಾಡಿಗೆ ಬಾಕಿ ಇದ್ದರೆ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. “ಆದರೆ, ಸರ್ಕಾರಿ ಭೂಮಿ ಹೇಗೆ ಸಿಗುತ್ತದೆ? ಸರ್ಕಾರವು ಸ್ಥಳೀಯವಾಗಿ ಹೊಸ ಕಟ್ಟಡಗಳು ಸಿಗುವಂತೆ ಮಾಡಬೇಕು ಅಥವಾ ಬಾಡಿಗೆ ಹಣವನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಕಟ್ಟಡ ಬಾಡಿಗೆಗಳ ಕುರಿತು ಜಿಲ್ಲಾಡಳಿದ ಮಂಡಳಿಗೆ ಪತ್ರ ಬರೆಯಲಾಗಿದೆ. ಆದರೆ, ಅವರು ಹಣವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತೇವೆಂದು ಬಳ್ಳಾರಿಯ ಅಂಗನವಾಡಿ ಶಿಕ್ಷಕರ ಸಂಘದ ಮುಖಂಡ ಸತ್ಯಬಾಬು ಜೆ ಅವರು ಹೇಳಿದ್ದಾರೆ.
ಜಿಲ್ಲೆಯ 1,358 ಅಂಗನವಾಡಿಗಳಲ್ಲಿ ಬಹುತೇಕ ಅಂಗನವಾಡಿಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಆಡಳಿತಾಧಿಕಾರಿಗಳು ಮಾತನಾಡಿ, ರಾಜ್ಯ ಸರ್ಕಾರ ಇನ್ನೂ ಬಿಲ್‌ಗಳನ್ನು ತೆರವುಗೊಳಿಸಿಲ್ಲ ಎಂದು ಹೇಳಿದ್ದಾರೆ.