ಈ ಬಾರಿ ದುಂದುವೆಚ್ಚಗಳಿಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಸೋಮವಾರ ಹೇಳಿದರು. ಮೈಸೂರು: ಈ ಬಾರಿ ದುಂದುವೆಚ್ಚಗಳಿಲ್ಲದ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಸೋಮವಾರ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಸೋಮವಾರ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆ ಬಳಿಕ ಮಾಹಿತಿ ನೀಡಿದ ಸಚಿವರು, ಸೆಪ್ಟೆಂಬರ್ 1ರಂದು ವೀರನಹೊಸಹಳ್ಳಿಯಿಂದ ಮೈಸೂರಿಗೆ ಗಜಪಡೆ ಪ್ರಯಾಣ ಆರಂಭ ಆಗಲಿದ್ದು, ಅಲ್ಲಿಂದ ದಸರಾ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ. ಏರ್‌ಷೋ ಆಯೋಜನೆಗೆ ರಕ್ಷಣಾ ಸಚಿವರು ಒಪ್ಪಿದ್ದಾರೆ ಎಂದು ಹೇಳಿದರು.
‘ಇಡೀ ನಗರಕ್ಕೆ ವಿದ್ಯುತ್ ದೀಪಗಳ ಅಲಂಕಾರದ ಜೊತೆಗೆ ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಗಳೂ ಇರಲಿವೆ. ಸುಮಾರು ರೂ.30 ಕೋಟಿ ಅನುದಾನದ ನಿರೀಕ್ಷೆ ಇದೆ. ಶ್ರೀರಂಗಪಟ್ಟಣ, ಚಾಮರಾಜನಗರ ದಸರಾಗೆ ರೂ.1 ಕೋಟಿ ನೀಡುತ್ತಿದ್ದು, ಹೆಚ್ಚುವರಿಯಾಗಿ ರೂ.1 ಕೋಟಿ ಹಾಗೂ ಗ್ರಾಮೀಣ ದಸರಾಕ್ಕೆ ಪ್ರತಿ ತಾಲ್ಲೂಕಿಗೆ ತಲಾ ರೂ.10 ಲಕ್ಷ ಅನುದಾನಕ್ಕೆ ಶಾಸಕರು ಬೇಡಿಕೆ ಸಲ್ಲಿಸಿದ್ದಾರೆ. ಎಲ್ಲವನ್ನೂ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
‘ದಸರಾ ಆಚರಣೆ ಸಂಬಂಧ 16 ಸಮಿತಿಗಳನ್ನು ರಚಿಸಲಾಗುವುದು. ದಸರಾ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ‘ಬ್ರಾಂಡಿಂಗ್ ಮೈಸೂರು’ ಸ್ಪರ್ಧೆ ಆಯೋಜಿಸಿದೆ. ಆಸಕ್ತರು ಮೈಸೂರಿಗೆ ಸಂಬಂಧಿಸಿ ಲೊಗೊ, ಟ್ಯಾಗ್ ಲೈನ್ ರಚನೆ, ಆಕರ್ಷಕ ಕೈಪಿಡಿ, ಮೈಸೂರಿನಲ್ಲಿ ತಮ್ಮ ನೆಚ್ಚಿನ ಸ್ಥಳ ಇಲ್ಲವೇ ಚಟುವಟಿಕೆಯನ್ನು ವಿವರಿಸುವ ಬರಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು competitions@karnatakatourism.org ಗೆ ಇ–ಮೇಲ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.