ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ಆಗಸ್ಟ್ 16 ರಂದು ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಯೋಜನೆ ಜಾರಿಗೊಳಿಸಲು ಎಲ್ಲಾ ವಾರ್ಡ್ ಕಚೇರಿಗಳಲ್ಲಿ ನೋಂದಣಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ಆಗಸ್ಟ್ 16 ರಂದು ಜಾರಿಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಯೋಜನೆ ಜಾರಿಗೊಳಿಸಲು ಎಲ್ಲಾ ವಾರ್ಡ್ ಕಚೇರಿಗಳಲ್ಲಿ ನೋಂದಣಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.
ವರ್ಚ್ಯುಯಲ್ ಸಭೆಯಲ್ಲಿ ವಲಯ ಆಯುಕ್ತರೊಂದಿಗೆ ಮಾತುಕತೆ ನಡೆಸಿದ ಅವರು, ಪಾಲಿಕೆಯ ಎಲ್ಲಾ ವಾರ್ಡ್ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆದು ‘ಗೃಹಲಕ್ಷ್ಮಿ’ ಯೋಜನೆ ಫಲಾನುಭವಿಗಳು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ವಲಯ ಮಟ್ಟದ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೊತೆ ಸಮನ್ವಯ ಸಾಧಿಸಬೇಕು. ಇದಕ್ಕಾಗಿ ಕಂದಾಯ ವಿಭಾಗದ ಉಪ ಆಯುಕ್ತರಾದ ಲಕ್ಷ್ಮೀದೇವಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಹೇಳಿದರು.
ಯೋಜನೆಗೆ ಅರ್ಜಿ ಸಲ್ಲಿಸುವ ಸಂಬಂಧ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಆನ್‌ಲೈನ್ ಮೂಲಕ ಅರ್ಜಿ ನೋಂದಾಯಿಸಿಕೊಳ್ಳುವ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲು ತರಬೇತಿ ನೀಡಬೇಕು ಎಂದು ಸೂಚಿಸಿದರು.
ಪ್ರತಿ ವಾರ್ಡ್ ಕಚೇರಿ ಮುಂಭಾಗವೂ ‘ಗೃಹಲಕ್ಷ್ಮಿ’ ಯೋಜನೆ ನೋಂದಣಿ ಕೇಂದ್ರ ಎಂಬ ಬ್ಯಾನರ್ ಅಳವಡಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಡಿಯೊ, ವಿಡಿಯೊ ಕ್ಲಿಪ್ಸ್ ಪಡೆದು ನಗರದ ಜನದಟ್ಟಣೆ ಪ್ರದೇಶ, ಕೊಳೆಗೇರಿಗಳಲ್ಲಿ ಹೆಚ್ಚಿನ ಪ್ರಚಾರ ನೀಡಬೇಕು. ಎಲ್ಲ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.
ಅಲ್ಲದೆ, ವಾರ್ಡ್ ಕಚೇರಿಗಳಲ್ಲಿ ಸಹಾಯ ಕೇಂದ್ರಗಳ ವಿಳಾಸ, ಇತರೆ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.