ಬೆಂಗಳೂರು ಪೊಲೀಸ್ ಆಯುಕ್ತರೊಂದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಭೆ; ಸಂಚಾರ ದಟ್ಟಣೆ ನಿಯಂತ್ರಣ, ಸೈಬರ್ ಅಪರಾಧ ತಡೆ ಹಾಗೂ ಡ್ರಗ್ಸ್ ಮುಕ್ತ ನಗರಕ್ಕೆ ಒತ್ತು
ಬೆಂಗಳೂರು, ಜೂನ್ 10: ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ವಿಸ್ತೃತ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ, ಮಹಿಳಾ ಸುರಕ್ಷತೆ, ಸೈಬರ್ ಅಪರಾಧ ನಿಯಂತ್ರಣ, ಸಂಚಾರ ದಟ್ಟಣೆ ನಿರ್ವಹಣೆ ಹಾಗೂ ಮಾದಕ ದ್ರವ್ಯ ಜಾಲದ ವಿರುದ್ಧ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ನಗರದ ವೇಗವಾದ ಬೆಳವಣಿಗೆಗೆ ಅನುಗುಣವಾಗಿ ಎದುರಾಗುತ್ತಿರುವ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಂಚಾರ ದಟ್ಟಣೆ ನಿಯಂತ್ರಣಕ್ಕೆ ‘ಬೆಂಗಳೂರು ಅರ್ಬನ್ ಮೊಬಿಲಿಟಿ ಮಿಷನ್’
ಬೆಂಗಳೂರು ನಗರದ ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಸಂಚಾರ ದಟ್ಟಣೆಯನ್ನು ಕೇವಲ ರಸ್ತೆ ವಿಸ್ತರಣೆ ಅಥವಾ ಮೂಲಸೌಕರ್ಯ ಅಭಿವೃದ್ಧಿಯಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ವ್ಯವಸ್ಥೆಯಲ್ಲಿರುವ ಮೂಲಭೂತ ಲೋಪದೋಷಗಳನ್ನು ಸರಿಪಡಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ಬಿಎಂಟಿಸಿ (BMTC), ಬಿಎಂಆರ್ಸಿಎಲ್ (BMRCL) ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ ‘ಬೆಂಗಳೂರು ಅರ್ಬನ್ ಮೊಬಿಲಿಟಿ ಮಿಷನ್’ ರಚಿಸಲು ತೀರ್ಮಾನಿಸಲಾಗಿದೆ.
ಮುಂದಿನ ಎರಡು ರಿಂದ ಮೂರು ದಿನಗಳೊಳಗೆ ಈ ಯೋಜನೆಯ ಸಂಪೂರ್ಣ ನೀಲನಕ್ಷೆ (Blueprint) ಬಿಡುಗಡೆ ಮಾಡಲಾಗುವುದು. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಸಮನ್ವಯ, ತಂತ್ರಜ್ಞಾನ ಆಧಾರಿತ ಟ್ರಾಫಿಕ್ ನಿರ್ವಹಣೆ ಹಾಗೂ ಪ್ರಯಾಣ ಸಮಯ ಕಡಿತಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.
ರೌಡಿಸಂ ವಿರುದ್ಧ ಕಠಿಣ ಕ್ರಮ
ನಗರದಲ್ಲಿ ರೌಡಿಸಂ ಮತ್ತು ಸಂಘಟಿತ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಆಂಟಿ ರೌಡಿ ಸ್ಕ್ವಾಡ್ ರಚಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಕೆಳ ಹಂತದ ಪೊಲೀಸ್ ಅಧಿಕಾರಿಗಳು ರೌಡಿಗಳ ಜನ್ಮದಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಅವರೊಂದಿಗೆ ಊಟ ಮಾಡುವುದು, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಅಥವಾ ಸೆಲ್ಫಿ ತೆಗೆದುಕೊಳ್ಳುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇಂತಹ ಘಟನೆಗಳು ಕಂಡುಬಂದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೈಬರ್ ಅಪರಾಧಗಳ ವಿರುದ್ಧ ಖಾಸಗಿ ವಲಯದ ಸಹಭಾಗಿತ್ವ
ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿದೊಡ್ಡ ತಂತ್ರಜ್ಞಾನ ಕೇಂದ್ರವಾಗಿ ಬೆಳೆದಿರುವ ಬೆಂಗಳೂರಿನಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಮಗ್ರ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.
ಗೃಹ ಇಲಾಖೆ, ಐಟಿ-ಬಿಟಿ ಇಲಾಖೆ ಹಾಗೂ ಇ-ಆಡಳಿತ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಸೈಬರ್ ಅಪರಾಧ ನಿಯಂತ್ರಣಕ್ಕೆ ವಿಶೇಷ ನೀತಿ ರೂಪಿಸಲಾಗುವುದು.
ಮುಂದಿನ ವಾರ ಪ್ರಮುಖ ಖಾಸಗಿ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅತ್ಯಾಧುನಿಕ ತಂತ್ರಜ್ಞಾನ, ಡಿಜಿಟಲ್ ಸುರಕ್ಷತಾ ವ್ಯವಸ್ಥೆಗಳು ಹಾಗೂ ‘ಸೇಫ್ಟಿ ಗಾರ್ಡ್ ರೈಲ್ಸ್’ ಅಳವಡಿಸಿಕೊಳ್ಳುವ ಕುರಿತು ಚರ್ಚಿಸಲಾಗುವುದು.
ಸೈಬರ್ ವಂಚನೆ, ಡಿಜಿಟಲ್ ಗುರುತು ಕಳವು ಹಾಗೂ ಆನ್ಲೈನ್ ಹಣಕಾಸು ಅಪರಾಧಗಳನ್ನು ತಡೆಗಟ್ಟಲು ಸುಧಾರಿತ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರಗ್ಸ್ ಮುಕ್ತ ಬೆಂಗಳೂರಿಗೆ ಸಮರ
ಬೆಂಗಳೂರು ನಗರವನ್ನು ಮಾದಕ ದ್ರವ್ಯ ಮುಕ್ತ ನಗರವನ್ನಾಗಿ ರೂಪಿಸಲು ಗೃಹ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ ಎಂದು ಸಚಿವರು ಹೇಳಿದರು.
ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿದಂತೆ ನೆರೆ ರಾಜ್ಯಗಳಿಂದ ಸಣ್ಣ ಪ್ರಮಾಣದಲ್ಲಿ ಸಾಗಾಟವಾಗುವ ಮಾದಕ ಮಾತ್ರೆಗಳು ಹಾಗೂ ಸೈಕೋಟ್ರೋಪಿಕ್ ಪದಾರ್ಥಗಳನ್ನು ಪತ್ತೆಹಚ್ಚಲು ಗಡಿಭಾಗಗಳಲ್ಲಿ ಹೆಚ್ಚುವರಿ ಟೆಸ್ಟಿಂಗ್ ಕಿಟ್ಗಳನ್ನು ಒದಗಿಸಲಾಗುವುದು.
ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ವಿರುದ್ಧ ಕ್ರಮ ಕೈಗೊಂಡು, ಅವರ ಗಡಿಪಾರು (ಡಿಪೋರ್ಟೇಶನ್) ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗುವುದು.
ಜಾಗತಿಕ ಮಟ್ಟದಲ್ಲಿ ಅನುಸರಿಸಲಾಗುತ್ತಿರುವ ಅತ್ಯುತ್ತಮ ಮಾದರಿಗಳನ್ನು ಅಧ್ಯಯನ ಮಾಡಿ ಮುಂದಿನ ಎರಡು ವಾರಗಳಲ್ಲಿ ಸಮಗ್ರ ನೀಲನಕ್ಷೆ ಸಿದ್ಧಪಡಿಸುವುದಾಗಿ ಸಚಿವರು ತಿಳಿಸಿದರು.
ಚಾರ್ಜ್ಶೀಟ್ ಸಲ್ಲಿಕೆಯಲ್ಲಿ ವಿಳಂಬಕ್ಕೆ ಬ್ರೇಕ್
ಪ್ರಕರಣ ದಾಖಲಾದ ನಂತರ ಚಾರ್ಜ್ಶೀಟ್ ಸಲ್ಲಿಕೆಯಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ನಿಲುವು ತಾಳಿದೆ.
ಚಾರ್ಜ್ಶೀಟ್ ಸಲ್ಲಿಕೆಯಲ್ಲಿ ವಿಳಂಬ ಮಾಡುವ ಅಥವಾ ಪ್ರಾಸಿಕ್ಯೂಷನ್ ಪ್ರಕ್ರಿಯೆಯಲ್ಲಿ ತಾರತಮ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಿಳಂಬಕ್ಕೆ ಕಾರಣವಾಗುವ ಎಲ್ಲಾ ನ್ಯೂನ್ಯತೆಗಳನ್ನು ಗುರುತಿಸಿ ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಅವರು ಹೇಳಿದರು.
ಸುರಕ್ಷಿತ ಹಾಗೂ ಸಮರ್ಥ ಬೆಂಗಳೂರಿಗೆ ಸರ್ಕಾರದ ಸಂಕಲ್ಪ
ಸಭೆಯಲ್ಲಿ ಚರ್ಚಿಸಲಾದ ಎಲ್ಲಾ ಕ್ರಮಗಳು ಬೆಂಗಳೂರನ್ನು ಹೆಚ್ಚು ಸುರಕ್ಷಿತ, ತಂತ್ರಜ್ಞಾನ ಸ್ನೇಹಿ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮತ್ತಷ್ಟು ಬಲಿಷ್ಠ ನಗರವನ್ನಾಗಿ ರೂಪಿಸುವ ಉದ್ದೇಶ ಹೊಂದಿವೆ.
ಸಂಚಾರ ದಟ್ಟಣೆ ನಿಯಂತ್ರಣ, ಸೈಬರ್ ಅಪರಾಧ ತಡೆ, ಮಹಿಳಾ ಸುರಕ್ಷತೆ ಮತ್ತು ಡ್ರಗ್ಸ್ ವಿರುದ್ಧದ ಸಮರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹಾಗೂ ಸರ್ಕಾರ ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
