“ಅಶೋಕ್ ಕಸ ಮಾಫಿಯಾದ ಏಜೆಂಟ್ ರೀತಿ ಮಾತನಾಡುತ್ತಿದ್ದಾರೆ”: ಆರ್. ಅಶೋಕ್ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ
ನವದೆಹಲಿ, ಜೂನ್ 10: ಬೆಂಗಳೂರು ಕಸ ನಿರ್ವಹಣಾ ಟೆಂಡರ್ಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಕಿಕ್ಬ್ಯಾಕ್ ನಡೆದಿದೆ ಎಂಬ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಆರೋಪಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ತಿರುಗೇಟು ನೀಡಿದ್ದು, “ಅವರು ಕಸ ಮಾಫಿಯಾದ ಏಜೆಂಟ್ ರೀತಿ ಮಾತನಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ನವದೆಹಲಿದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಕಸ ನಿರ್ವಹಣೆ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಮರ್ಥಿಸಿಕೊಂಡು, ಆರೋಪಗಳ ಕುರಿತು ಯಾವುದೇ ತನಿಖೆ ನಡೆಸಿದರೂ ಎದುರಿಸಲು ಸಿದ್ಧ ಎಂದು ಹೇಳಿದರು.
“ಆರ್. ಅಶೋಕ್ ಅವರಿಗೆ ಏನು ಕಸ ಬೇಕೋ ಲಾರಿಯಲ್ಲಿ ತುಂಬಿ ಕಳುಹಿಸಿಕೊಡೋಣ. ಈ ಹಿಂದೆ ಕುಮಾರಸ್ವಾಮಿ ಅವರೂ ಇದೇ ರೀತಿಯ ಆರೋಪ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ದೊಡ್ಡ ಕಸ ಲಾಬಿ ಇದೆ. ಆ ಲಾಬಿಯ ಕಾರಣದಿಂದಲೇ ಹಲವು ವರ್ಷಗಳ ಕಾಲ ವೈಜ್ಞಾನಿಕ ಕಸ ನಿರ್ವಹಣೆ ಸಾಧ್ಯವಾಗಲಿಲ್ಲ” ಎಂದು ಹೇಳಿದರು.
ಹಿಂದೆ ಕಸದಿಂದ ಇಂಧನ ಉತ್ಪಾದನೆಗೆ 14-15 ಸಂಸ್ಥೆಗಳಿಗೆ ಅವಕಾಶ ನೀಡಲಾಗಿತ್ತಾದರೂ ಯಾರೂ ಯಶಸ್ವಿಯಾಗಿರಲಿಲ್ಲ ಎಂದು ಅವರು ನೆನಪಿಸಿದರು. ಪ್ರಸ್ತುತ ಯೋಜನೆ ಜಾರಿಗೆ ತರುವ ಮೊದಲು ದೆಹಲಿ, ಹೈದರಾಬಾದ್ ಹಾಗೂ ಚೆನ್ನೈ ನಗರಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾಗಿ ತಿಳಿಸಿದರು.
“ಈ ಯೋಜನೆಗೆ ಸುಮಾರು ₹6,000 ಕೋಟಿ ಬಂಡವಾಳ ಹೂಡಿಕೆ ಆಗಲಿದೆ. ಕಸದಿಂದ ಅನಿಲ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಗುರಿ ನಮ್ಮದು. ಬೆಂಗಳೂರಿನಲ್ಲಿ ಸೂಕ್ತ ಜಾಗ ಸಿಗದ ಕಾರಣ ದೊಡ್ಡಬಳ್ಳಾಪುರದಲ್ಲಿ ಜಾಗ ಖರೀದಿಸಲು ತೀರ್ಮಾನಿಸಿದ್ದೇವೆ. ನೈಸ್ ಬಿಟ್ಟಿರುವ ಜಾಗವನ್ನೂ ಪಡೆದಿದ್ದೇವೆ. ಯಾರಾದರೂ ಜಾಗ ನೀಡಲು ಸಿದ್ಧರಿದ್ದರೆ ಮುಂದೆ ಬರಬಹುದು” ಎಂದು ಹೇಳಿದರು.
“ಅವರು ಯಾವ ತನಿಖೆ ಬೇಕಾದರೂ ಮಾಡಿಸಲಿ. ₹36 ಸಾವಿರ ಕೋಟಿ ಬಿಡಿ, ₹10 ಕೋಟಿ ಹಣ ದುರ್ಬಳಕೆ ಆಗಿದೆ ಎಂದು ಸಾಬೀತಾದರೂ ತನಿಖೆ ಮಾಡಿಸಲಿ. ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದರು.
ತಮ್ಮ ವಿರುದ್ಧ ನಡೆಯುತ್ತಿರುವುದು ಅಸೂಯೆಯ ರಾಜಕೀಯ ಎಂದು ಆರೋಪಿಸಿದ ಶಿವಕುಮಾರ್, “ನಾನು ಮುಖ್ಯಮಂತ್ರಿಯಾಗಿರುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಪಕ್ಷದಲ್ಲೂ, ಇತರ ಪಕ್ಷಗಳಲ್ಲೂ ಏನಾಗುತ್ತಿದೆ ಎಂಬುದು ನನಗೆ ಗೊತ್ತಿದೆ. ಯಾರೋ ಒತ್ತಡ ಹಾಕಿ ಮಾತನಾಡಿಸುತ್ತಿದ್ದಾರೆ” ಎಂದು ಹೇಳಿದರು.
ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಕಸ ಟೆಂಡರ್ ಪ್ರಕ್ರಿಯೆ ನಿರಂತರವಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತಿತ್ತು. ಕೊನೆಗೆ ಸರ್ಕಾರದ ನಿರ್ಧಾರ ಸರಿಯೆಂದು ನ್ಯಾಯಾಲಯವೇ ತೀರ್ಪು ನೀಡಿದೆ ಎಂದು ಅವರು ಹೇಳಿದರು. ನ್ಯಾಯಾಲಯ ಅನುಮೋದನೆ ನೀಡಿದ ಬಳಿಕವೂ ಸರ್ಕಾರ ಪಾರದರ್ಶಕತೆಗಾಗಿ ಪ್ರತ್ಯೇಕ ಸಮಿತಿಯನ್ನು ರಚಿಸಿ ಪರಿಶೀಲನೆ ನಡೆಸಿದೆ ಎಂದು ತಿಳಿಸಿದರು.
ದೆಹಲಿ ಭೇಟಿಯ ಕುರಿತು ಮಾತನಾಡಿದ ಮುಖ್ಯಮಂತ್ರಿ, ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಬಂದಿರುವುದಾಗಿ ಹೇಳಿದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕರುಗಳಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾಗಿ ತಿಳಿಸಿದರು.
“ನಾನು ರಾಜಕೀಯವಾಗಿ ಬೆಳೆದಿದ್ದು ಎನ್ಎಸ್ಯುಐ ಮತ್ತು ಯುವ ಕಾಂಗ್ರೆಸ್ ಮೂಲಕ. ಆದ್ದರಿಂದ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮತ್ತು ಎನ್ಎಸ್ಯುಐ ಕಚೇರಿಗಳಿಗೆ ಭೇಟಿ ನೀಡಿದ್ದೇನೆ” ಎಂದರು.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ನಡೆದ ಚರ್ಚೆಗಳ ಬಗ್ಗೆ ಪ್ರಶ್ನಿಸಿದಾಗ, “ನಾನು ಕಾಂಗ್ರೆಸ್ ಕಾರ್ಯಕರ್ತ ಹಾಗೂ ರಾಜ್ಯದ ಮುಖ್ಯಮಂತ್ರಿ. ಕೆಲವು ವಿಚಾರಗಳನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ” ಎಂದು ಉತ್ತರಿಸಿದರು.
ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ ಶಿವಕುಮಾರ್, ರಾಜ್ಯದ ಪ್ರಮುಖ ಯೋಜನೆಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿರುವುದಾಗಿ ಹೇಳಿದರು.
“ಬೆಂಗಳೂರು ಡಬಲ್ ಡೆಕ್ಕರ್ ಮೆಟ್ರೋ ಯೋಜನೆಗೆ ಕೆಲವು ಆಕ್ಷೇಪಗಳು ವ್ಯಕ್ತವಾಗಿದ್ದವು. ಯೋಜನೆಯ ಅಗತ್ಯತೆಯನ್ನು ವಿವರಿಸಿ ಅನುಮತಿ ನೀಡುವಂತೆ ಕೇಳಿದ್ದೇನೆ. ಅರ್ಬನ್ ಚಾಲೆಂಜ್ ಫಂಡ್ ಮೂಲಕ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆಯ
