ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ನ್ಯಾಯ ಸಿಗದೇ ಇರುವ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ, ಹೋರಾಟಗಳು ತೀವ್ರಗೊಂಡಿವೆ. ಸುಳ್ಯ: ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ನ್ಯಾಯ ಸಿಗದೇ ಇರುವ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ, ಹೋರಾಟಗಳು ತೀವ್ರಗೊಂಡಿವೆ.
ಸುಳ್ಯದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸೌಜನ್ಯ ತಾಯಿ ಕುಸುಮವತಿ ಕಣ್ಣೀರಿಟ್ಟಿದ್ದು, ನನ್ನ ಮಗಳ ಆತ್ಮ ಶಾಂತಿ ಪಡೆಯುವವರೆಗೆ ನನ್ನನ್ನು ಬೆಂಬಲಿಸಿ ಎಂದು ಕೇಳಿಕೊಂಡಿದ್ದಾರೆ.
ಸೌಜನ್ಯ ಹೋರಾಟ ಸಮಿತಿಯಿಂದ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ನನ್ನ ಮಗಳ ಆತ್ಮ ನ್ಯಾಯಕ್ಕಾಗಿ ಕಾಯುತ್ತಿದೆ. ಆಕೆಗೆ ನ್ಯಾಯ ಒದಗಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನೂ ನಾನು ಮಾಡುತ್ತಿದ್ದೇನೆ. ನನ್ನ ಈ ಹೋರಾಟದಲ್ಲಿ ಕೈ ಜೋಡಿಸುವಂತೆ ಪ್ರತಿಯೊಬ್ಬರಲ್ಲೂ ಪ್ರಾರ್ಥಿಸುತ್ತೇನೆ ನನ್ನ ಮಗಳಿಗೆ ಆದದ್ದನ್ನು ಯಾರೂ ಸಹಿಸಬಾರದು. ಈ ಅನ್ಯಾಯ ಕೊನೆಯಾಗಬೇಕು,” ಎಂದು ಹೇಳಿದ್ದಾರೆ.
ಸಮಾಜಿಕ ಕಾರ್ಯಕರ್ತರಾದ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, ನಾವು ನ್ಯಾಯಕ್ಕಾಗಿ ಬೇಡುತ್ತಿದ್ದೇವೆ. ಮಗುವನ್ನು ರಕ್ಷಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂಬುದಕ್ಕೆ ನಾಚಿಕೆಪಡುತ್ತೇನೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಗಿದೆ. ಆದರೆ ಅಮಾಯಕನೊಬ್ಬನನ್ನು ಬಂಧಿಸಲಾಗಿತ್ತು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನ್ಯಾಯಕ್ಕಾಗಿ ಹೋರಾಟ ಆರಂಭವಾಗಿದ್ದು, ಈಗ ದಕ್ಷಿಣ ಕನ್ನಡಕ್ಕೂ ಬಂದಿದೆ. ತಪ್ಪಿತಸ್ಥರು, ಅವರನ್ನು ರಕ್ಷಿಸಿದ ಪ್ರಭಾವಿ ವ್ಯಕ್ತಿಗಳು ಮತ್ತು ಸಾಕ್ಷ್ಯ ನಾಶಪಡಿಸಿದ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು,” ಎಂದು ಹೇಳಿದ್ದಾರೆ.