ವಿಧಾನಸಭೆಯಲ್ಲಿ ಅಂಗೀಕೃತವಾದ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ 2023’ ಅನ್ನು ಮೇಲ್ಮನೆಯಲ್ಲಿ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತದಾನದ ಮೂಲಕ ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಧರಿಸಲಾಯಿತು. ಇದರಿಂದಾಗಿ, ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ. ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕೃತವಾದ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ 2023’ ಅನ್ನು ಮೇಲ್ಮನೆಯಲ್ಲಿ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತದಾನದ ಮೂಲಕ ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸಲು ನಿರ್ಧರಿಸಲಾಯಿತು. ಇದರಿಂದಾಗಿ, ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.
ಬುಧವಾರ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಅವರು, ವಿಧೇಯಕ ಅಂಗೀಕರಿಸುವಂತೆ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿದರು. ಮಧ್ಯಾಹ್ನದ ವಿರಾಮದ ನಂತರ ವಿಧೇಯಕದ ಕುರಿತು ಸುಮಾರು 3 ಗಂಟೆಗಳ ಸುಧೀರ್ಘ ಚರ್ಚೆ ನಡೆಯಿತು. ಆ ನಂತರ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಶಾಸನ ಪರಿಶೀಲನಾ ಸಮಿತಿಗೆ ವಹಿಸಲು ಪಟ್ಟು ಹಿಡಿದರು.
ಸಚಿವ ಹೆಚ್.ಕೆ.ಪಾಟೀಲ, ಸುದೀರ್ಘ ಚರ್ಚೆ ನಂತರವೂ ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸಲು ಬರುವುದಿಲ್ಲ. ವಿಧೇಯಕ ಮಂಡನೆಯ ವೇಳೆಯೇ ಈ ಬಗ್ಗೆ ಪ್ರಸ್ತಾಪಿಸಬೇಕಿತ್ತು, ಈಗ ಅದು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಶಾಸನ ಪರಿಶೀಲನಾ ಸಮಿತಿಗೆ ಪ್ಪಿಸಲು ಎಲ್ಲಾ ಅವಕಾಶಗಳು ಇವೆ ಎಂದು ನಿಯಮಾವಳಿ ಉಲ್ಲೇಖಿಸಿದರು.
ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ವಿಧೇಯಕವನ್ನು ಶಾಸನ ಪರಿಶೀಲನಾ ಸಮಿತಿಗೆ ಒಪ್ಪಿಸುವ ನಿಟ್ಟಿನಲ್ಲಿ ಮತದಾನ ಪ್ರಕ್ರಿಯೆ ಆರಂಭಿಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಕುಳಿತ ಆಸನಗಳಲ್ಲೇ ಸಾಲು, ಸಾಲಾಗಿ ಶಾಸಕರ ಪರ-ವಿರೋಧ ಹಾಜರಾತಿ ಪಡೆಯಲಾಯಿತು. ಶಾಸಕ ಪರಿಶೀಲನಾ ಸಮಿತಿಗೆ ಒಪ್ಪಿಸುವ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸೇರಿ 31 ಶಾಸಕರು, ವಿರುದ್ಧವಾಗಿ ಕಾಂಗ್ರೆಸ್ ಸದಸ್ಯರು ಮತ್ತು ಜೆಡಿಎಸ್’ನ ಮರಿತಿಬ್ಬೇಗೌಡ ಅವರು ಒಳಗೊಂಡಂತೆ ಒಟ್ಟು 21 ಶಾಸಕರು ಮತ ಚಲಾಯಿಸಿದರು. ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಿಧೇಯಕವನ್ನು ಶಾಸನ ಪರಿಶೀಲನಾ ಸಮಿತಿಗೆ ವಹಿಸಲು ನಿರ್ಧರಿಸಲಾಯಿತು.