ಮನೆಯ ಕಷ್ಟಗಳಿಗೆ, ಖರ್ಚು ವೆಚ್ಚಗಳನ್ನು ನಿಭಾಯಿಸಲು ಮಹಿಳೆಯರು ತಮ್ಮಲ್ಲಿರುವ ಚಿನ್ನಾಭರಣಗಳನ್ನು ಗಿರವಿ ಅಥವಾ ಒತ್ತೆ ಇಡುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಅಂಗನವಾಡಿ ಕಟ್ಟಡದ ಬಾಡಿಗೆ ಪಾವತಿಸಲು ಹಣ ನೀಡಲಿಲ್ಲವೆಂದು ಶಿಕ್ಷಕಿಯರು ಚಿನ್ನ ಮತ್ತು ಪೀಠೋಪಕರಣಗಳನ್ನು ಒತ್ತೆ ಇಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ: ಮನೆಯ ಕಷ್ಟಗಳಿಗೆ, ಖರ್ಚು ವೆಚ್ಚಗಳನ್ನು ನಿಭಾಯಿಸಲು ಮಹಿಳೆಯರು ತಮ್ಮಲ್ಲಿರುವ ಚಿನ್ನಾಭರಣಗಳನ್ನು ಗಿರವಿ ಅಥವಾ ಒತ್ತೆ ಇಡುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಅಂಗನವಾಡಿ ಕಟ್ಟಡದ ಬಾಡಿಗೆ ಪಾವತಿಸಲು ಹಣ ನೀಡಲಿಲ್ಲವೆಂದು ಶಿಕ್ಷಕಿಯರು ಚಿನ್ನ ಮತ್ತು ಪೀಠೋಪಕರಣಗಳನ್ನು ಒತ್ತೆ ಇಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಅಂಗನವಾಡಿ ವ್ಯಥೆಯ ಕಥೆಯನ್ನು ಅಂಗನವಾಡಿ ಶಿಕ್ಷಕಿ ನೇತ್ರಾವತಿ (ಹೆಸರು ಬದಲಿಸಲಾಗಿದೆ) ಹೇಳಿದ್ದಾರೆ.
ಹಲವು ತಿಂಗಳಿನಿಂದ ಬಾಡಿಗೆ ಬಾಕಿ ಇರುವ ಕಾರಣ ಕಟ್ಟಡದ ಮಾಲೀಕರು ಅಂಗನವಾಡಿಯನ್ನು ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಬಹುತೇಕ ಅಂಗನವಾಡಿಗಳು ವಿದ್ಯುತ್ ಬಿಲ್ ಹೊರತುಪಡಿಸಿ 4 ಸಾವಿರ ರೂಪಾಯಿ ಬಾಡಿಗೆಯನ್ನು ಸಾಮಾನ್ಯವಾಗಿ ಪಾವತಿಸುತ್ತವೆ. ಹೀಗಾಗಿ ನಾನು 20,000 ರೂಪಾಯಿ ಪಡೆಯಲು ಚಿನ್ನವನ್ನು ಒತ್ತೆ ಇಟ್ಟು ಬಾಡಿಗೆ ಕಟ್ಟಬೇಕಾಯಿತು. ಅನೇಕ ಸಂದರ್ಭಗಳಲ್ಲಿ, ಅಂಗನವಾಡಿಗಳಿಗೆ ಸರ್ಕಾರವು ಹಣವನ್ನು ಬಿಡುಗಡೆ ಮಾಡದ ಕಾರಣ ನಾವು ನಮ್ಮ ಸಂಬಳದಿಂದ ಬಾಡಿಗೆಯನ್ನು ಪಾವತಿಸುತ್ತೇವೆ ಎಂದು ಹೇಳಿದರು.
ಬಳ್ಳಾರಿಯ ಬಿಸರಹಳ್ಳಿಯ ಮತ್ತೋರ್ವ ಅಂಗನವಾಡಿ ಶಿಕ್ಷಕಿ, ಬಾಡಿಗೆ ಬಾಕಿ ಇದ್ದರೆ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ನಾವು ಸರ್ಕಾರಿ ಆಸ್ತಿಗಳನ್ನು ಹೇಗೆ ಪಡೆಯಬಹುದು ಸರ್ಕಾರದವರು ಹೊಸ ಕಟ್ಟಡ ಗುರುತಿಸಿ ನೀಡಬೇಕು ಅಥವಾ ಬಾಡಿಗೆ ಮೊತ್ತವನ್ನು ಪಾವತಿಸಬೇಕು ಎನ್ನುತ್ತಾರೆ.
ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ತಿಳಿಸಲಾಗಿದೆ ಎಂದು ಬಳ್ಳಾರಿಯ ಅಂಗನವಾಡಿ ಶಿಕ್ಷಕರ ಸಂಘದ ಮುಖಂಡ ಸತ್ಯಬಾಬು ಜೆ ಹೇಳುತ್ತಾರೆ. ನಾವು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದೇವೆ, ಅವರು ಹಣವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದರು.
ಜಿಲ್ಲೆಯ 1,358 ಅಂಗನವಾಡಿಗಳಲ್ಲಿ ಬಹುತೇಕ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಸರ್ಕಾರ ಇನ್ನೂ ಬಿಲ್‌ಗಳನ್ನು ತೆರವುಗೊಳಿಸಿಲ್ಲ ಎಂದು ಆಡಳಿತಾಧಿಕಾರಿಗಳು ಹೇಳುತ್ತಾರೆ. ಇದರಿಂದ ತಮ್ಮಲ್ಲಿಯೇ ಹಣ ಹೊಂದಿಸಿಕೊಂಡು ಶಿಕ್ಷಕಿಯರು ಕಟ್ಟಡ ಬಾಡಿಗೆ ನೀಡಬೇಕಾದ ಪರಿಸ್ಥಿತಿ ಬಂದಿದೆ.