Home Uncategorized ಬೆಂಗಳೂರು: ಪತ್ನಿಯೊಂದಿಗೆ ಜಗಳವಾಡದಂತೆ ಬುದ್ಧಿ ಹೇಳಿದ ಸಂಬಂಧಿಕನಿಗೆ ಇರಿದು ಕೊಂದ ದುರುಳ!

ಬೆಂಗಳೂರು: ಪತ್ನಿಯೊಂದಿಗೆ ಜಗಳವಾಡದಂತೆ ಬುದ್ಧಿ ಹೇಳಿದ ಸಂಬಂಧಿಕನಿಗೆ ಇರಿದು ಕೊಂದ ದುರುಳ!

15
0
bengaluru

ಪತ್ನಿಯೊಂದಿಗೆ ಜಗಳವಾಡದಂತೆ ಚೆನ್ನಾಗಿ ನೋಡಿಕೊಳ್ಳವಂತೆ ಬುದ್ಧಿ ಹೇಳಿದಾತನಿಗೆ ಚೂರಿ ಇರಿದು ಹತ್ಯೆ ಮಾಡಿರುವ ಘಟನೆಯೊಂದು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರು: ಪತ್ನಿಯೊಂದಿಗೆ ಜಗಳವಾಡದಂತೆ ಚೆನ್ನಾಗಿ ನೋಡಿಕೊಳ್ಳವಂತೆ ಬುದ್ಧಿ ಹೇಳಿದಾತನಿಗೆ ಚೂರಿ ಇರಿದು ಹತ್ಯೆ ಮಾಡಿರುವ ಘಟನೆಯೊಂದು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಕೂಡ ಗಾಯಗೊಂಡಿದ್ದಾನೆ. ಹತ್ಯೆಯಾದ ವ್ಯಕ್ತಿಯನ್ನು ಪೀಣ್ಯ ಎರಡನೇ ಹಂತದ ತಿಗಳಪಾಳ್ಯ ಮುಖ್ಯರಸ್ತೆಯ ನಿವಾಸಿ ಕೇಶವಮೂರ್ತಿ (32) ಎಂದು ಗುರ್ತಿಸಲಾಗಿದೆ. ಈತನ ಬಾವಮೈದುನ ಕಲ್ಲೇಶ್ (27) ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಆರೋಪಿ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ನಿವಾಸಿ ಭರತ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಭರತ್ ಹಾಗೂ ಪತ್ನಿ ರಾಧಾ ನಡುವೆ ಆಗಾಗ ಜಗಳವಾಗುತ್ತಿತ್ತು, ಕೆಲವು ದಿನಗಳ ಹಿಂದೆ ಪತ್ನಿ ಜೊತೆ ಜಗಳ ಮಾಡಿಕೊಂಡು ಭರತ್ ಮನೆಗೆ ಹೋಗಿರಲಿಲ್ಲ. ಹೀಗಾಗಿ ಪತ್ನಿ ರಾಧಾ ಅತ್ತೆಯ ಮಗನಾದ ಕೇಶವಮೂರ್ತಿಗೆ ಕರೆ ಮಾಡಿ, ಗಂಡ 3 ದಿನಗಳಿಂದ ಮನೆಗೆ ಬಂದಿಲ್ಲ ಎಲ್ಲಾದರೂ ಸಿಕ್ಕರೆ ಬುದ್ಧಿ ಹೇಳಿ ಮನೆಗೆ ಕಳುಹಿಸುವಂತೆ ತಿಳಿಸಿದ್ದಾರೆ.

ಕೇಶವಮೂರ್ತಿ ಹಾಗೂ ಆತನ ಬಾವ ಮೈದುನ ಕಲ್ಲೇಶ್ ಜ.13ರ ರಾತ್ರಿ 8ಕ್ಕೆ ಭರತ್’ಗೆ ಕರೆ ಮಾಡಿ ಪೀಣ್ಯ 2ನೇ ಹಂತದ ಮಂದಾರ ಬಾರ್’ಗೆ ಕರೆಸಿಕೊಂಡು, ಮದ್ಯ ಸೇವಿಸಿದ್ದಾರೆ. ಈ ವೇಳೆ ಕೇಶವಮೂರ್ತಿ, ಮನೆಗೆ ಹೋಗದಿರುವ ಬಗ್ಗೆ ಭರತ್ ನನ್ನು ಪ್ರಶ್ನಿಸಿ ಹೊಡೆದಿದ್ದಾನೆ. ನಂತರ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದಾರೆ. ಬಳಿಕ ಮೂವರೂ ಬೈಕ್ ನಲ್ಲಿ ಹೊರಟು ಮಾರ್ಗ ಮಧ್ಯೆ ಹೆಸರಘಟ್ಟದ ದ್ವಾರಕನಗರದ ಹಿಮಾಲಯ ಡಾಬಾ ಬಳಿ ಮದ್ಯ ಖರೀದಿಸಿ ಸೇವಿರಲು ಆರಂಭಿಸಿದ್ದಾರೆ.

ರಾತ್ರಿ 10.55ರ ಸುಮಾರಿಗೆ ಆರೋಪಿ ಭರತ್ ಏಕಾಏಕಿ ಕೇಶವಮೂರ್ತಿ ಹಾಗೂ ಕಲ್ಲೇಶ್ ಅವರಿಗೆ ನನ್ನ ಮಕ್ಕಳಾ, ನನಗೆ ಬುದ್ಧಿ ಹೇಳುತ್ತೀರಾ. ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಚಾಕು ತೆಗೆದು ಮೊದಲು ಕಲ್ಲೇಶ್’ಗ ಇರಿದಿದ್ದಾನೆ. ಈ ವೇಳೆ ಕೇಶವಮೂರ್ತಿ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ಅಟ್ಟಾಡಿಸಿಕೊಂಡು ರಸ್ತೆಗೆ ಕೆಡವಿ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಹಲವು ಬಾರಿ ಇರಿದು ಹತ್ಯೆ ಮಾಡಿ, ದ್ವಿಚಕ್ರ ವಾಹನ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಬಳಿಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಎದೆ ಭಾಗಕ್ಕೆ ತೀವ್ರ ಗಾಯವಾಗಿದ್ದರಿಂದ ಕೇಶವಮೂರ್ತಿಯವರು ಮೃತಪಟ್ಟಿದ್ದಾರೆ. ಇದೀಗ ಕಲ್ಲೇಶ್ ಚೇತರಿಸಿಕೊಳ್ಳುತ್ತಿದ್ದು, ಆರೋಪಿಗಾಗಿ ಸೋಲದೇವನಹಳ್ಳಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here