ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಪೇದೆ ಸಾವನ್ನಪ್ಪಿದ್ದಾರೆ. ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಪೇದೆ ಸಾವನ್ನಪ್ಪಿದ್ದಾರೆ.
ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ವಾಹನವನ್ನು ಪೊಲೀಸ್ ಪೇದೆ ಪರಿಶೀಲನೆ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಸುರೇಶ್ ಮೃತ ಪೇದೆಯಾಗಿದ್ದು, ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು.
ಹೆದ್ದಾರಿಯಲ್ಲಿ ನಿಂತಿದ್ದ ವಾಹನ ಪರಿಶೀಲನೆ ನಡೆಸುತ್ತಿದ್ದ ಪೇದೆಗೆ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಕೆಟ್ಟು ನಿಂತಿದ್ದ ವಾಹನದ ಚಾಲಕನಿಗೂ ಗಾಯಗಳಾಗಿವೆ.
ಢಿಕ್ಕಿ ಹೊಡೆದ ಕಾರಿನಲ್ಲಿದ್ದವರು ಮದ್ಯ ಸೇವಿಸಿದ್ದ ಅಮಲಿನಲ್ಲಿದ್ದರು, ಈ ಪೈಕಿ ಮೂವರು ಯುವತಿಯರೂ ಇದ್ದು, ಎಲ್ಲರಿಗೂ ಗಾಯಗಳಾಗಿವೆ. ಮೃತ ಪೇದೆ ಸುರೇಶ್ ಇನ್ಸ್ ಪೆಕ್ಟರ್ ಧರ್ಮೇಗೌಡ ಅವರೊಂದಿಗೆ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಪೊಲೀಸ್ ಕಾರು ಚಾಲನೆ ಮಾಡುತ್ತಿದ್ದ ಸುರೇಶ್ ಹೆದ್ದಾರಿಯಲ್ಲಿ ಇನೋವಾ ಕಾರು ಕೆಟ್ಟು ನಿಂತಿದ್ದನ್ನು ಗಮನಿಸಿ, ಪರಿಶೀಲನೆ ನಡೆಸಲು ಇಳಿದಿದ್ದರು. ಇನ್ನೋವಾ ಕಾರಿನ ಚಾಲಕನೊಂದಿಗೆ ಮಾತನಾಡುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಈ ಅನಾಹುತ ಸಂಭವಿಸಿದೆ.