ಬೆಂಗಳೂರು:
ರಾಜ್ಯದಲ್ಲಿ ಮಹಿಳಾ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ನಡುವಿನ ಜಟಾಪಟಿ ಮತ್ತಷ್ಟು ತೀವ್ರವಾಗಿದ್ದು, ಐಪಿಎಸ್ ಅಧಿಕಾರಿ ಡಿ. ರೂಪಾ ಆರೋಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು, ವೈಯಕ್ತಿಕ ನಿಂದನೆ ಹಾಗೂ ತೇಜೋವಧೆ ವಿರುದ್ಧ ಐಪಿಎಸ್ ಸೆಕ್ಷನ್ ಗಳಡಿ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ.
ಡಿ.ರೂಪಾ ಅವರು ತಮ್ಮ ಕೆಲ ಖಾಸಗಿ ಫೋಟೋಗಳನ್ನು ಬಿಡುಗಡೆ ಮಾಡಿ ಸಾಲು ಸಾಲು ಆರೋಪಗಳನ್ನು ಮಾಡಿದ ಬೆನ್ನಲ್ಲೇ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ರೋಹಿಣಿ ಸಿಂಧೂರಿ, ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿದ್ದ ಫೋಟೋಗಳನ್ನು ಬಳಸಿ ನಿಂದನೆ ಹಾಗೂ ತೇಜೋವಧೆ ಮಾಡಿದ್ದಾರೆ. ನಾನು ಯಾವ ಅಧಿಕಾರಿಗೆ ಫೋಟೋಸ್ ಕಳುಹಿಸಿದ್ದೆ ಅಂತ ಹೆಸರು ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ. ಅಲ್ಲದೇ ಆ ಬಗ್ಗೆ ತನಿಖೆ ನಡೆಯಬೇಕೆಂದು ರೋಹಿಣಿ ಸಿಂಧೂರಿ ಒತ್ತಾಯಿಸಿದ್ದಾರೆ.
ಡಿ.ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಆಧಾರರಹಿತ ಆರೋಪ ಮಾಡಿ ಮಾಧ್ಯಮಗಳ ಗಮನ ಸೆಳೆಯುತ್ತಿದ್ದಾರೆ. ವೈಯಕ್ತಿಕ ನಿಂದನೆ, ತೇಜೋವಧೆ ವಿರುದ್ಧ IPS ಸೆಕ್ಷನ್ ಗಳಡಿ ಕಾನೂನು ಕ್ರಮಕ್ಕಾಗಿ ಸಕ್ಷಮ ಪ್ರಾಧಿಕಾರದ ಮುಂದೆ ದೂರು ಸಲ್ಲಿಸುತ್ತೇನೆ ಎಂದು ಸಿಂಧೂರಿ ತಿಳಿಸಿದ್ದಾರೆ.
ರೂಪಾ ಅವರು ಯಾವಾಗಲು ಸುದ್ದಿಯಲ್ಲಿರಬೇಕೆಂದು ಬಯಸಿ ಈ ರೀತಿ ಪೋಸ್ಟ್ ಹಾಕಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ರೀತಿ ಪೋಸ್ಟ್ ಗಳ ಮೂಲಕ ಸುದ್ದಿಯಲ್ಲಿರಲು ಪ್ರಯತ್ನ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡುವುದು ಬಿಟ್ಟು ಇನ್ನೊಬ್ಬರ ತೋಜೋವಧೆ ಮಾಡುತ್ತಿದ್ದಾರೆ ಎಂದು ಸಿಂಧೂರಿ ಕಿಡಿಕಾರಿದ್ದಾರೆ.