Home Uncategorized ಗದಗವನ್ನು ಮೊಬೈಲ್ ಕಳ್ಳತನ ಮುಕ್ತ ನಗರ'ವನ್ನಾಗಿಸಲು 'ಮೊಬಿಫೈ ತಂತ್ರಜ್ಞಾನ' ಆರಂಭಿಸಿದ ಪೊಲೀಸರು, ಜನರಿಂದ ಉತ್ತಮ ಪ್ರತಿಕ್ರಿಯೆ

ಗದಗವನ್ನು ಮೊಬೈಲ್ ಕಳ್ಳತನ ಮುಕ್ತ ನಗರ'ವನ್ನಾಗಿಸಲು 'ಮೊಬಿಫೈ ತಂತ್ರಜ್ಞಾನ' ಆರಂಭಿಸಿದ ಪೊಲೀಸರು, ಜನರಿಂದ ಉತ್ತಮ ಪ್ರತಿಕ್ರಿಯೆ

21
0

ಗದಗವನ್ನು ‘ಮೊಬೈಲ್ ಕಳ್ಳತನ ಮುಕ್ತ ನಗರ’ವನ್ನಾಗಿಸಲು ಗದಗ ಪೊಲೀಸ್ ಇಲಾಖೆ ಮೊಬಿಫೈ ಎಂಬ ಉಪಕ್ರಮವನ್ನು ಆರಂಭಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಗದಗ: ಗದಗವನ್ನು ‘ಮೊಬೈಲ್ ಕಳ್ಳತನ ಮುಕ್ತ ನಗರ’ವನ್ನಾಗಿಸಲು ಗದಗ ಪೊಲೀಸ್ ಇಲಾಖೆ ಮೊಬಿಫೈ ಎಂಬ ಉಪಕ್ರಮವನ್ನು ಆರಂಭಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಮೊಬಿಫೈ ತಂತ್ರಜ್ಞಾನವನ್ನು ನಾಲ್ಕು ದಿನಗಳ ಹಿಂದೆ ಪ್ರಾರಂಭಿಸಲಾಗಿದ್ದು, ಶನಿವಾರದವರೆಗೆ 200 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈಗ ಬಂದಿರುವ ಎಲ್ಲ ದೂರುಗಳನ್ನು ಇಲಾಖೆ ಅಧಿಕಾರಿಗಳು ಒಂದೊಂದಾಗಿ ಪರಿಗಣಿಸುತ್ತಿದ್ದಾರೆ. ಇದು ಕರ್ನಾಟಕದಲ್ಲಿ ಇದೇ ಮೊದಲ ಉಪಕ್ರಮವಾಗಿದ್ದು, ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ತಂತ್ರಜ್ಞಾನ ಹಿನ್ನೆಲೆಯಲ್ಲಿ ಜನರು ಮೊಬೈಲ್ ಕಳೆದು ಹೋದ ಕೂಡಲೇ ಠಾಣೆಗೆ ಬಂದು ದೂರು ನೀಡುವ ಅಗತ್ಯವಿಲ್ಲ. ಎಸ್ಎಂಎಸ್ ಕಳುಹಿಸಿದ್ದರೆ ಸಾಕಾಗುತ್ತದೆ. ಅಧಿಕಾರಿಗಳು ಮೊದಲು ಹ್ಯಾಂಡ್’ಸೆಟ್’ಗಳನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ಯಾವುದೇ ವ್ಯಕ್ತಿ ಮೊಬೈಲ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಕದ್ದ ಮೊಬೈಲ್ ಗಳು ಡಮ್ಮಿಯಾಗುತ್ತವೆ. ಗದಗವನ್ನು ಮೊಬೈಲ್ ಕಳ್ಳತನ ಮುಕ್ತ ನಗರವನ್ನಾಗಿ ಮಾಡುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಉಪಕ್ರಮಕ್ಕೆ ಜನರಿಂದ ಇಷ್ಟರ ಮಟ್ಟಿಗೆ ಪ್ರತಿಕ್ರಿಯೆ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಪ್ರತಿ ನಿಮಿಷವೂ ಒಂದೊಂದು ದೂರುಗಳು ಬರುತ್ತಲೇ ಇದೆ. ಜನರು ಧನ್ಯವಾದಗಳನ್ನು ಹೇಳುತ್ತಿದ್ದಾರೆ. ಪೋನ್ ಕಳೆದು ಹೋದ ಕೂಡಲೇ ದೂರು ನೀಡುವಂತೆ ಸೂಚಿಸಲಾಗುತ್ತಿದ್ದು, ಕಳ್ಳತನ ಮಾಡಿದ ಮೊಬೈಲ್ ಗಳು ಮಾರಾಟವಾಗದಂತೆ ಮಾಡಲು ವಿವರಗಳನ್ನು ಅಪ್ ಲೋಡ್ ಮಾಡುವಂತೆ ಸೂಚಿಸಲಾಗುತ್ತಿದೆ ಎಂದಿದ್ದಾರೆ.

ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಮಾತನಾಡಿ, ‘ಭವಿಷ್ಯದಲ್ಲಿ ತಂತ್ರಜ್ಞಾನದ ಅಳವಡಿಕೆಗಾಗಿ ಬಳಕೆಯನ್ನು ಪರೀಕ್ಷಿಸಲು ಇದನ್ನು ಪ್ರಯೋಗವಾಗಿ ಪರಿಚಯಿಸಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇತರರೊಂದಿಗೂ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದೊಂದು ಸುಲಭವಾಗ ಪ್ರಕ್ರಿಯೆಯಾಗಿದೆ. ಕದ್ದ ಮೊಬೈಲ್ ಫೋನ್‌ಗಳನ್ನು ಟ್ರ್ಯಾಕಿಂಗ್ ಮಾಡುವುದು, ನಿರ್ಬಂಧಿಸುವುದು, ಪತ್ತೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇದು ಕರ್ನಾಟಕದಲ್ಲಿ ಮೊದಲ ಉಪಕ್ರಮವಾಗಿದೆ ಎಂದು ಹೇಳಿದ್ದಾರೆ.

ಏನಿದು ಮೊಬಿಫೈ ತಂತ್ರಜ್ಞಾನ ?
ಫೋನ್ ಕಳೆದುಕೊಂಡ ಜನರು 8277969900 ಸಂಖ್ಯೆಗೆ ‘ಹಾಯ್’ ಸಂದೇಶವನ್ನು ಕಳುಹಿಸಬೇಕಾಗುತ್ತದೆ ಅಥವಾ ಎಲ್ಲಾ ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕಾಗುತ್ತದೆ. .

ಯಾವುದೇ ವ್ಯಕ್ತಿ WhatsApp ಸಂಖ್ಯೆಗೆ ಸಂದೇಶವನ್ನು ಕಳುಹಿಸಿದ ಕೂಡಲೇ ಆ ವ್ಯಕ್ತಿಗೆ ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಈ ಲಿಂಕ್ ಒತ್ತಿದ ಜನರು ಕೂಡಲೇ ಕಳೆದುಹೋದ ಮೊಬೈಲ್ ಹ್ಯಾಂಡ್‌ಸೆಟ್‌ನ ವಿವರಗಳನ್ನು ಸಲ್ಲಿಸಬೇಕು. ಪೊಲೀಸ್ ಇಲಾಖೆ ಅಧಿಕಾರಿಗಳು ಮೊಬೈಲ್ ಪತ್ತೆ ಮಾಡುತ್ತಾರೆ, ಒಂದು ವೇಳೆ ಮೊಬೈಲ್ ಸಿಗದೇ ಇದ್ದಲ್ಲಿ ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ರಕ್ಷಣೆ ಮಾಡಲು ಮೊಬೈಲ್ ಬ್ಲಾಕ್ ಮಾಡಲಾಗುತ್ತದೆ. ಅದೇ ವಿವರಗಳನ್ನು ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ನೊಂದಿಗೆ ಹಂಚಿಕೊಳ್ಳಲಾಗುತ್ತದೆ.

LEAVE A REPLY

Please enter your comment!
Please enter your name here