Home Uncategorized ಜೀವ ಉಳಿಸಿಕೊಳ್ಳಲು ನಿಂಬೆಹಣ್ಣಿನ ಮೊರೆ ಹೋದ ಚೀನಿಯರು: ಕೊವಿಡ್ ವ್ಯಾಪಿಸಿದ ನಂತರ ಚೀನಾದಲ್ಲಿ ನಿಂಬೆಹಣ್ಣಿಗೆ ಭಾರೀ...

ಜೀವ ಉಳಿಸಿಕೊಳ್ಳಲು ನಿಂಬೆಹಣ್ಣಿನ ಮೊರೆ ಹೋದ ಚೀನಿಯರು: ಕೊವಿಡ್ ವ್ಯಾಪಿಸಿದ ನಂತರ ಚೀನಾದಲ್ಲಿ ನಿಂಬೆಹಣ್ಣಿಗೆ ಭಾರೀ ಬೇಡಿಕೆ

16
0

ಬೀಚಿಂಗ್: ಕೊವಿಡ್ ಪಿಡುಗು ವ್ಯಾಪಕವಾಗಿ ಆವರಿಸಿಕೊಂಡಿರುವ ಚೀನಾದಲ್ಲಿ ನಿಂಬೆಹಣ್ಣುಗಳಿಗೆ (Lemons) ಏಕಾಏಕಿ ಭರ್ಜರಿ ಬೇಡಿಕೆ ವ್ಯಕ್ತವಾಗಿದೆ. ಬೇಡಿಕೆ ಇರುವಷ್ಟು ನಿಂಬೆಹಣ್ಣು ಪೂರೈಸಲು ಸಾಧ್ಯವಾಗದೆ ಬೆಳೆಗಾರರು ಕೈಚೆಲ್ಲುತ್ತಿದ್ದಾರೆ. ರೋಗ ನಿರೋಧಕ ಶಕ್ತಿಗೆ ‘ವಿಟಮಿನ್ ಸಿ’ (Vitamin C) ಅತ್ಯಗತ್ಯ. ನಿಂಬೆಹಣ್ಣು ವಿಟಮಿನ್​ ಸಿ ಸಮೃದ್ಧವಾಗಿರುವ ನೈಸರ್ಗಿಕ ಉತ್ಪನ್ನವಾಗಿದೆ. ಹೀಗಾಗಿ ನಿಂಬೆಹಣ್ಣಿನ ಬಳಕೆ ಹೆಚ್ಚಿಸಿಕೊಳ್ಳುವ ಮೂಲಕ ಕೊವಿಡ್​ನಿಂದ ಪಾರಾಗಲು ಹಾಗೂ ಜೀವ ಉಳಿಸಿಕೊಳ್ಳಲು ಚೀನಿಯರು ಮುಂದಾಗಿದ್ದಾರೆ. ಈ ಕುರಿತು ‘ಬ್ಲೂಮ್​ಬರ್ಗ್’ ಸುದ್ದಿಸಂಸ್ಥೆ ವಿಶೇಷ ವರದಿ ಪ್ರಕಟಿಸಿದೆ. ವೆನ್ ಹೆಸರಿನ ರೈತರೊಬ್ಬರನ್ನು ಮಾತನಾಡಿಸಿರುವ ಬ್ಲೂಮ್​ಬರ್ಗ್ ವರದಿಗಾರರು ಅಲ್ಲಿನ ಪರಿಸ್ಥಿತಿಗೆ ಕನ್ನಡಿ ಹಿಡಿದಿದ್ದಾರೆ. ‘ನಾನು 130 ಎಕರೆ (53 ಹೆಕ್ಟೇರ್) ಪ್ರದೇಶದಲ್ಲಿ ನಿಂಬೆ ಹಾಕಿದ್ದೇನೆ. ನಮ್ಮದು ಚೀನಾದಲ್ಲಿ ಅತಿಹೆಚ್ಚು ಹಣ್ಣು ಬೆಳೆಯುವ ಸಿಚುವನ್ ಪ್ರಾಂತ್ಯ. ನಮ್ಮಲ್ಲಿಂದ ಮೊದಲು ಒಂದು ದಿನಕ್ಕೆ 5ರಿಂದ 6 ಟನ್ ಮಾರಾಟವಾಗಿದ್ದರೆ ಹೆಚ್ಚು ಎನಿಸುತ್ತಿತ್ತು. ಆದರೆ ಈಗ 20ರಿಂದ 30 ಟನ್ ಪೂರೈಸಿದರೂ ಸಾಕಾಗುತ್ತಿಲ್ಲ’ ಎಂದು ವೆನ್ ವಿವರಿಸಿದ್ದಾರೆ.

ಬಹುತೇಕ ವ್ಯಾಪಾರಿಗಳು ನಿಂಬೆಹಣ್ಣನ್ನು ಬೀಜಿಂಗ್ ಮತ್ತು ಶಾಂಘೈ ನಗರಗಳಿಗೆ ಕಳಿಸುತ್ತಿದ್ದಾರೆ. ಶೀತ ಮತ್ತು ಜ್ವರಕ್ಕೆ ಕೊಡುವ ಔಷಧಿಗಳ ಸಂಗ್ರಹವೂ ಹಲವು ನಗರಗಳಲ್ಲಿ ಮುಗಿದುಹೋಗಿದೆ. ಹೀಗಾಗಿ ಜನರು ಮಾರುಕಟ್ಟೆಗಳಿಗೆ ಧಾವಿಸಿ ನಿಂಬೆಹಣ್ಣಿನ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಧಾವಂತ ತೋರುತ್ತಿದ್ದಾರೆ. ಆದರೆ ಕೊರೊನಾ ಸೋಂಕನ್ನು ನಿಂಬೆಹಣ್ಣು ತಡೆಯಬಲ್ಲದು ಎನ್ನುವ ಬಗ್ಗೆ ಈವರೆಗೆ ಯಾವುದೇ ವೈದ್ಯಕೀಯ ಪುರಾವೆಗಳು ಲಭ್ಯವಿಲ್ಲ.

‘ಕಳೆದ ನಾಲ್ಕೈದು ದಿನಗಳಲ್ಲಿ ನಿಂಬೆಹಣ್ಣಿನ ಬೆಲೆಯು ಹಲವು ಪಟ್ಟು ಹೆಚ್ಚಾಗಿದೆ’ ಎಂದು ಮತ್ತೋರ್ವ ರೈತ ಮತ್ತು ನಿಂಬೆ ವ್ಯಾಪಾರಿ ಲಿಯು ಯಾನ್​ಜಿಂಗ್​ ಹೇಳಿದ್ದಾರೆ. ‘ಈಗಂತೂ ದೇಶದ ವಿವಿಧೆಡೆಯಿಂದ ಒಂದೇ ಸಮ ಬೇಡಿಕೆ ಬರುತ್ತಿದೆ. ಮೊದಲು 2ರಿಂದ 3 ಯುವಾನ್​ಗೆ (ಚೀನಾ ಕರೆನ್ಸಿ) ಒಂದು ನಿಂಬೆಹಣ್ಣು ಮಾರುತ್ತಿದ್ದೆವು. ಆದರೆ ಈಗ 6 ಯುವಾನ್​ ಕೊಡುತ್ತೇವೆ ಎಂದರೂ ಒಂದು ನಿಂಬೆಹಣ್ಣು ಸಿಗುವುದು ಕಷ್ಟ ಎನ್ನುವಂತೆ ಆಗಿದೆ’ ಎಂದು ಚೀನಾದ ಪರಿಸ್ಥಿತಿ ವಿವರಿಸಿದ್ದಾರೆ.

ನಿಂಬೆ ಜಾತಿಯದ್ದೇ ಆಗಿರುವ ಕಿತ್ತಳೆ ಮತ್ತು ಮತ್ತೊಂದು ಹುಳಿಹಣ್ಣು ಪೇರಳೆಗೂ ಚೀನಾದಲ್ಲಿ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಜಾರ್​ಗಳಲ್ಲಿ ತುಂಬಿಸಿಟ್ಟ ಯೆಲ್ಲೊಪೀಚ್​ಗಳಿಗೂ ಬೇಡಿಕೆ ಹೆಚ್ಚಾಗಿದೆ. ಚೀನಾದ ಪ್ರಮುಖ ಇ-ಕಾಮರ್ಸ್​ ಕಂಪನಿ ‘ಫ್ರೆಶಿಪ್ಪೊ’ (Freshippo) ಇಂಥ ಹಣ್ಣುಗಳ ಬೇಡಿಕೆ 9 ಪಟ್ಟು (ಶೇ 900) ಹೆಚ್ಚಾಗಿರುವುದನ್ನು ದಾಖಲಿಸಿದೆ.

ಶೂನ್ಯ ಕೊವಿಡ್​ ನಿರ್ಬಂಧದ ಬಂಧನದಲ್ಲಿದ್ದ ಚೀನಾದಲ್ಲಿ ಸರಕುಸಾಗಣೆ ವ್ಯವಸ್ಥೆ ಕುಸಿದುಬಿದ್ದಿದೆ. ಎರಡು ವರ್ಷಗಳಿಂದ ಬೇಸಾಯದತ್ತಲೂ ರೈತರು ಹೆಚ್ಚು ಗಮನ ಕೊಟ್ಟಿರಲಿಲ್ಲ. ಆದರೆ ಈಗ ಏಕಾಏಕಿ ನಿರ್ಬಂಧಗಳನ್ನು ತೆರವುಗೊಳಿಸಿರುವುದು ಹಾಗೂ ತಾಜಾ ಹಣ್ಣು-ತರಕಾರಿಗಳಿಗೆ ವ್ಯಾಪಕ ಬೇಡಿಕೆ ವ್ಯಕ್ತವಾಗಿರುವುದರಿಂದ ಬೇಡಿಕೆ ಮತ್ತು ಪೂರೈಕೆ ನಡುವೆ ದೊಡ್ಡ ಅಂತರ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಸತತ ನಷ್ಟವನ್ನೇ ನೋಡಿದ್ದ ಚೀನಾದ ರೈತರು ಈಗ ಕೊವಿಡ್ ಕಾರಣದಿಂದ ಒಂದಿಷ್ಟ ಲಾಭ ಕಾಣುವ ಸ್ಥಿತಿಗೆ ಬಂದಿದ್ದಾರೆ. ‘ನಮ್ಮ ದೇಶದಲ್ಲಿ ತಾಜಾ ಹಣ್ಣು-ತರಕಾರಿಗೆ ಇಷ್ಟು ಬೆಲೆ ಸಿಕ್ಕಿದ್ದು, ರೈತರ ಬಗ್ಗೆ ಸಾಮಾನ್ಯ ಜನರು ಗೌರವದಿಂದ ಮಾತನಾಡಿದ್ದು ಇದೇ ಮೊದಲು ಇರಬೇಕು’ ಎಂದು ರೈತರಾದ ಲಿಯು ಬ್ಲೂಮ್​ಬರ್ಗ್​ ವರದಿಗಾರರಿಗೆ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Covid Review Meet: ಚೀನಾದಲ್ಲಿ ಮತ್ತೆ ಕೊವಿಡ್ ಸ್ಫೋಟ: ಕಣ್ಗಾವಲಿಗೆ ವಿಶೇಷ ಸಮಿತಿ ರಚಿಸಿದ ಭಾರತ ಸರ್ಕಾರ, ಜಿನೋಮ್ ಸೀಕ್ವೆನ್ಸ್ ಹೆಚ್ಚಿಸಲು ನಿರ್ಧಾರ

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here