Home Uncategorized ಬಳ್ಳಾರಿ, ಜಯಮಹಲ್ ರಸ್ತೆ ಅಗಲೀಕರಣ: ವಿಸ್ತೃತ ವಿವರಣೆ ಒಳಗೊಂಡ ಸ್ಥಿತಿಗತಿ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌...

ಬಳ್ಳಾರಿ, ಜಯಮಹಲ್ ರಸ್ತೆ ಅಗಲೀಕರಣ: ವಿಸ್ತೃತ ವಿವರಣೆ ಒಳಗೊಂಡ ಸ್ಥಿತಿಗತಿ ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

24
0

ಬೆಂಗಳೂರಿನ ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ 18ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಬುಧವಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ನಿರ್ದೇಶಿಸಿದೆ. ಬೆಂಗಳೂರು: ಬೆಂಗಳೂರಿನ ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ 18ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಬುಧವಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್‌ ನಿರ್ದೇಶಿಸಿದೆ.

ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ನಗರದ ಸಮರ್ಪಣಾ ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕಾವೇರಿ ಚಿತ್ರಮಂದಿರ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಹಾಗೂ ಜಯಮಹಲ್‌ ರಸ್ತೆಯಲ್ಲಿ ಕೈಗೊಂಡಿರುವ ಕೆಲಸದ ಬಗ್ಗೆ ಬಿಬಿಎಂಪಿಯು ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿತು. “ಬಹುತೇಕ ಕೆಲಸ ಮುಗಿದಿದ್ದು, ಬಾಕಿ ಕೆಲಸವನ್ನು ಆದಷ್ಟು ಶೀಘ್ರದಲ್ಲಿ ಮಾಡಲಾಗುವುದು. ಹೆಚ್ಚೆಂದರೆ ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು” ಎಂದು ಬಿಬಿಎಂಪಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪೀಠವು ರಸ್ತೆ ಅಗಲೀಕರಣದ ಒಂದು ಭಾಗದ ಕುರಿತು ಮಾತ್ರ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದಿತು.

ಬಿಬಿಎಂಪಿ ಪರ ವಕೀಲರು “ಬಳ್ಳಾರಿ ರಸ್ತೆಯಲ್ಲಿನ ಗಾಯತ್ರಿ ವಿಹಾರ ದ್ವಾರದಿಂದ ಕಾವೇರಿ ಚಿತ್ರಮಂದಿರ ಜಂಕ್ಷನ್‌ವರೆಗಿನ ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ” ಎಂದು ಹೇಳಿದರು. ಇದಕ್ಕೆ ಪೀಠವು ಇಡೀ ರಸ್ತೆ ಅಗಲೀಕರಣದ ವಾಸ್ತವಿಕ ಸ್ಥಿತಿಗತಿ ತಿಳಿಸಬೇಕು. ಅಲ್ಲದೇ ರಸ್ತೆ ಅಗಲೀಕರಣ ಪೂರ್ಣಗೊಳಿಸಲು ಎಷ್ಟು ಸಮಯಬೇಕು. ಭಾರಿ ಸಂಚಾರ ದಟ್ಟಣೆಯ ನಡುವೆ ಅಗಲೀಕರಣ ಕೆಲಸ ನಡೆಯುತ್ತಿರುವುದರಿಂದ ಅವಘಡ ತಪ್ಪಿಸಲು ಬಿಬಿಎಂಪಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಬೇಕು ಎಂದಿತು.

ಅಂತಿಮವಾಗಿ “ಬಿಬಿಎಂಪಿಯು ಸೂಕ್ತ, ಸಮಗ್ರ, ವಿಸ್ತೃತ ಪ್ರತಿಕ್ರಿಯೆಯನ್ನು ಅನುಪಾಲನಾ ಅಥವಾ ಸ್ಥಿತಿಗತಿ ವರದಿಯ ರೂಪದಲ್ಲಿ ಸಲ್ಲಿಸಬೇಕು. ಮೇಖ್ರಿ ವೃತ್ತದಿಂದ ಕಾವೇರಿ ಜಂಕ್ಷನ್‌ ಹಾಗೂ ಜಯಮಹಲ್‌ ರಸ್ತೆಯಿಂದ ಕಂಟೋನ್ಮೆಂಟ್‌ವರೆಗಿನ ಅಗತ್ಯವಾದ ಎಲ್ಲಾ ವಾಸ್ತವಿಕ ವಿಚಾರಗಳನ್ನು ಒಳಗೊಂಡ ಅಂಶಗಳೂ ಅದರಲ್ಲಿ ಸೇರಿರಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಜಯಮಹಲ್‌ ರಸ್ತೆ (ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣ) ಮತ್ತು ಬಳ್ಳಾರಿ ರಸ್ತೆ (ಮೇಖ್ರಿ ವೃತ್ತದಿಂದ ಬಿಡಿಎ ಜಂಕ್ಷನ್)‌ ವಿಸ್ತರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು ಅರ್ಜಿದಾರರ ದೂರಾಗಿದೆ. ವಕೀಲ ಜಿ ಆರ್‌ ಮೋಹನ್‌ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು.

LEAVE A REPLY

Please enter your comment!
Please enter your name here