ಯಡಿಯೂರಿನಲ್ಲಿ ಅ.ನ.ಕೃ ಕನ್ವೆನ್ಷನ್ ಸೆಂಟರ್, ಡಾ. ಪುನೀತ್ ರಾಜ್ಕುಮಾರ್ ಸಭಾಂಗಣ ಲೋಕಾರ್ಪಣೆ
ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ನಲ್ಲಿ ನಿರ್ಮಿಸಲಾದ ಅ.ನ. ಕೃಷ್ಣರಾಯ ಕನ್ವೆನ್ಷನ್ ಸೆಂಟರ್ ಮತ್ತು ಡಾ. ಪುನೀತ್ ರಾಜ್ಕುಮಾರ್ ಸಭಾಂಗಣವನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಅ.ನ.ಕೃ ಅವರ ಪುತ್ರ ಗೌತಮ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಹಾಗೂ ಮಾಜಿ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಅವರು ಸೌಲಭ್ಯಗಳನ್ನು ಉದ್ಘಾಟಿಸಿದರು.
ಮಧ್ಯಮ, ಕೆಳಮಧ್ಯಮ ಮತ್ತು ಬಡ ಕುಟುಂಬಗಳಿಗೆ ವಿವಾಹ, ನಿಶ್ಚಿತಾರ್ಥ ಹಾಗೂ ಆರತಕ್ಷತೆಯಂತಹ ಕಾರ್ಯಕ್ರಮಗಳನ್ನು ಕಡಿಮೆ ವೆಚ್ಚದಲ್ಲಿ ನಡೆಸಲು ಸಂಪೂರ್ಣ ಹವಾನಿಯಂತ್ರಿತ ಕನ್ವೆನ್ಷನ್ ಸೆಂಟರ್ ನಿರ್ಮಿಸಲಾಗಿದೆ. ಚಲನಚಿತ್ರೋತ್ಸವ, ಸಿನಿಮಾ ಆಡಿಯೊ-ವಿಡಿಯೊ ಬಿಡುಗಡೆ, ಸಾಂಸ್ಕೃತಿಕ ಮತ್ತು ರಂಗಭೂಮಿ ಕಾರ್ಯಕ್ರಮಗಳು ಹಾಗೂ ಶಾಲಾ-ಕಾಲೇಜು ವಾರ್ಷಿಕೋತ್ಸವಗಳಿಗೆ ಸಭಾಂಗಣವನ್ನು ಬಳಸಬಹುದು.
ವಿವಾಹ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಕನ್ವೆನ್ಷನ್ ಸೆಂಟರ್ ₹75,000 ಬಾಡಿಗೆಗೆ ಹಾಗೂ ಸಭಾಂಗಣವನ್ನು ₹25,000ಕ್ಕೆ ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದು ಎನ್.ಆರ್. ರಮೇಶ್ ತಿಳಿಸಿದರು.
ಹಳೆಯ ಪಾಲಿಕೆ ಕಟ್ಟಡದ ಜಾಗದಲ್ಲಿ ಸುಸಜ್ಜಿತ ಸಾರ್ವಜನಿಕ ಸೌಲಭ್ಯ ನಿರ್ಮಿಸಲಾಗಿದೆ ಎಂದು ಅಶೋಕ್ ಹೇಳಿದರು. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರದೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು ಎಂದರು.
ಪಾಲಿಕೆ ಚುನಾವಣೆಗಳನ್ನು ಶೀಘ್ರ ನಡೆಸಬೇಕು ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದರು. ಜನರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸುವಲ್ಲಿ ಚುನಾಯಿತ ಪಾಲಿಕೆ ಸದಸ್ಯರ ಪಾತ್ರ ಮುಖ್ಯ ಎಂದು ಹೇಳಿದರು.
ಸಾರ್ವಜನಿಕರು ಕಡಿಮೆ ಬಾಡಿಗೆಯ ಈ ಸೌಲಭ್ಯಗಳ ಸದುಪಯೋಗ ಪಡೆಯಬೇಕು ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಮನವಿ ಮಾಡಿದರು.