ಮೆಟಾ ಭಾರತದಲ್ಲಿ ತಮ್ಮ ಖಾತೆಗೆ ನಿರ್ಬಂಧ ವಿಧಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪ
ನವದೆಹಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಭಾರತದಲ್ಲಿ ತಮ್ಮ ಮೆಟಾ ಖಾತೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಆರೋಪಿಸಿ, ಈ ಕುರಿತು ಕಂಪನಿಯಿಂದ ಸ್ಪಷ್ಟನೆ ಕೋರಿದ್ದಾರೆ.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ @Meta ಮತ್ತು @MetaIndia ಅನ್ನು ಉಲ್ಲೇಖಿಸಿರುವ ಕೇಜ್ರಿವಾಲ್, ತಮ್ಮ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದ್ದು, ದೇಶದಲ್ಲಿ ಅದು ಲಭ್ಯವಿಲ್ಲ ಎಂದು ಹೇಳಿದ್ದಾರೆ.
ಮೆಟಾ ಸಂಸ್ಥೆಯ ಭಾರತ ಕಚೇರಿಯಲ್ಲಿ ಮೌಖಿಕವಾಗಿ ವಿಚಾರಿಸಿದಾಗ ತಮ್ಮ ಖಾತೆಗೆ ಭಾರತದಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಲಾಯಿತು. ಆದರೆ, ನಿರ್ಬಂಧಕ್ಕೆ ಕಾರಣವೇನು ಎಂಬುದನ್ನು ಯಾರೂ ತಿಳಿಸಿಲ್ಲ. ಅದನ್ನು ಹೇಗೆ ತೆರವುಗೊಳಿಸಬಹುದು ಎಂಬ ಬಗ್ಗೆಯೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಕಳುಹಿಸಿದ ಇ-ಮೇಲ್ಗಳಿಗೆ ಕೇವಲ ಸ್ವೀಕೃತಿ ಸಂದೇಶಗಳು ಮಾತ್ರ ಬಂದಿದ್ದು, ಯಾವುದೇ ಸ್ಪಷ್ಟ ಉತ್ತರ ದೊರೆತಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅದೇ ಪೋಸ್ಟ್ನಲ್ಲಿ ಅವರು ಮೆಟಾ ಸಂಸ್ಥೆಯ ಕಾರ್ಯವೈಖರಿಯನ್ನು ಟೀಕಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡಕ್ಕೆ ಕಂಪನಿ ಮಣಿದಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳಿಗೆ ಸುದ್ದಿಯನ್ನು ಪ್ರಕಟಿಸುವ ವೇಳೆಯವರೆಗೆ ಮೆಟಾ ಸಂಸ್ಥೆಯಿಂದ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ಬಂದಿರಲಿಲ್ಲ.
