ಐದು ಅಡಿಪಾಯಗಳ ಮೂಲಕ ರಾಜ್ಯದ ಡೀಪ್ಟೆಕ್ ಪರಿಸರ ವ್ಯವಸ್ಥೆ ಬಲಪಡಿಸಲಾಗುವುದು: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಪ್ರತಿಭೆಗೆ ಸಾಣೆ ಹಿಡಿಯುವುದು, ಸಂಶೋಧನೆಗೆ ಉತ್ತೇಜನ, ನವೋದ್ಯಮಗಳಿಗೆ ಬೆಂಬಲ, ಆಡಳಿತದಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಜಾಣ ಆಡಳಿತ (ಐ-ಜಿ) ಎಂಬ ಐದು ಪ್ರಮುಖ ಅಡಿಪಾಯಗಳ ಮೇಲೆ ಕರ್ನಾಟಕದ ಡೀಪ್ಟೆಕ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಹೇಳಿದರು.
ನಗರದಲ್ಲಿ ನಾಸ್ಕಾಂ ಆಯೋಜಿಸಿದ್ದ ‘ಫ್ಯೂಚರ್ ಫೋರ್ಜ್ – ಚಾರ್ಟಿಂಗ್ ಇಂಡಿಯಾಸ್ ಡೀಪ್ಟೆಕ್ ಆರ್ಕಿಟೆಕ್ಚರ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಭಾಗಿತ್ವವೇ ಕರ್ನಾಟಕವನ್ನು ದೇಶದ ಪ್ರಮುಖ ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸಿದ್ದು, ಇದೇ ಮಾದರಿಯಲ್ಲಿ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (ML), ರೋಬೋಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್ ಹಾಗೂ ಜೈವಿಕ ತಂತ್ರಜ್ಞಾನ ಸೇರಿದಂತೆ ಸುಧಾರಿತ ತಂತ್ರಜ್ಞಾನ ಕ್ಷೇತ್ರಗಳನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಹೇಳಿದರು.
ನಿಪುಣ ಕರ್ನಾಟಕ ಯೋಜನೆಯಡಿ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ, ತಯಾರಿಕೆ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಕೌಶಲಾಭಿವೃದ್ಧಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಕೈಗಾರಿಕೆ–ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸ್ಥಾಪಿತವಾಗಿರುವ 20ಕ್ಕೂ ಹೆಚ್ಚು ಶ್ರೇಷ್ಠತಾ ಕೇಂದ್ರಗಳು ಸಂಶೋಧನೆಯನ್ನು ವಾಣಿಜ್ಯ ಉತ್ಪನ್ನಗಳಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದುವರೆಗೆ 1,000ಕ್ಕೂ ಹೆಚ್ಚು ಬೌದ್ಧಿಕ ಆಸ್ತಿ ಹಕ್ಕುಗಳು (IP) ಸೃಷ್ಟಿಯಾಗಿವೆ ಎಂದು ಹೇಳಿದರು.
ಎಲೆವೇಟ್ ಮತ್ತು ಎಲೆವೇಟ್ ನೆಕ್ಸ್ಟ್ ಯೋಜನೆಗಳಡಿ 1,500ಕ್ಕೂ ಹೆಚ್ಚು ನವೋದ್ಯಮಗಳಿಗೆ ಅನುದಾನ ನೀಡಲಾಗಿದೆ. ಡೀಪ್ಟೆಕ್ ಸ್ಟಾರ್ಟ್ಅಪ್ಗಳಿಗೆ ₹1 ಕೋಟಿವರೆಗೆ ಆರ್ಥಿಕ ನೆರವು, ಮಾರ್ಗದರ್ಶನ ಹಾಗೂ ಜಾಗತಿಕ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
‘ಗವರ್ನ್ಮೆಂಟ್ ಫಸ್ಟ್’ ಪರಿಕಲ್ಪನೆಯಡಿ ಸರ್ಕಾರವೇ ಹೊಸ ತಂತ್ರಜ್ಞಾನಗಳ ಮೊದಲ ಬಳಕೆದಾರನಾಗಿ ಆರೋಗ್ಯ, ಕೃಷಿ ಮತ್ತು ನಗರಾಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನವೋದ್ಯಮಗಳು ಅಭಿವೃದ್ಧಿಪಡಿಸಿರುವ ಪರಿಹಾರಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯವು ಸಾಂಪ್ರದಾಯಿಕ ಇ-ಆಡಳಿತದಿಂದ ಜಾಣ ಆಡಳಿತ (ಐ-ಜಿ) ವ್ಯವಸ್ಥೆಯತ್ತ ಸಾಗುತ್ತಿದ್ದು, ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿ ಹಾಗೂ ದಕ್ಷವಾಗಿ ಒದಗಿಸುವ ಗುರಿಯನ್ನು ಹೊಂದಿದೆ ಎಂದು ಖರ್ಗೆ ಹೇಳಿದರು. ಪರಿಸರ ಸ್ನೇಹಿ ಡೇಟಾ ಸೆಂಟರ್ಗಳ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ಕರ್ನಾಟಕದಲ್ಲಿ ಅಭಿವೃದ್ಧಿಯಾಗುವ ಡೀಪ್ಟೆಕ್ ತಂತ್ರಜ್ಞಾನಗಳು ರಾಜ್ಯಕ್ಕಷ್ಟೇ ಸೀಮಿತವಾಗದೆ ದೇಶ ಹಾಗೂ ಜಗತ್ತಿನ ಪ್ರಮುಖ ಸವಾಲುಗಳಿಗೆ ಪರಿಹಾರ ಒದಗಿಸುವಂತಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
