Home ಬೆಂಗಳೂರು ನಗರ ಬೆಂಗಳೂರಿನ ಯಲಹಂಕ ವಾಯು ನಿಲ್ದಾಣದಲ್ಲಿ ಇಂದಿನಿಂದ ಏರೋ ಇಂಡಿಯಾ 2025 ಉದ್ಘಾಟನೆ

ಬೆಂಗಳೂರಿನ ಯಲಹಂಕ ವಾಯು ನಿಲ್ದಾಣದಲ್ಲಿ ಇಂದಿನಿಂದ ಏರೋ ಇಂಡಿಯಾ 2025 ಉದ್ಘಾಟನೆ

18
0
Aero India 2025

2025-26 ರ ವೇಳೆಗೆ ದೇಶೀಯ ರಕ್ಷಣಾ ಉತ್ಪಾದನೆಯು ರೂ 1.60 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆಯಿದೆ, ರಫ್ತು 30,000 ಕೋಟಿ ರೂ. ತಲುಪಲಿದೆ: ರಕ್ಷಣಾ ಸಚಿವರು

ಬೆಂಗಳೂರು: ಏಷ್ಯಾದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಏರೋ ಇಂಡಿಯಾದ 15 ನೇ ಆವೃತ್ತಿಯನ್ನು 2025ರ ಫೆಬ್ರವರಿ 10 ರಂದು ಕರ್ನಾಟಕದ ಬೆಂಗಳೂರಿನಲ್ಲಿರುವ ಯಲಹಂಕ ವಾಯು ನಿಲ್ದಾಣದಲ್ಲಿ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ.

‘ಬಿಲಿಯನ್ ಅವಕಾಶಗಳಿಗೆ ರನ್ ವೇ (ದಿ ರನ್‌ ವೇ ಟು ಎ ಬಿಲಿಯನ್ ಆಪರ್ಚುನಿಟೀಸ್) ಎಂಬ ವಿಶಾಲ ದೇಯದೊಂದಿಗೆ ಐದು ದಿನಗಳ ಈ ಸಂಭ್ರಮವು ಜಾಗತಿಕ ವೈಮಾನಿಕ ಕಂಪನಿಗಳ ಅತ್ಯಾಧುನಿಕ ಉತ್ಪನ್ನಗಳ ಜೊತೆಗೆ ಭಾರತದ ವೈಮಾನಿಕ ಪರಾಕ್ರಮ ಮತ್ತು ಸ್ಥಳೀಯ ಅತ್ಯಾಧುನಿಕ ನಾವೀನ್ಯತೆಗಳನ್ನು ಪ್ರದರ್ಶಿಸುತ್ತದೆ. ‘ಆತ್ಮನಿರ್ಭರ ಭಾರತ್’ ಮತ್ತು ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ದೂರದೃಷ್ಟಿಗೆ ಅನುಗುಣವಾಗಿ ಈ ಕಾರ್ಯಕ್ರಮವು ದೇಶೀಕರಣ (ಇಂಡಿಯನೈಜೇಷನ್) ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಂತಾರಾಷ್ಟ್ರೀಯ ಸಹಯೋಗಗಳನ್ನು ರೂಪಿಸಲು ಒಂದು ವೇದಿಕೆಯನ್ನು ಒದಗಿಸುತ್ತಿದ್ದು, ಇದರಿಂದಾಗಿ 2047 ರ ವೇಳೆಗೆ ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡುವ ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಂಕಲ್ಪಕ್ಕೆ ಒತ್ತು ನೀಡುತ್ತದೆ.

ಏರ್‌ ಶೋ ಮುನ್ನಾದಿನವಾದ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ಶ್ರೀ ರಾಜನಾಥ್‌ ಸಿಂಗ್, ಏರೋ ಇಂಡಿಯಾ ಒಂದು ನಿರ್ಣಾಯಕ ವೇದಿಕೆ ಎಂದು ಬಣ್ಣಿಸಿದರು. ಇದು ಸರ್ಕಾರದ ಸದೃಢ, ಸಮರ್ಥ ಭಾರತ, ಸುರಕ್ಷಿತ ಮತ್ತು ಸ್ವಾವಲಂಬಿ ಭಾರತದ ದೂರದೃಷ್ಟಿಯನ್ನು ಮುಂದೆ ಕೊಂಡೊಯ್ಯುತ್ತದೆ. “ಏರೋ ಇಂಡಿಯಾ ನವ ಭಾರತದ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಸ್ವಾವಲಂಬನೆಯನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಇದು ಭಾರತದ ರಕ್ಷಣಾ ಸಿದ್ಧತೆಗೆ ನಿರ್ಣಾಯಕ ಮಾತ್ರವಲ್ಲ, ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಮತ್ತು ಜಾಗತಿಕ ಪಾಲುದಾರಿಕೆಗಳನ್ನು ರೂಪಿಸುತ್ತದೆ. ನಮ್ಮ ಮಿತ್ರ ರಾಷ್ಟ್ರಗಳೊಂದಿಗೆ ಸಾಮಾನ್ಯ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಯೋಗವನ್ನು ವೃದ್ಧಿಸುವುದು, ಆಳವಾದ ಸಹಕಾರ ಮತ್ತು ಹಂಚಿಕೆಯ ಪ್ರಗತಿಯನ್ನು ಬೆಳೆಸುವುದು ನಮ್ಮ ಗುರಿಯಾಗಿದೆ. ಈ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರದರ್ಶನ ಮಾತ್ರವಲ್ಲ, ನಮ್ಮ ಯುವಕರಿಗೆ ಸ್ಫೂರ್ತಿಯ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ, ವೈಜ್ಞಾನಿಕ ಮನೋಧರ್ಮ ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸುತ್ತದೆ, ”ಎಂದು ಅವರು ಹೇಳಿದರು.

ಒಟ್ಟು 42,000 ಚದರ ಮೀಟರ್ ವಿಸ್ತೀರ್ಣದಲ್ಲಿ ಮತ್ತು 150 ವಿದೇಶಿ ಕಂಪನಿಗಳು ಸೇರಿದಂತೆ 900 ಕ್ಕೂ ಅಧಿಕ ಪ್ರದರ್ಶಕರ ಭಾಗವಹಿಸುವಿಕೆಯೊಂದಿಗೆ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಈವರೆಗಿನ ಅತಿದೊಡ್ಡ ಏರೋ ಇಂಡಿಯಾ ಪ್ರದರ್ಶನವಾಗಲಿದೆ. 90 ಕ್ಕೂ ಅಧಿಕ ದೇಶಗಳ ಪಾಲ್ಗೊಳ್ಳುವಿಕೆಯು ಭಾರತದ ವೈಮಾನಿಕ ಮತ್ತು ರಕ್ಷಣಾ ಸಾಮರ್ಥ್ಯಗಳಲ್ಲಿ ಬೆಳೆಯುತ್ತಿರುವ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದ್ದಾರೆ. “ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಕ್ಷಣಾ ಮಂತ್ರಿಗಳು ಅಥವಾ ಸುಮಾರು 30 ದೇಶಗಳ ಪ್ರತಿನಿಧಿಗಳು ಆಗಮಿಸಿದ್ದಾರೆ. 43 ದೇಶಗಳ ವಾಯುಪಡೆಯ ಮುಖ್ಯಸ್ಥರು ಮತ್ತು ಕಾರ್ಯದರ್ಶಿಗಳ ಉಪಸ್ಥಿತಿಯು – ಭಾರತಕ್ಕೆ ಮಾತ್ರವಲ್ಲ, ಇಡೀ ಅಂತಾರಾಷ್ಟ್ರೀಯ ರಕ್ಷಣಾ ಸಮುದಾಯಕ್ಕೆ ಈ ಕಾರ್ಯಕ್ರಮದ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ ” ಎಂದು ಅವರು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ಮತ್ತುವೈಮಾನಿಕ ವಲಯದ ಪರಿವರ್ತನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ರಕ್ಷಣಾ ಸಚಿವರು, ಇಂದು ಭಾರತವು ದೇಶದೊಳಗೆ ಪ್ರಮುಖ ವೇದಿಕೆಗಳು ಮತ್ತು ಉಪಕರಣಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಸಮರ್ಥವಾಗಿದೆ. ಇದು ದೇಶದೊಳಗೆ ವಿಶಾಲವಾದ ಪೂರೈಕೆ ಸರಣಿಯನ್ನು ಯಶಸ್ವಿಯಾಗಿ ಸ್ಥಾಪಿಸಿದೆ ಎಂದು ಪ್ರತಿಪಾದಿಸಿದರು. “ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ ಪ್ರಚಂದ್ ಮತ್ತು ಸಿ-295 ಸಾರಿಗೆ ವಿಮಾನಗಳಂತಹ ಸುಧಾರಿತ ವೇದಿಕೆಗಳನ್ನು ಈಗ ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ. ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ದೇಶದೊಳಗೆ ತಯಾರಿಸಲು ನಾವು ದೃಢ ಸಂಕಲ್ಪ ಮಾಡಿದ್ದೇವೆ. ಅಗ್ನಿ ಕ್ಷಿಪಣಿ, ಅಸ್ತ್ರ ಕ್ಷಿಪಣಿ ವ್ಯವಸ್ಥೆ ಮತ್ತು ಪಿನಾಕಾ ಕ್ಷಿಪಣಿ ವ್ಯವಸ್ಥೆಯ ಸುಧಾರಿತ ಪರಿವರ್ತನೆಗಳಿಂದ ಹಿಡಿದು ಅತ್ಯಾಧುನಿಕ ಹೈಪರ್ ಸಾನಿಕ್ ಕ್ಷಿಪಣಿ ವ್ಯವಸ್ಥೆ ಮತ್ತು ಆಕಾಶ್ ವಾಯು ರಕ್ಷಣಾ ವ್ಯವಸ್ಥೆಯವರೆಗೆ, ನಾವು ಹಲವು ಯಶೋಗಾಥೆಗಳನ್ನು ಸಾಧಿಸಿದ್ದೇವೆ. ಈ ಸಾಧನೆಗಳು ನಮ್ಮ ರಕ್ಷಣಾ ವಲಯವನ್ನು ಬಲಪಡಿಸುವಲ್ಲಿ ಹಾಗೂ ಭಾರತವನ್ನು ಹೆಚ್ಚು ಸ್ವಾವಲಂಬಿ ಮತ್ತು ಸುರಕ್ಷಿತವಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ’’ ಎಂದು ಅವರು ಹೇಳಿದರು.
ಶಸ್ತ್ರಾಸ್ತ್ರಗಳ ಕಾರ್ಖಾನೆ ಮಂಡಳಿಯ ಕಾರ್ಪೊರೇಟೀಕರಣದ ನಂತರ, ಹೊಸದಾಗಿ ರೂಪುಗೊಂಡ ಕಂಪನಿಗಳು ರಕ್ಷಣಾ ಉತ್ಪಾದನೆಯಲ್ಲಿ ಅಸಾಧಾರಣ ಉತ್ತಮವಾಗಿ ಕಾರ್ಯನಿರ್ವಹಿಸಲು ಆರಂಭಿಸಿವೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.

“ಉತ್ತಮವಾಗಿ ಯೋಚಿಸಿದ ಮತ್ತು ಉತ್ತಮವಾಗಿ ಅಭಿವೃದ್ಧಿಪಡಿಸಿದ ಯೋಜನೆಯಡಿಯಲ್ಲಿ, ರಕ್ಷಣಾ ಮತ್ತು ವೈಮಾನಿಕ ಉದ್ಯಮಗಳಲ್ಲಿ ಖಾಸಗಿ ವಲಯವನ್ನು ಸಬಲೀಕರಣಗೊಳಿಸಲು ನಾವು ಸಕ್ರಿಯವಾಗಿ ಕೆಲಸ ಮಾಡಿದ್ದೇವೆ. ಇಂದು ಭಾರತವು ಅಭಿವೃದ್ಧಿ ಹೊಂದುತ್ತಿರುವ ಖಾಸಗಿ ರಕ್ಷಣಾ ಉದ್ಯಮವನ್ನು ಹೊಂದಿದ್ದು, ಅದು ತನ್ನನ್ನು ತಾನು ದೃಢವಾಗಿ ಸ್ಥಾಪಿಸಿಕೊಂಡಿದೆ ಮತ್ತು ನಮ್ಮ ರಾಷ್ಟ್ರೀಯ ಭದ್ರತೆಗೆ ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದೆ” ಎಂದು ಅವರು ಹೇಳಿದರು.

1.27 ಲಕ್ಷ ಕೋಟಿ ರೂ.ಗಳ ದಾಖಲೆಯ ಅಂಕಿ ಅಂಶವನ್ನು ದಾಟಿರುವ ರಕ್ಷಣಾ ಉತ್ಪಾದನೆಯು 2025-26 ರ ಅಂತ್ಯದ ವೇಳೆಗೆ 1.60 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎಂದು ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. 21,000 ಕೋಟಿ ರೂ.ಗಳ ದಾಖಲೆಯ ಅಂಕಿ ಅಂಶವನ್ನು ತಲುಪಿದ ರಕ್ಷಣಾ ರಫ್ತು 30,000 ಕೋಟಿ ರೂ.ಗಳ ಗುರಿಯನ್ನು ದಾಟಲಿದೆ ಎಂದು ಹೇಳಿದರು.

ಭಾರತವನ್ನು ಆರ್ಥಿಕ ಸೂಪರ್ ಶಕ್ತಿಯನ್ನಾಗಿ ಮಾಡುವಲ್ಲಿ ರಕ್ಷಣಾ ಕೈಗಾರಿಕಾ ವಲಯವು ವಹಿಸುತ್ತಿರುವ ನಿರ್ಣಾಯಕ ಪಾತ್ರವನ್ನು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. ರಕ್ಷಣಾ ವಲಯದಲ್ಲಿನ ಯಾವುದೇ ಪ್ರಗತಿಯು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವುದಲ್ಲದೆ, ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ರಕ್ಷಣಾ ವಲಯದಲ್ಲಿನ ಅಳವಡಿಸಿಕೊಳ್ಳಲು ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳು ನಾಗರಿಕ ವಲಯದಲ್ಲಿಯೂ ನಾವೀನ್ಯತೆಯನ್ನು ಉತ್ತೇಜಿಸುತ್ತವೆ. ಇದು ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಏರೋ ಇಂಡಿಯಾ ಆರ್ಥಿಕ ಶಕ್ತಿಯ ಮಹತ್ವದ ಚಾಲಕ ಶಕ್ತಿ ಎಂದು ಅವರು ಬಣ್ಣಿಸಿದರು. ಇದು ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಏರೋ ಇಂಡಿಯಾವನ್ನು ವೈಮಾನಿಕ ಮತ್ತು ರಕ್ಷಣಾ ವಲಯದಲ್ಲಿ ಜಾಗತಿಕ ನಾಯಕನಾಗುವ ಭಾರತದ ಪಯಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

15ನೇ ಏರೋ ಇಂಡಿಯಾ 2025 ರ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿದೆ. ಫೆಬ್ರವರಿ 10 ರಿಂದ 12 ರವರೆಗೆ ವ್ಯವಹಾರ ದಿನಗಳನ್ನು ಕಾಯ್ದಿರಿಸಲಾಗಿದ್ದು, 13 ಮತ್ತು 14 ನೇ ತಾರೀಖುಗಳನ್ನು ಸಾರ್ವಜನಿಕ ದಿನಗಳಾಗಿ ಜನರು ಪ್ರದರ್ಶನವನ್ನು ವೀಕ್ಷಿಸಲು ಮೀಸಲಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರ ಸಮಾವೇಶ; ಸಿಇಒಗಳ ದುಂಡುಮೇಜಿನ ಸಭೆ; ಭಾರತ ಮತ್ತು ಐಡಿಇಎಕ್ಸ್ ಮಳಿಗೆಗಳ ಉದ್ಘಾಟನೆ; ಮಂಥನ ಐಡಿಇಎಕ್ಸ್ ಕಾರ್ಯಕ್ರಮ; ಸಮರ್ಥ್ಯ ದೇಶೀಕರಣ ಕಾರ್ಯಕ್ರಮ; ಸಮಾರೋಪ ಸಮಾರಂಭ; ವಿಚಾರ ಸಂಕಿರಣಗಳು; ಉಸಿರುಬಿಗಿ ಹಿಡಿದು ನೋಡುವಂತಹ ರೋಮಾಂಚಕ ವೈಮಾನಿಕ ಪ್ರದರ್ಶನಗಳು ಮತ್ತು ಏರೋಸ್ಪೇಸ್ ಕಂಪನಿಗಳ ಪ್ರದರ್ಶನ ಸೇರಿವೆ.

ರಕ್ಷಣಾ ಸಚಿವರ ಸಮ್ಮೇಳನ

ಜಾಗತಿಕ ಭದ್ರತಾ ಸನ್ನಿವೇಶ ವೇಗವಾಗಿ ವಿಕಸನಗೊಳ್ಳುತ್ತಿರುವ ನಡುವೆ ಮಿತ್ರ ರಾಷ್ಟ್ರಗಳೊಂದಿಗೆ ರಕ್ಷಣಾ ಸಹಕಾರವನ್ನು ಬಲಪಡಿಸುವ ಗುರಿಯೊಂದಿಗೆ ರಕ್ಷಣಾ ಸಚಿವರು ಫೆಬ್ರವರಿ 11 ರಂದು ಹೈಬ್ರಿಡ್ ಮಾದರಿನಲ್ಲಿ ರಕ್ಷಣಾ ಸಚಿವರ ಸಮಾವೇಶದ ಆತಿಥ್ಯ ವಹಿಸಲಿದ್ದಾರೆ. ಈ ವರ್ಷದ ‘ಅಂತಾರಾಷ್ಟ್ರೀಯ ರಕ್ಷಣೆ ಮತ್ತು ಜಾಗತಿಕ ಪಾಲ್ಗೊಳ್ಳುವಿಕೆಯ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದು (ಬ್ರಿಡ್ಜ್)’ ಎಂಬ ವಿಷಯವು ಪೂರೈಕೆ ಸರಣಿ ಸ್ಥಿತಿಸ್ಥಾಪಕತ್ವ ಮತ್ತು ರಕ್ಷಣೆಯಲ್ಲಿ ಕಾರ್ಯತಂತ್ರದ ಸಹಯೋಗದ ಮಹತ್ವವನ್ನು ಒತ್ತಿ ಹೇಳುತ್ತದೆ.

ಕಳೆದ ಆವೃತ್ತಿಯಲ್ಲಿ 27 ರಕ್ಷಣಾ ಸಚಿವರು ಮತ್ತು ಉಪ ರಕ್ಷಣಾ ಸಚಿವರು ಮತ್ತು 15 ರಕ್ಷಣಾ ಮತ್ತು ಸೇವಾ ಮುಖ್ಯಸ್ಥರು ಮತ್ತು 12 ಕಾಯಂ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಈ ವರ್ಷ, 80 ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ಭಾಗವಹಿಸುವಿಕೆ ವಿಸ್ತರಿಸಿದೆ. ರಕ್ಷಣಾ/ಸೇವಾ ಮುಖ್ಯಸ್ಥರು ಮತ್ತು ಮಿತ್ರ ರಾಷ್ಟ್ರಗಳ ಕಾಯಂ ಕಾರ್ಯದರ್ಶಿಗಳ ಜೊತೆಗೆ ಸುಮಾರು 30 ರಕ್ಷಣಾ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಹೂಡಿಕೆ, ಜಂಟಿ ಉದ್ಯಮಗಳು ಮತ್ತು ಸಹ-ಉತ್ಪಾದನೆಯ ಮೂಲಕ ರಕ್ಷಣಾ ಸಾಮರ್ಥ್ಯ ವೃದ್ಧಿ, ಸಂಶೋಧನೆ & ಅಭಿವೃದ್ಧಿಯಲ್ಲಿ ಸಹಯೋಗ, ಕೃತಕ ಬುದ್ಧಿಮತ್ತೆ ಮತ್ತು ಬಾಹ್ಯಾಕಾಶದಲ್ಲಿ ತರಬೇತಿ ಮತ್ತು ತಾಂತ್ರಿಕ ಪ್ರಗತಿ, ಕಡಲ ಭದ್ರತಾ ಸಹಕಾರ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳಂತಹ ಪ್ರಮುಖ ಅಂಶಗಳನ್ನು ಪರಿಹರಿಸಲು ಸಮಾವೇಶವು ನಿರ್ಣಾಯಕ ವೇದಿಕೆಯನ್ನು ಒದಗಿಸುತ್ತದೆ.

ಸಿಇಒಗಳ ದುಂಡು ಮೇಜಿನ ಸಭೆ

ಫೆಬ್ರವರಿ 10 ರಂದು ‘ಜಾಗತಿಕ ತೊಡಗಿಸಿಕೊಳ್ಳುವ ಮೂಲಕ ರಕ್ಷಣಾ ಸಹಕಾರವನ್ನು ಸಕ್ರಿಯಗೊಳಿಸುವುದು (EDGE)’ ಎಂಬ ವಿಷಯದ ಮೇಲೆ ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ 2025ರ ಸಿಇಒಗಳ ದುಂಡುಮೇಜಿನ ಸಭೆ ನಡೆಯಲಿದೆ. 100ಕ್ಕೂ ಅಧಿಕ ಮೂಲ ಸಾಧನ ತಯಾರಕರು (ಒಇಎಂಗಳು) ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ದೃಢಪಡಿಸಿದ್ದಾರೆ. ಇದರಲ್ಲಿ 19 ದೇಶಗಳಿಂದ (ಯುಎಸ್ಎ, ಫ್ರಾನ್ಸ್, ರಷ್ಯಾ, ದಕ್ಷಿಣ ಕೊರಿಯಾ, ಯುಕೆ, ಜಪಾನ್, ಇಸ್ರೇಲ್ ಮತ್ತು ಬ್ರೆಜಿಲ್ ಇತ್ಯಾದಿ) 55, ಭಾರತೀಯ (ಲಾರ್ಸೆನ್ ಮತ್ತು ಟೂಬ್ರೊ, ಭಾರತ್ ಫೋರ್ಜ್ ಲಿಮಿಟೆಡ್, ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್, ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿಮಿಟೆಡ್, ಬ್ರಹ್ಮೋಸ್ ಏರೋಸ್ಪೇಸ್ ಮತ್ತು ಅಶೋಕ್ ಲೇಲ್ಯಾಂಡ್ ಡಿಫೆನ್ಸ್) ಮತ್ತು 16 ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (ಡಿಪಿಎಸ್ ಯುಗಳು) ಸೇರಿವೆ. 2023ರ ಆವೃತ್ತಿಯ ಕಾರ್ಯಕ್ರಮದಲ್ಲಿ ಶ್ರೀ ರಾಜನಾಥ್ ಸಿಂಗ್ 28 ವಿದೇಶಿ ಒಇಎಂಗಳ 73 ಕ್ಕೂ ಅಧಿಕ ಸಿಇಒಗಳು ಮತ್ತು 45 ಭಾರತೀಯ ಒಇಎಂಗಳನ್ನು ಉದ್ದೇಶಿಸಿ ಮಾತನಾಡಿದ್ದರು.

ರ್‌ಬಸ್ (ಫ್ರಾನ್ಸ್), ಅಲ್ಟ್ರಾ ಮ್ಯಾರಿಟೈಮ್ (ಯುಎಸ್‌ಎ), ಜಿಎನ್‌ಟಿ (ದಕ್ಷಿಣ ಕೊರಿಯಾ), ಜಾನ್ ಕಾಕೆರಿಲ್ ಡಿಫೆನ್ಸ್ (ಯುಕೆ), ಮಿತ್ಸುಬಿಷಿ (ಜಪಾನ್), ರಫೇಲ್ ಅಡ್ವಾನ್ಸ್ ಡಿಫೆನ್ಸ್ ಸಿಸ್ಟಮ್ (ಇಸ್ರೇಲ್), ಸಫ್ರಾನ್ (ಫ್ರಾನ್ಸ್) ಮತ್ತು ಲೈಬರ್ ಏರೋಸ್ಪೇಸ್ (ಫ್ರಾನ್ಸ್) ಸೇರಿದಂತೆ ಪ್ರಮುಖ ವಿದೇಶಿ ಒಇಎಂಗಳು ತಮ್ಮ ಭವಿಷ್ಯದ ಯೋಜನೆಗಳು, ಜಂಟಿ ಉದ್ಯಮಗಳು, ಸಹಯೋಗಗಳು, ಬಿಡಿಭಾಗಗಳ ಉತ್ಪಾದನೆಗಾಗಿ ಭಾರತೀಯ ಕಂಪನಿಗಳೊಂದಿಗೆ ಪಾಲುದಾರಿಕೆ, ಏರೋ-ಎಂಜಿನ್‌ಗಳ ಅಭಿವೃದ್ಧಿ, ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ (ಎಂಆರ್‌ಒ) ಸೌಲಭ್ಯಗಳ ಸ್ಥಾಪನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳ ಸ್ಥಾಪನೆ ಇತ್ಯಾದಿಗಳನ್ನು ಪ್ರಮುಖವಾಗಿ ಪ್ರದರ್ಶಿಸುವ ನಿರೀಕ್ಷೆಯಿದೆ.

ಇಂಡಿಯಾ ಪೆವಿಲಿಯನ್

ಭಾರತೀಯ ರಕ್ಷಣಾ ಕೈಗಾರಿಕೆಗಳು ತಮ್ಮ ವಿನ್ಯಾಸ, ಅಭಿವೃದ್ಧಿ, ನಾವೀನ್ಯತೆ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಇಂಡಿಯಾ ಪೆವಿಲಿಯನ್ ಒಂದು ಅವಕಾಶವನ್ನು ಒದಗಿಸುತ್ತದೆ. ಅದನ್ನು ಫೆಬ್ರವರಿ 10 ರಂದು ರಕ್ಷಣಾ ಸಚಿವರು ಉದ್ಘಾಟಿಸಲಿದ್ದಾರೆ. ಭಾರತೀಯ ಮಳಿಗೆಯಲ್ಲಿ ನಡೆಯುವ ಭವ್ಯ ಪ್ರದರ್ಶನವು ‘ಸ್ವಾವಲಂಬನೆಯ ಹಾರಾಟ’ವನ್ನು ಸೂಚಿಸುತ್ತದೆ, ಇದು ಜಾಗತಿಕ ಬಾಹ್ಯಾಕಾಶ ಮತ್ತು ರಕ್ಷಣಾ ಶಕ್ತಿ ಕೇಂದ್ರವಾಗುವ ಭಾರತದ ಪಯಣವನ್ನು ಒಳಗೊಂಡಿದೆ.
ಇಂಡಿಯನ್ ಪೆವಿಲಿಯನ್ ಅನ್ನು ಐದು ವಿಭಿನ್ನ ವಲಯಗಳಾಗಿ ವಿಂಗಡಿಸಲಾಗುವುದು, ಇದು ವಾಯು ವಿಮಾನಯಾನ, ಭೂ ವಿಮಾನಯಾನ ಮತ್ತು ನೌಕಾ ವಿಮಾನಯಾನ, ಬಾಹ್ಯಾಕಾಶ ಮತ್ತು ಸ್ಥಾಪಿತ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸ್ಥಳೀಯ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. 275 ಕ್ಕೂ ಅಧಿಕ ಪ್ರದರ್ಶನಗಳು ವಿವಿಧ ಮಾಧ್ಯಮಗಳ ಮೂಲಕ ಪ್ರದರ್ಶನಗೊಳ್ಳಲಿವೆ, ಇವುಗಳನ್ನು ದೇಶದ ಸಂಪೂರ್ಣ ರಕ್ಷಣಾ ಪೂರಕ ವ್ಯವಸ್ಥೆಯಿಂದ ಪ್ರತಿನಿಧಿಸಲಾಗುತ್ತದೆ, ಅದರಲ್ಲಿ ಡಿಪಿಎಸ್ ಯುಗಳು, ವಿನ್ಯಾಸ ಸಂಸ್ಥೆಗಳು, ಎಂಎಸ್ ಎಂಇಗಳು ಮತ್ತು ನವೋದ್ಯಮಗಳು ಸೇರಿದಂತೆ ಖಾಸಗಿ ಕಾರ್ಪೊರೇಟ್‌ಗಳು ಸೇರಿವೆ. ಕೇಂದ್ರ ಪ್ರದೇಶದ ಪ್ರದರ್ಶನಗಳಲ್ಲಿ ಸುಧಾರಿತ ಮಧ್ಯಮ ಯುದ್ಧ ವಿಮಾನ, ಯುದ್ಧ ವಾಯು ತಂಡ ವ್ಯವಸ್ಥೆ, ಟ್ವಿನ್-ಎಂಜಿನ್ ಡೆಕ್-ಆಧಾರಿತ ಫೈಟರ್ ಸೇರಿದಂತೆ ಮಾರ್ಕ್ಯೂ ವೇದಿಕೆಗಳ ಗಮನಾರ್ಹ ಪ್ರದರ್ಶನವನ್ನು ಒಳಗೊಂಡಿರುತ್ತವೆ.

ಐಡೆಕ್ಸ್‌ ಪೆವಿಲಿಯನ್

ಐಡಿಇಎಕ್ಸ್ ಪೆವಿಲಿಯನ್ ಅನ್ನು ಫೆಬ್ರವರಿ 10 ರಂದು ರಕ್ಷಣಾ ಸಚಿವರು ಉದ್ಘಾಟಿಸಲಿದ್ದಾರೆ. ಇದು ಅತ್ಯಾಧುನಿಕ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದ್ದು, ಇದು ಭಾರತದ ರಕ್ಷಣಾ ನಾವೀನ್ಯತೆ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಪ್ರಮುಖ ನಾವೀನ್ಯಕಾರರು ವೈಮಾನಿಕ, ಡೆಫ್‌ಸ್ಪೇಸ್, ಏರೋ ಸ್ಟ್ರಕ್ಚರ್ಸ್, ಆಂಟಿ-ಡ್ರೋಣ್‌ ಸಿಸ್ಟಮ್ಸ್, ಸ್ವಾಯತ್ತ ವ್ಯವಸ್ಥೆಗಳು, ರೊಬೊಟಿಕ್ಸ್, ಸಂವಹನ, ಸೈಬರ್ ಭದ್ರತೆ, ಕಣ್ಗಾವಲು ಮತ್ತು ಟ್ರ್ಯಾಕಿಂಗ್, ಮಾನವರಹಿತ ನೆಲದ ವಾಹನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಸುಧಾರಿತ ವಲಯಗಳನ್ನು ವ್ಯಾಪಿಸಿರುವ ತಮ್ಮ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನಗಳನ್ನು ಪ್ರದರ್ಶಿಸುತ್ತಾರೆ. ಐಡಿಇಎಕ್ಸ್ (ಎಡಿಐಟಿಐ) ಯೋಜನೆಯೊಂದಿಗೆ ನವೀನ ತಂತ್ರಜ್ಞಾನಗಳ ಏಸಿಂಗ್ ಡೆವಲಪ್‌ಮೆಂಟ್‌ನ ವಿಜೇತರನ್ನು ಪ್ರಮುಖವಾಗಿ ಗುರುತಿಸಲು ಮೀಸಲಾದ ವಿಭಾಗವನ್ನು ಪೆವಿಲಿಯನ್ ಒಳಗೊಂಡಿರುತ್ತದೆ, ಇದು ನಿರ್ಣಾಯಕ ಮತ್ತು ಸ್ಥಾಪಿತ ತಂತ್ರಜ್ಞಾನಗಳಲ್ಲಿ ಅವರ ಅದ್ಭುತ ಕೆಲಸವನ್ನು ಪ್ರದರ್ಶಿಸುತ್ತದೆ.

ಐಡಿಇಎಕ್ಸ್ 600 ಕ್ಕೂ ಅಧಿಕ ನವೋದ್ಯಮಗಳು ಮತ್ತು ಎಂಎಸ್‌ಎಂಇಗಳನ್ನು ಯಶಸ್ವಿಯಾಗಿ ಆನ್‌ಬೋರ್ಡ್ ಮಾಡಿದೆ, ಇದು ನಾವೀನ್ಯತೆಯನ್ನು ಬೆಳೆಸುವಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಅಲ್ಲದೆ, ಐಡಿಇಎಕ್ಸ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ 40 ಮೂಲ ಮಾದರಿಗಳು ಖರೀದಿಗೆ ಅಧಿಕೃತ ಅನುಮತಿಯನ್ನು ಪಡೆದಿವೆ, ಈಗಾಗಲೇ 1,560 ಕೋಟಿ ರೂ. ಗೂ ಅಧಿಕ ಮೌಲ್ಯದ 31 ಖರೀದಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಮಂಥನ್

ಪ್ರಮುಖ ವಾರ್ಷಿಕ ರಕ್ಷಣಾ ನಾವೀನ್ಯತೆ ಕಾರ್ಯಕ್ರಮವಾದ ಮಂಥನ್ 2025 ಅನ್ನು ಫೆಬ್ರವರಿ 12 ರಂದು ರಕ್ಷಣಾ ಸಚಿವರು ಉದ್ಘಾಟಿಸಲಿದ್ದಾರೆ. ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ – ಡಿಫೆನ್ಸ್ ಇನ್ನೋವೇಶನ್ ಆರ್ಗನೈಸೇಶನ್ (iDEX-DIO) ಆಯೋಜಿಸಿರುವ ಈ ಕಾರ್ಯಕ್ರಮವು, ನವೋದ್ಯಮಿಗಳು, ಉದ್ಯಮ ಮುಖಂಡರು, ಶೈಕ್ಷಣಿಕ ಸಂಸ್ಥೆಗಳು, ಇನ್ಕ್ಯುಬೇಟರ್‌ಗಳು, ಹೂಡಿಕೆದಾರರು, ಚಿಂತಕರು, ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ ರಕ್ಷಣಾ ನಾವೀನ್ಯತೆ ಪರಿಸರ ವ್ಯವಸ್ಥೆಯ ಪಾಲುದಾರರನ್ನು ಒಗ್ಗೂಡಿಸುತ್ತದೆ.

ರಕ್ಷಣಾ ಸ್ಟಾರ್ಟ್-ಅಪ್‌ಗಳು ಮತ್ತು ಎಂಎಸ್ ಎಂಇ ಗಳನ್ನು ಬೆಂಬಲಿಸುವುದು, ನಾವೀನ್ಯತೆ ಸಾಮರ್ಥ್ಯಗಳನ್ನು ವೃದ್ಧಿಸುವುದು ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯೊಳಗೆ ಕಾರ್ಯತಂತ್ರದ ಸಹಯೋಗಗಳನ್ನು ಬೆಳೆಸುವುದರ ಮೇಲೆ ಕೇಂದ್ರೀಕರಿಸಿ, ವಲಯದಲ್ಲಿ ಉದಯೋನ್ಮುಖ ಸವಾಲುಗಳು ಮತ್ತು ಅವಕಾಶಗಳ ಕುರಿತು ಮಂಥನ್ ಚರ್ಚಿಸುತ್ತದೆ. ಇದು ಐಡೆಕ್ಸ್‌ನ ಪ್ರಮಾಣ ಮತ್ತು ವೇಗಕ್ಕೆ ಸಾಕ್ಷಿಯಾಗಿದೆ, ಇದು ರಕ್ಷಣಾ ನಾವೀನ್ಯತೆಯಲ್ಲಿ ಮಾಡಿದ ತ್ವರಿತ ಪ್ರಗತಿಯನ್ನು ಮತ್ತು ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಪರಿವರ್ತಿಸುವಲ್ಲಿ ನವೋದ್ಯಮಗಳ ಪ್ರಮುಖ ಪಾತ್ರವನ್ನು ಪ್ರದರ್ಶಿಸುತ್ತದೆ.

ಸಮರ್ಥ್ಯ

ರಕ್ಷಣಾ ವಲಯದಲ್ಲಿ ದೇಶೀಕರಣ ಮತ್ತು ನಾವೀನ್ಯತೆಯ ಯಶೋಗಾಥೆಯ ಕುರಿತು, ಫೆಬ್ರವರಿ 12 ರಂದು ರಕ್ಷಣಾ ಸಚಿವರು ಅಧ್ಯಕ್ಷತೆ ವಹಿಸಲಿರುವ ಸಮಾರೋಪ ಸಮಾರಂಭದ ಜೊತೆಗೆ ‘ಸಮರ್ಥ್ಯ’ ಎಂಬ ವಿಷಯದ ಮೇಲೆ ದೇಶೀಕರಣ ಕಾರ್ಯಕ್ರಮ ನಡೆಯಲಿದೆ. ಏರೋ ಇಂಡಿಯಾದ ವೇಳೆ ಈ ಕಾರ್ಯಕ್ರಮವು ಇದೇ ಮೊದಲನೆಯದು, ಏಕೆಂದರೆ ಇದು ಡಿಪಿಎಸ್‌ಯುಗಳು, ಡಿಆರ್‌ಡಿಒ ಮತ್ತು ಸೇವೆಗಳಿಂದ ಖಾಸಗಿ ವಲಯದ ಒಳಗೊಳ್ಳುವಿಕೆಯೊಂದಿಗೆ ಸ್ಥಳೀಯವಾಗಿ ಉತ್ಪಾದಿಸಲಾದ ಕೆಲವು ಪ್ರಮುಖ ವಸ್ತುಗಳನ್ನು ಪ್ರದರ್ಶಿಸುವ ಮೂಲಕ ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ಥಳೀಯ ಜಾಣ್ಮೆಯನ್ನು ಪ್ರದರ್ಶಿಸುತ್ತದೆ.

ದ್ವಿಪಕ್ಷೀಯ ಸಭೆಗಳು

ಏರೋ ಇಂಡಿಯಾ 2025 ರ ಸಂದರ್ಭದಲ್ಲಿ ರಕ್ಷಣಾ ಸಚಿವರು/ರಕ್ಷಣಾ ಖಾತೆ ರಾಜ್ಯ ಸಚಿವರು /ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು/ಸೇವಾ ಮುಖ್ಯಸ್ಥರು/ರಕ್ಷಣಾ ಕಾರ್ಯದರ್ಶಿ/ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಮಟ್ಟದಲ್ಲಿ ದ್ವಿಪಕ್ಷೀಯ ಸಭೆಗಳು ನಡೆಯಲಿವೆ.

ವಿಚಾರಸಂಕಿರಣಗಳು

ಏರೋ ಇಂಡಿಯಾ 2025 ರ ಭಾಗವಾಗಿ ವಿವಿಧ ವಿಷಯಗಳ ಕುರಿತು ಹಲವು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುವುದು. ಫೆಬ್ರವರಿ 11 ರಂದು, ರಕ್ಷಣಾ ಸಚಿವರು ‘ವೈಮಾನಿಕ ಯುದ್ಧಕ್ಕಾಗಿ ಮಾನವರಹಿತ ತಂಡಗಳು – ಗುರಿ ಹೊಂದುವ ಪರಿಕಲ್ಪನೆ’ ಎಂಬ ವಿಷಯದ ಕುರಿತು ಭಾರತೀಯ ವಾಯುಪಡೆ ಆಯೋಜಿಸಿರುವ ವಿಚಾರ ಸಂಕಿರಣವನ್ನು ಮತ್ತು ‘ವಿಕಸಿತ ಭಾರತದೆಡೆಗೆ ಡಿಆರ್ ಡಿಒ ಕೈಗಾರಿಕಾ ಸಮನ್ವಯ’ ಎಂಬ ವಿಷಯದ ಕುರಿತು ಡಿಆರ್ ಡಿಒ ಆಯೋಜಿಸಿರುವ ಮತ್ತೊಂದು ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮಿಷನ್ ಡಿಫ್‌ಸ್ಪೇಸ್: ದೃಷ್ಟಿಯಿಂದ ವಾಸ್ತವಕ್ಕೆ – ಪ್ರಗತಿ ವರದಿ; ಏರೋಸ್ಪೇಸ್ ಸಾಮಗ್ರಿಗಳ ಸ್ಥಳೀಯ ಅಭಿವೃದ್ಧಿ: ಭಾರತದ ಸ್ವಾವಲಂಬನೆಯನ್ನು ಬಲಪಡಿಸುವುದು; ಆತ್ಮನಿರ್ಭರ ಭಾರತೀಯ ನೌಕಾ ವಾಯುಯಾನ 2047 ಮತ್ತು ಅದರ ಸಂಬಂಧಿತ ಪೂರಕ ವ್ಯವಸ್ಥೆಗೆ ಪರಿವರ್ತನೆ; ತಾಂತ್ರಿಕ ಪ್ರವೃತ್ತಿಗಳು ಮತ್ತು ದೇಶೀಕರಣವನ್ನು ಅಳವಡಿಸಿಕೊಳ್ಳುವ ಮೂಲಕ ಕಡಲ ವಾಯುಯಾನದ ಪರಿವರ್ತನೆ; ಭವಿಷ್ಯದ ಸಂಘರ್ಷಗಳಿಗೆ ತಂತ್ರಜ್ಞಾನಗಳನ್ನು ಜೋಡಿಸುವುದು; ಮತ್ತು ಕರ್ನಾಟಕದಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ತಯಾರಕರಿಗೆ ಹೂಡಿಕೆ ಅವಕಾಶಗಳು – ಈ ವಿಷಯಗಳ ಕುರಿತು ಇತರ ವಿಚಾರ ಸಂಕಿರಣಗಳು ಸಹ ಕಾರ್ಯಕ್ರಮದ ಭಾಗವಾಗಿ ನಡೆಯಲಿವೆ.

ಐತಿಹಾಸಿಕ ಮೊದಲ -ಎಸ್ ಯು-57 ಮತ್ತು ಎಫ್ -35 ಏರೋ ಇಂಡಿಯಾದಲ್ಲಿ ಪ್ರದರ್ಶನ

ಇತಿಹಾಸದಲ್ಲಿ ಮೊದಲ ಬಾರಿಗೆ ಏರೋ ಇಂಡಿಯಾ 2025 ವಿಶ್ವದ ಎರಡು ಅತ್ಯಂತ ಮುಂದುವರಿದ ಐದನೇ ತಲೆಮಾರಿನ ಯುದ್ಧ ವಿಮಾನಗಳಾದ ರಷ್ಯಾದ ಸು-57 ಮತ್ತು ಅಮೇರಿಕನ್ ಎಫ್-35 ಲೈಟ್ನಿಂಗ್ II ಪಾಲ್ಗೊಳ್ಲುವಿಕೆಗೆ ಸಾಕ್ಷಿಯಾಗಲಿದೆ. ಇದು ಜಾಗತಿಕ ರಕ್ಷಣಾ ಸಹಯೋಗ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಒಂದು ಮೈಲಿಗಲ್ಲನ್ನು ಗುರುತಿಸುತ್ತದೆ, ವಾಯುಯಾನ ಉತ್ಸಾಹಿಗಳು ಮತ್ತು ರಕ್ಷಣಾ ತಜ್ಞರಿಗೆ ಈ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ವೀಕ್ಷಿಸುವ ಅಪ್ರತಿಮ ನಿರೀಕ್ಷೆಯನ್ನು ನೀಡುತ್ತದೆ.

  • ಎಸ್ ಯು-57: ರಷ್ಯಾದ ಪ್ರಧಾನ ಸ್ಟೆಲ್ತ್ ಮಲ್ಟಿರೋಲ್ ಫೈಟರ್ ಅನ್ನು ಉನ್ನತ ವಾಯು ಶ್ರೇಷ್ಠತೆ ಮತ್ತು ದಾಳಿ ಸಾಮರ್ಥ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ಏವಿಯಾನಿಕ್ಸ್, ಸೂಪರ್‌ಕ್ರೂಸ್ ಸಾಮರ್ಥ್ಯ ಮತ್ತು ಸ್ಟೆಲ್ತ್ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಇದು ಏರೋ ಇಂಡಿಯಾ 2025 ರಲ್ಲಿ ಚೊಚ್ಚಲ ಹಾರಾಟ ಮಾಡಲಿದೆ. ವೀಕ್ಷಕಕರು ಫೈಟರ್‌ನ ಚುರುಕುತನ, ಸ್ಟೆಲ್ತ್ ಮತ್ತು ಫೈರ್‌ಪವರ್ ಅನ್ನು ಎತ್ತಿ ತೋರಿಸುವ ಹೈ-ಸ್ಪೀಡ್ ವೈಮಾನಿಕ ಕುಶಲತೆ ಮತ್ತು ಯುದ್ಧತಂತ್ರದ ಪ್ರದರ್ಶನಗಳನ್ನು ನಿರೀಕ್ಷಿಸಬಹುದು.
  • ಎಫ್-35 ಲೈಟ್ನಿಂಗ್ II: ಅತ್ಯಂತ ವ್ಯಾಪಕವಾಗಿ ನಿಯೋಜಿಸಲಾದ ಐದನೇ ತಲೆಮಾರಿನ ಫೈಟರ್ ಲಾಕ್‌ಹೀಡ್ ಮಾರ್ಟಿನ್ ಎಫ್-35 ಲೈಟ್ನಿಂಗ್ II, ಸುಧಾರಿತ ಸ್ಟೆಲ್ತ್ ಸಾಟಿಯಿಲ್ಲದ ಸಾಂದರ್ಭಿಕ ಅರಿವು ಮತ್ತು ನೆಟ್‌ವರ್ಕ್ಡ್ ಯುದ್ಧ ಸಾಮರ್ಥ್ಯಗಳನ್ನು ಸಂಯೋಜಿಸುತ್ತದೆ. ಏರೋ ಇಂಡಿಯಾ 2025 ರಲ್ಲಿ ಇದರ ಉಪಸ್ಥಿತಿಯು ವೀಕ್ಷಕಕರಿಗೆ ಅಮೆರಿಕಾದ ವಾಯುಪಡೆಯ ಪ್ರಾಮುಖ್ಯತೆಯನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.

ಸು-57 ಮತ್ತು ಎಫ್-35 ಎರಡರ ಸೇರ್ಪಡೆಯು ಅಂತಾರಾಷ್ಟ್ರೀಯ ರಕ್ಷಣಾ ಮತ್ತು ಏರೋಸ್ಪೇಸ್ ಸಹಯೋಗಕ್ಕೆ ಪ್ರಮುಖ ಕೇಂದ್ರವಾಗಿ ಭಾರತದ ಸ್ಥಾನವನ್ನು ಎತ್ತಿ ತೋರಿಸುತ್ತದೆ. ಏರೋ ಇಂಡಿಯಾ 2025 ಪೂರ್ವ ಮತ್ತು ಪಶ್ಚಿಮ ಐದನೇ ತಲೆಮಾರಿನ ಯುದ್ಧ ವಿಮಾನ ತಂತ್ರಜ್ಞಾನದ ಅಪರೂಪದ ಹೋಲಿಕೆಯನ್ನು ಒದಗಿಸುತ್ತದೆ, ರಕ್ಷಣಾ ವಿಶ್ಲೇಷಕರು, ಮಿಲಿಟರಿ ಸಿಬ್ಬಂದಿ ಮತ್ತು ವಾಯುಯಾನ ಉತ್ಸಾಹಿಗಳಿಗೆ ಅವರವರ ಸಾಮರ್ಥ್ಯಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ.

ವೀಕ್ಷಕ ಸ್ನೇಹಿ ಅನುಭವ

ಪ್ರಮುಖ ಮೂಲಸೌಕರ್ಯ ನವೀಕರಣಗಳು ಮತ್ತು ಸುಧಾರಿತ ಸೌಕರ್ಯಗಳೊಂದಿಗೆ, ಏರೋ ಇಂಡಿಯಾ 2025 ಹಿಂದೆಂದಿಗಿಂತಲೂ ಬೃಹದಾಕಾರವಾಗಿರಲಿದೆ, ಸುಗಮವಾಗಿರುತ್ತದೆ ಮತ್ತು ವೀಕ್ಷಕ ಸ್ನೇಹಿಯಾಗಿರಲಿದೆ ಎಂದು ಭರವಸೆ ನೀಡುತ್ತದೆ.

ಮೂಲಸೌಕರ್ಯ ವರ್ಧನೆ ಮತ್ತು ಸಂಚಾರ ನಿರ್ವಹಣೆ: ಹಿಂದಿನ ಸವಾಲುಗಳನ್ನು ಗುರುತಿಸಿ, ಸರಾಗ ಪ್ರವೇಶ, ಸಂಚಾರ ಮತ್ತು ಸಂಪರ್ಕವನ್ನು ಸುಗಮಗೊಳಿಸಲು ವ್ಯಾಪಕ ಸುಧಾರಣೆಗಳನ್ನು ಮಾಡಲಾಗಿದೆ ಮತ್ತು ರಕ್ಷಣಾ ಸಚಿವಾಲಯ, ಭಾರತೀಯ ವಾಯುಪಡೆ (ಐಎಎಫ್‌), ಬೆಂಗಳೂರು ಸಂಚಾರ ಪೊಲೀಸ್, ಬಿಬಿಎಂಪಿ, ಎನ್ ಎಚ್ ಎಐ ಮತ್ತು ನಮ್ಮ ಮೆಟ್ರೋದಂತಹ ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಅಂಗ ಸಂಸ್ಥೆಗಳ ನಡುವೆ ನಿಕಟ ಸಮನ್ವಯವಿದೆ. ವಾಹನ ದಟ್ಟಣೆಯನ್ನು ತಗ್ಗಿಸಲು ಮತ್ತು ಸ್ಥಳದ ಸುತ್ತಲಿನ ಸಂಚಾರವನ್ನು ಸುಧಾರಿಸಲು ವಾಯುಪಡೆ ನಿಲ್ದಾಣದ ಸುತ್ತಲೂ ಸಂಚಾರ ಹರಿವನ್ನು ಉತ್ತಮಗೊಳಿಸಲು ಸಂಪರ್ಕ ರಸ್ತೆಗಳನ್ನು ಅಗಲೀಕರಣಗೊಳಿಸಲಾಗಿದೆ.

ಭದ್ರತೆ ಮತ್ತು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧತೆ: ಅನಧಿಕೃತ ಡ್ರೋನ್ ಚಟುವಟಿಕೆಯನ್ನು ನಿರ್ವಹಿಸಲು ನಿಗ್ರಹ ಕ್ರಮಗಳೊಂದಿಗೆ ಕೆಂಪು ಡ್ರೋನ್ ವಲಯಗಳನ್ನು ಗೊತ್ತುಪಡಿಸಲಾಗಿದೆ ಮತ್ತು ಪ್ರಕಟಿಸಲಾಗಿದೆ. ತ್ವರಿತ ಸಹಾಯ ಮತ್ತು ತುರ್ತು ಬೆಂಬಲವನ್ನು ಒದಗಿಸಲು ಕ್ಷಿಪ್ರ ಮೊಬೈಲ್ ಘಟಕಗಳನ್ನು ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಲಾಗುವುದು. ಪ್ರಾಯೋಗಿಕ ಮತ್ತು ಕಾರ್ಯಗತಗೊಳಿಸಬಹುದಾದ ಆಕಸ್ಮಿಕ ಯೋಜನೆಗಳನ್ನು ಖಾತ್ರಿಪಡಿಸಿಕೊಳ್ಳಲು ಬಹು ಸಂಸ್ಥೆಗಳೊಂದಿಗೆ ನಿರಂತರ ಅಣಕು ಅಭ್ಯಾಸಗಳನ್ನು ನಡೆಸಲಾಗುತ್ತಿದೆ.

ಪ್ರದರ್ಶಕರು ಮತ್ತು ಸಂದರ್ಶಕರ ಅನುಭವ ವೃದ್ದಿ: ಪ್ರದರ್ಶಕರು ಮತ್ತು ವ್ಯಾಪಾರ ಪ್ರತಿನಿಧಿಗಳಿಗೆ ಉತ್ತಮ ಅನುಭವ ಲಭ್ಯವಾಗುವಂತೆ ಮಾಡಲು, ಪ್ರದರ್ಶನ ಪ್ರದೇಶವನ್ನು ಹಲವಾರು ಪ್ರಮುಖ ನವೀಕರಣಗಳೊಂದಿಗೆ ಮಾರ್ಪಾಡು ಮಾಡಲಾಗಿದೆ:-
* ಹೆಚ್ಚಿನ ಪ್ರದರ್ಶಕರು ಮತ್ತು ಸಂದರ್ಶಕರಿಗೆ ಆರಾಮವಾಗಿ ಸ್ಥಳಾವಕಾಶ ಕಲ್ಪಿಸಲು ವಿಸ್ತರಿಸಿದ ಮತ್ತು ಉತ್ತಮ ಗಾಳಿ ಬೆಳಕು ಇರುವ ಪ್ರದರ್ಶನ ಸಭಾಂಗಣಗಳು.
* ಪ್ರದರ್ಶನದ ಜಾಗದಲ್ಲಿ ಸುಧಾರಿತ ಆಸನ ಮತ್ತು ವಿಶ್ರಾಂತಿ ವಲಯಗಳು.
* ಇಂದಿರಾ ಕ್ಯಾಂಟೀನ್‌ಗಳು (ಪಾರ್ಕಿಂಗ್ ಪ್ರದೇಶಗಳಲ್ಲಿ) ಸೇರಿದಂತೆ ಹೆಚ್ಚುವರಿ ಫುಡ್‌ ಕೋರ್ಟ್ ಗಳು ಮತ್ತು ಉಪಹಾರ ಗೂಡಂಗಡಿಗಳನ್ನು ತೆರೆಯಲಾಗಿದೆ.
* ಸುಲಭ ಸಂಚಾರಕ್ಕಾಗಿ ಮಾರ್ಗವನ್ನು ಹುಡುಕುವುದಕ್ಕೆ ಅನುಕೂಲವಾಗುವ ಸಂಕೇತಗಳು.
* ಸಂದರ್ಶಕರ ಅನುಕೂಲಕ್ಕಾಗಿ ಕಳೆದುಹೋದ ಮತ್ತು ಪತ್ತೆಯಾದವರಿಗಾಗಿ ಕೌಂಟರ್‌ಗಳು ಮತ್ತು ಎಟಿಎಂ ಕಿಯೋಸ್ಕ್‌ಗಳು.
* ಹಲವೆಡೆ ಕುಡಿಯುವ ನೀರಿನ ಕೇಂದ್ರಗಳು, ವೈದ್ಯಕೀಯ ಸಹಾಯ ಕೇಂದ್ರಗಳು ಮತ್ತು ವೈದ್ಯಕೀಯ ಸ್ಥಳಾಂತರಿಸುವಿಕೆ ಸೇರಿದಂತೆ ತುರ್ತು ಪರಿಸ್ಥಿತಿಗಳಿಗಾಗಿ ಮೀಸಲಾದ ಪ್ರಾಥಮಿಕ ಹೃದಯಚಿಕಿತ್ಸೆ ಸಹಾಯ ಕೇಂದ್ರ.

ಬಹು ಹಂತದ ಭದ್ರತಾ ಕ್ರಮಗಳು: ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡುವ ಎಲ್ಲರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು, ಗೃಹ ಸಚಿವಾಲಯ, ಬೆಂಗಳೂರು ಪೊಲೀಸ್, ಸಿಐಎಸ್ಎಫ್ ಮತ್ತು ಗುಪ್ತಚರ ಸಂಸ್ಥೆಗಳ ಸಹಯೋಗದೊಂದಿಗೆ ಬಹು-ಹಂತದ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗುತ್ತಿದೆ. ಭದ್ರತೆಗಾಗಿ ಕೈಗಿಒಂಡಿರುವ ಕ್ರಮಗಳಲ್ಲಿ ಇವು ಒಳಗೊಂಡಿವೆ. ಅವುಗಳೆಂದರೆ :-
* ಸುಧಾರಿತ ಭದ್ರತಾ ಶಿಷ್ಟಾಚಾರಗಳು ಮತ್ತು ವೇಗದ ಪ್ರವೇಶ ನಿಯಂತ್ರಣ.
* ಭದ್ರತಾ ಕಾಳಜಿಗಳಿಗೆ ರಿಯಲ್ ಟೈಮ್ ಪ್ರತಿಕ್ರಿಯೆಗಳಿಗಾಗಿ ಕಾರ್ಯಾಚರಣಾ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ.
* ಪರಿಸ್ಥಿತಿಯನ್ನು ಅರಿಯಲು ದಿನಗಳ 24 ಗಂಟೆಗಳೂ ಕಾರ್ಯನಿರ್ವಹಿಸುವ 24/7 ಸಿಸಿಟಿವಿ ಮೇಲ್ವಿಚಾರಣೆ.
* ಸಂದರ್ಶಕರು, ಪ್ರದರ್ಶಕರು ಮತ್ತು ವಿಐಪಿಗಳಿಗಾಗಿ ಮೀಸಲಾದ ತಪಾಸಣಾ ವಲಯಗಳು.
* ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ವಿಪತ್ತು ನಿರ್ವಹಣೆ ಮತ್ತು ಅಗ್ನಿ ಸುರಕ್ಷತಾ ಸಮಿತಿಗಳು.

ಸಂಪರ್ಕ ಮತ್ತು ಡಿಜಿಟಲ್ ಮೂಲಸೌಕರ್ಯ : ಹಿಂದಿನ ಸಂಪರ್ಕ ಸವಾಲುಗಳನ್ನು ಪರಿಹರಿಸಲು ಎಲ್ಲಾ ದೂರಸಂಪರ್ಕ ಸೇವಾ ಪೂರೈಕೆದಾರರು ತಡೆರಹಿತ ಸಂವಹನಕ್ಕಾಗಿ ತಾತ್ಕಾಲಿಕ ಮೊಬೈಲ್ ಟವರ್‌ಗಳು ಮತ್ತು ನೆಟ್‌ವರ್ಕ್ ಬೂಸ್ಟರ್‌ಗಳನ್ನು ನಿಯೋಜಿಸುತ್ತಿದ್ದಾರೆ. ಲೈವ್ ಅಪ್‌ಡೇಟ್‌ಗಳು, ಸಂಚಾರಕ್ಕೆ ಸಹಕರಿಸುವ ಮತ್ತು ಕಾರ್ಯಕ್ರಮದ ವೇಳಾಪಟ್ಟಿಯನ್ನು ಒದಗಿಸಲು ಮೀಸಲಾದ ಏರೋ ಇಂಡಿಯಾ 2025 ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಆರಂಭಿಸಲಾಗಿದೆ. ಏಜೆನ್ಸಿಗಳ ನಡುವೆ ಸಮನ್ವಯಕ್ಕಾಗಿ ಸುರಕ್ಷಿತ ಡಿಜಿಟಲ್ ಸಂವಹನ ಚಾನೆಲ್‌ಗಳನ್ನು ಸಹ ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ, ಕಾರ್ಯಕ್ರಮದ ಸಮಯದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವಾಗ ಹೆಚ್ಚಿದ ವಿದ್ಯುತ್ ಬೇಡಿಕೆಗಳನ್ನು ಬೆಂಬಲಿಸಲು ನಿಬಂಧನೆಗಳನ್ನು ಮಾಡಲಾಗಿದೆ.

ವೈಮಾನಿಕ ಜಾಗದ ನಿರ್ವಹಣೆ ಮತ್ತು ಪ್ರಾತ್ಯಕ್ಷಿಕೆಗಳು: ಏರೋ ಇಂಡಿಯಾ ಪ್ರದರ್ಶನಗಳು ಮತ್ತು ವಿಮಾನಗಳ ಸಂಚಾರಕ್ಕೆ ಏರೋ ಇಂಡಿಯಾ 2025 ರ ಪ್ರಮುಖ ಅಂಶಗಳಾಗಿವೆ. ಎಎಐ ಮತ್ತು ಎಚ್ ಎಎಲ್ ನೊಂದಿಗೆ ಸಮನ್ವಯದೊಂದಿಗೆ ಐಎಎಫ್ ಗೆ ಮೀಸಲಾದ ವಾಯುಪ್ರದೇಶ ನಿರ್ವಹಣಾ ಯೋಜನೆಯನ್ನು ರೂಪಿಸಿದೆ. ಅವುಗಳೆಂದರೆ:-
* ನಿಗದಿತ ಪ್ರದರ್ಶನಗಳ ಸಮಯದಲ್ಲಿ ಸುರಕ್ಷತೆಯನ್ನು ಕಾಪಾಡಲು ಏರೋ ಇಂಡಿಯಾ ಫೋರ್ಸ್ ಸ್ಟೇಷನ್ ಯಲಹಂಕದ ಸುತ್ತಲೂ ತಾತ್ಕಾಲಿಕ ಹಾರಾಟ ನಿರ್ಬಂಧಿಸಲಾಗಿದೆ.
* ಪ್ರದರ್ಶದನದಲ್ಲಿ ಭಾಗವಹಿಸುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ ಕಾರ್ಯತಂತ್ರದ ವಿಮಾನ ಪಾರ್ಕಿಂಗ್ ಮತ್ತು ಇಂಧನ ತುಂಬುವ ಯೋಜನೆಗಳು.

ವ್ಯಾಪಾರ ವಹಿವಾಟು ಮತ್ತು ನಾವೀನ್ಯತೆ ಬೆಂಬಲ: ಏರೋ ಇಂಡಿಯಾ ಸಹಯೋಗಗಳಿಗೆ ಮತ್ತು ಬಿ2ಬಿ, ಜಿ2ಬಿ ಸಂವಹನಗಳಿಗೆ ಅನುಕೂಲವಾಗುವಂತೆ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸಲು ದುಂಡು ಮೇಜಿನ ಚರ್ಚೆಗಳನ್ನು ಆಯೋಜಿಸಲು ವೇದಿಕೆಯನ್ನು ಒದಗಿಸುತ್ತದೆ. ಸ್ಥಳೀಯ ನಾವೀನ್ಯತೆಗಳನ್ನು ಪ್ರಸ್ತುತಪಡಿಸಲು ಜಾಗತಿಕ ವೇದಿಕೆಯನ್ನು ಒದಗಿಸುವ ಮೂಲಕ ಸ್ಟಾರ್ಟ್‌ಅಪ್‌ಗಳು ಮತ್ತು ಎಂಎಸ್‌ ಎಂಇ ಗಳನ್ನು ಬೆಂಬಲಿಸಲು ವಿಶೇಷ ಗಮನ ನೀಡಲಾಗುತ್ತಿದೆ.

ಸುಸ್ಥಿರತೆ ಉಪಕ್ರಮಗಳು: ಏರೋ ಇಂಡಿಯಾ 2025 ಸುಸ್ಥಿರತೆಗೆ ಬದ್ಧವಾಗಿದೆ ಮತ್ತು ಅದರ ಕಾರ್ಯಕ್ರಮಗಳಲ್ಲಿ ಹಲವು ಪರಿಸರ ಸ್ನೇಹಿ ಕ್ರಮಗಳನ್ನು ಒಳಗೊಂಡಿದೆ:-
* ಮಾಲಿನ್ಯವನ್ನು ತಗ್ಗಿಸಲು ಮತ್ತು ಪಾದಚಾರಿ ಸೌಕರ್ಯವನ್ನು ಹೆಚ್ಚಿಸಲು ವಾಹನಗಳ ಸಂಚಾರವನ್ನು ಕಡಿಮೆ ಮಾಡಲಾಗಿದೆ.
* ಪ್ರದರ್ಶನ ಸ್ಥಳದಲ್ಲಿ ಸಂದರ್ಶಕರ ಸುಗಮ ಸಂಚಾರಕ್ಕಾಗಿ 100 ಕ್ಕೂ ಅಧಿಕ ಇ ಕಾರ್ಟ್‌ಗಳ ವಿಶೇಷ ಬಳಕೆ.
* ಹೆಚ್ಚಿನ ಸಂಖ್ಯೆಯ ಮರುಬಳಕೆ ಬಿನ್‌ಗಳು, ತ್ಯಾಜ್ಯ ವಿಂಗಡಣೆ ವಲಯಗಳು ಮತ್ತು ತ್ಯಾಜ್ಯವನ್ನು ಸಕಾಲಿಕವಾಗಿ ವಿಲೇವಾರಿ ಮಾಡುವುದು ಸೇರಿದಂತೆ ಸಮಗ್ರ ತ್ಯಾಜ್ಯ ನಿರ್ವಹಣೆ.

ಈ ಬಹು-ಸಂಸ್ಥೆಗಳ ಸಹಯೋಗಗಳೊಂದಿಗೆ ಏರೋ ಇಂಡಿಯಾ 2025 ಈವರೆಗಿನ ಅತ್ಯಂತ ಸುಸಂಘಟಿತ ಮತ್ತು ಉತ್ತಮ ಸಂಘಟಿತ ಆವೃತ್ತಿಗಳಲ್ಲಿ ಒಂದಾಗಲಿದೆ.

ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಸೇಠ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಜನರಲ್ ಅನಿಲ್ ಚೌಹಾಣ್, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಶ್ರೀ ಸಂಜೀವ್ ಕುಮಾರ್, ರಕ್ಷಣಾ ಇಲಾಖೆಯ ಕಾರ್ಯದರ್ಶಿ ಆರ್ & ಡಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್, ರಕ್ಷಣಾ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಮತ್ತು ಕೈಗಾರಿಕಾ ಮುಖಂಡರು ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.


LEAVE A REPLY

Please enter your comment!
Please enter your name here