ಬೆಂಗಳೂರು ಆತ್ಮಹತ್ಯೆ ಪ್ರಕರಣ: ಪ್ರೇಮ ವೈಫಲ್ಯದಿಂದ 26 ವರ್ಷದ ಜಿಮ್ ಟ್ರೈನರ್ ಆತ್ಮಹತ್ಯೆ, ಪೊಲೀಸ್ ತನಿಖೆ
ಬೆಂಗಳೂರು: ಪ್ರೀತಿಸಿದ ಯುವತಿಯ ಮದುವೆ ಬೇರೊಬ್ಬನೊಂದಿಗೆ ನಿಶ್ಚಯವಾದ ಹಿನ್ನೆಲೆಯಲ್ಲಿ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಫೆಬ್ರವರಿ 7ರ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಕಿರಣ್ (26) ಎಂಬ ಯುವಕ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ಯುವತಿ ಹಾಗೂ ಆಕೆಯ ತಾಯಿಯ ಹೆಸರನ್ನು ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮೃತ ಕಿರಣ್ ಹಲವು ವರ್ಷಗಳಿಂದ ಜಿಮ್ ಟ್ರೈನರ್ ಹಾಗೂ ಬಾಡಿಬಿಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಯುವತಿಯೊಂದಿಗಿನ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇತ್ತೀಚೆಗೆ ಆ ಯುವತಿ ತನ್ನ ಮದುವೆ ಬೇರೊಬ್ಬ ಯುವಕನೊಂದಿಗೆ ನಿಶ್ಚಯವಾಗಿದೆ ಎಂದು ತಿಳಿಸಿ, ಮದುವೆ ಆಮಂತ್ರಣ ಪತ್ರಿಕೆಯನ್ನು ತೋರಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವಿಚಾರದಿಂದ ಮಾನಸಿಕವಾಗಿ ನೊಂದ ಕಿರಣ್ ತೀವ್ರ ನಿರಾಶೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮಾಹಿತಿ ಪಡೆದ ಮಹಾಲಕ್ಷ್ಮೀ ಲೇಔಟ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಬಂಧ ಕಿರಣ್ ಕುಟುಂಬಸ್ಥರು ಯುವತಿ ಹಾಗೂ ಆಕೆಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ ಅಂಶಗಳನ್ನು ಪರಿಶೀಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
