ಜೂನ್ 30ರಿಂದ ಬೆಂಗಳೂರಿನಲ್ಲಿ ಮನೆ-ಮನೆ ಮತದಾರರ ಪರಿಶೀಲನೆ ಆರಂಭ; ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಪ್ರತಿಯೊಂದು ಮನೆಗೂ ಬಿಎಲ್ಒಗಳ ಭೇಟಿ
ಬೆಂಗಳೂರು, ಜೂನ್ 29: ವಿಶೇಷ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR)-2026ರ ಅಂಗವಾಗಿ ಜೂನ್ 30ರಿಂದ ಬೆಂಗಳೂರಿನ ಪ್ರತಿಯೊಂದು ಮನೆಗೂ ಬೂತ್ ಮಟ್ಟದ ಅಧಿಕಾರಿಗಳು (BLOಗಳು) ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಭಾನುವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರು ಅಗತ್ಯ ದಾಖಲೆಗಳೊಂದಿಗೆ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಚುನಾವಣಾ ಆಯೋಗದ ಈ ಮಹತ್ವದ ಪ್ರಕ್ರಿಯೆಗೆ ಸಹಕರಿಸುವಂತೆ ಮನವಿ ಮಾಡಿದರು.
ಮನೆ-ಮನೆ ಭೇಟಿ ವೇಳೆ ನಿವಾಸಿಗಳು ಲಭ್ಯವಿಲ್ಲದಿದ್ದರೆ ಬಿಎಲ್ಒಗಳು ಇನ್ನೂ ಎರಡು ಬಾರಿ ಭೇಟಿ ನೀಡಿ ನಮೂನೆಗಳನ್ನು ವಿತರಿಸಲಿದ್ದು, ಯಾವುದೇ ಮನೆ ಸಮೀಕ್ಷೆಯಿಂದ ಹೊರಗುಳಿಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶೇ. 76.32ರಷ್ಟು ಮ್ಯಾಪಿಂಗ್ ಪೂರ್ಣ
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ಪೂರ್ವಸಿದ್ಧತಾ ಕಾರ್ಯವಾಗಿ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಕಾರ್ಯದಲ್ಲಿ ಇದುವರೆಗೆ ಶೇ. 76.32ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮಹೇಶ್ವರ್ ರಾವ್ ತಿಳಿಸಿದರು.
ಒಟ್ಟು 1,03,88,363 ಮತದಾರರಲ್ಲಿ 79,27,902 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಇನ್ನೂ 24,60,461 ಮತದಾರರ ಮ್ಯಾಪಿಂಗ್ ಬಾಕಿಯಿದೆ. ಉಳಿದ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಬೆಳಿಗ್ಗೆ ವಿತರಣೆ, ಸಂಜೆ ಡಿಜಿಟಲೀಕರಣ
ಬಿಎಲ್ಒಗಳು ಬೆಳಿಗ್ಗೆ ಮನೆಗಳಿಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಲಿದ್ದು, ಸಂಜೆ ವೇಳೆಗೆ ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಿ ಆನ್ಲೈನ್ನಲ್ಲಿ ಡಿಜಿಟಲೀಕರಣ ಮಾಡಿ ಅಪ್ಲೋಡ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಮತದಾರರು ತಮ್ಮ ಭಾವಚಿತ್ರವನ್ನು ಬದಲಾಯಿಸಲು ಬಯಸಿದರೆ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರವನ್ನು ಕೂಡ ಸಲ್ಲಿಸಬಹುದು ಎಂದು ಹೇಳಿದರು.
ಗಣತಿ ನಮೂನೆಗಳನ್ನು ಮತದಾರರ ಸಹಾಯ ಕೇಂದ್ರಗಳು ಹಾಗೂ ರಜಾದಿನಗಳಲ್ಲಿ ಮತಗಟ್ಟೆಗಳಲ್ಲಿಯೂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
2,855 ಮತದಾರರ ಸಹಾಯ ಕೇಂದ್ರಗಳು
ಮತದಾರರ ನೋಂದಣಿ ಅಥವಾ ಗಣತಿ ನಮೂನೆ ಭರ್ತಿಗೆ ಸಂಬಂಧಿಸಿದ ಯಾವುದೇ ಗೊಂದಲಗಳಿಗೆ ಮಾರ್ಗದರ್ಶನ ನೀಡಲು 2,855 ಮತದಾರರ ಸಹಾಯ ಕೇಂದ್ರಗಳನ್ನು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸ್ಥಾಪಿಸಲಾಗಿದೆ.
ಸಾರ್ವಜನಿಕರು ಈ ಕೇಂದ್ರಗಳ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.
ಇದರ ಜೊತೆಗೆ ವಾರ್ಡ್ ಕಚೇರಿಗಳಲ್ಲಿ ಬಿಎಲ್ಒಗಳಿಗೆ ನೆರವಾಗಲು 902 ಫೆಸಿಲಿಟೇಶನ್ ಸೆಂಟರ್ಗಳನ್ನು ಕೂಡ ಸ್ಥಾಪಿಸಲಾಗಿದೆ.
8,972 ಬಿಎಲ್ಒಗಳು ಕಾರ್ಯನಿರ್ವಹಣೆ
ಜಿಲ್ಲೆಯಲ್ಲಿ:
- 28 ಮತದಾರರ ನೋಂದಣಾಧಿಕಾರಿಗಳು
- 75 ಸಹಾಯಕ ಮತದಾರರ ನೋಂದಣಾಧಿಕಾರಿಗಳು
- 905 ಬಿಎಲ್ಒ ಮೇಲ್ವಿಚಾರಕರು
- 8,972 ಬೂತ್ ಮಟ್ಟದ ಅಧಿಕಾರಿಗಳು (BLOಗಳು)
ಕಾರ್ಯನಿರ್ವಹಿಸುತ್ತಿದ್ದು, ಮನೆ-ಮನೆ ಸಮೀಕ್ಷೆಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದು ಮಹೇಶ್ವರ್ ರಾವ್ ತಿಳಿಸಿದರು.
ಅಲ್ಲದೆ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 16,505 ಬಿಎಲ್ಎ-2 (Booth Level Agents) ನೇಮಕಗೊಂಡಿದ್ದು, ಅವರ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದರು.
ರಾಜಕೀಯ ಪಕ್ಷಗಳೊಂದಿಗೆ ಸಭೆ
ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ರಜಾದಿನಗಳು ಹಾಗೂ ಸಂಜೆ ವೇಳೆಯಲ್ಲಿಯೂ ಬಿಎಲ್ಒಗಳ ಮೂಲಕ ಕಾರ್ಯನಿರ್ವಹಿಸುವುದು, ಬಿಎಲ್ಎಗಳಿಗೆ ಮತದಾರರ ಗುರುತಿನ ಚೀಟಿ ವಿತರಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಎಸ್ಐಆರ್-2026 ವೇಳಾಪಟ್ಟಿ
- ಮನೆ-ಮನೆ ಭೇಟಿ: ಜೂನ್ 30 ರಿಂದ ಜುಲೈ 29, 2026
- ಮತಗಟ್ಟೆಗಳ ಮರುಹೊಂದಾಣಿಕೆ: ಜುಲೈ 29, 2026
- ಕರಡು ಮತದಾರರ ಪಟ್ಟಿ ಪ್ರಕಟಣೆ: ಆಗಸ್ಟ್ 5, 2026
- ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ: ಆಗಸ್ಟ್ 5 ರಿಂದ ಸೆಪ್ಟೆಂಬರ್ 4, 2026
- ಹಕ್ಕು ಮತ್ತು ಆಕ್ಷೇಪಣೆಗಳ ವಿಚಾರಣೆ ಹಾಗೂ ವಿಲೇವಾರಿ: ಆಗಸ್ಟ್ 5 ರಿಂದ ಅಕ್ಟೋಬರ್ 3, 2026
- ಅಂತಿಮ ಮತದಾರರ ಪಟ್ಟಿ ಪ್ರಕಟಣೆ: ಅಕ್ಟೋಬರ್ 7, 2026
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಮತದಾರರ ಸಹಾಯ ಕೇಂದ್ರದ ವೆಬ್ಸೈಟ್ಗೆ ಭೇಟಿ ನೀಡಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶೇಷ ಆಯುಕ್ತೆ ಸುಷಮಾ ಗೋಡಬೋಲೆ, ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಜಿಲ್ಲಾಧಿಕಾರಿ ಕಾಂತರಾಜು, ಜಂಟಿ ಆಯುಕ್ತೆ ಪಲ್ಲವಿ, ಸಹಾಯಕ ಆಯುಕ್ತ ಶ್ರೀನಿವಾಸ್ ಎಂ. ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.