ಬೆಂಗಳೂರು, ಜೂನ್ 29: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಜುಲೈ 1ರಿಂದ ‘ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ’ ಆರಂಭವಾಗಲಿದ್ದು, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಯನ್ನು ಸಮಗ್ರ ಯೋಜನೆಯೊಂದಿಗೆ ಹಾಗೂ ಕಾನೂನುಬದ್ಧವಾಗಿ ತೆರವುಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾನುವಾರ ನಡೆದ ವರ್ಚುವಲ್ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಆದೇಶಗಳು ಹಾಗೂ ಬೀದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಮೊದಲು ಪಟ್ಟಿ, ಬಳಿಕ ಜಾಗೃತಿ, ನಂತರ ನೋಟಿಸ್
ಯಾವ ರಸ್ತೆಗಳಲ್ಲಿ ಮೊದಲ ಹಂತದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂಬುದರ ಪಟ್ಟಿಯನ್ನು ಮೊದಲು ಸಿದ್ಧಪಡಿಸಬೇಕು. ನಂತರ ಅಂಗಡಿ ಮಾಲೀಕರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು.
ಅದಾದ ಬಳಿಕ ನೋಟಿಸ್ ನೀಡಬೇಕು. ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸದಿದ್ದಲ್ಲಿ ಮಾತ್ರ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಬಹು ಇಲಾಖೆಗಳ ಸಮನ್ವಯದಲ್ಲಿ ಕಾರ್ಯಾಚರಣೆ
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಗರ ಪಾಲಿಕೆ ಅಧಿಕಾರಿಗಳು, ವ್ಯಾಪಾರ ಪರವಾನಗಿ ನೀಡುವ ಆರೋಗ್ಯಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ವಿಶೇಷ ತೆರವು ತಂಡಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಹೇಳಿದರು.
1,500 ಕಿ.ಮೀ ರಸ್ತೆಗಳನ್ನು ನಾನ್-ವೆಂಡಿಂಗ್ ವಲಯಗಳಾಗಿ ಗುರುತಿಸಲು ಸೂಚನೆ
ನಗರದ ಪ್ರಮುಖ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳನ್ನು ಒಳಗೊಂಡಂತೆ ಸುಮಾರು 1,500 ಕಿಲೋಮೀಟರ್ ರಸ್ತೆಗಳನ್ನು ನಾನ್-ವೆಂಡಿಂಗ್ ವಲಯಗಳಾಗಿ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದಲ್ಲಿ ಒಟ್ಟು ಸುಮಾರು 15,000 ಕಿಲೋಮೀಟರ್ ರಸ್ತೆ ಜಾಲವಿದ್ದು, ಪ್ರಮುಖ ರಸ್ತೆಗಳನ್ನು ಮಾತ್ರ ನಾನ್-ವೆಂಡಿಂಗ್ ವಲಯಗಳಾಗಿ ಘೋಷಿಸಿ ಪಾದಚಾರಿಗಳ ಸುರಕ್ಷತೆ ಹಾಗೂ ಸಂಚಾರ ಸುಗಮತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬೀದಿ ವ್ಯಾಪಾರಿಗಳಿಗೆ ಜೀವನೋಪಾಯಕ್ಕೆ ಅವಕಾಶ ಮುಂದುವರಿಕೆ
ಈ ಅಭಿಯಾನದ ಉದ್ದೇಶ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವುದಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ನಾನ್-ವೆಂಡಿಂಗ್ ವಲಯಗಳಾಗಿ ಗುರುತಿಸಲಾದ ರಸ್ತೆಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರ ಮುಂದುವರಿಸಬಹುದು ಎಂದು ಹೇಳಿದರು.
ವ್ಯಾಪಕ ಜಾಗೃತಿ ಕಾರ್ಯಕ್ರಮಕ್ಕೆ ಸೂಚನೆ
ಕಾರ್ಯಾಚರಣೆ ಆರಂಭಕ್ಕೂ ಮುನ್ನ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. ಯಾವ ರಸ್ತೆಗಳಲ್ಲಿ ಅಭಿಯಾನ ನಡೆಯಲಿದೆ ಎಂಬುದನ್ನು ಮುಂಚಿತವಾಗಿಯೇ ತಿಳಿಸಬೇಕು.
ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸದಿದ್ದರೆ ನಗರ ಪಾಲಿಕೆಗಳು ತೆರವುಗೊಳಿಸಿ, ಕಾನೂನು ಪ್ರಕಾರ ದಂಡ ವಿಧಿಸಲಾಗುವುದು ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದರು.
ಒತ್ತುವರಿ ತೆರವಿನ ಜೊತೆಗೆ ಪಾದಚಾರಿ ಮಾರ್ಗ ದುರಸ್ತಿಗೂ ಆದ್ಯತೆ
ಯಾವ ಪ್ರದೇಶಗಳಲ್ಲಿ ಒತ್ತುವರಿ ತೆರವುಗೊಳಿಸಲಾಗುತ್ತದೆಯೋ, ಅಲ್ಲಿಯೇ ಸಮಾನಾಂತರವಾಗಿ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನೂ ತಕ್ಷಣ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಹಾಳಾಗಿರುವ ಸ್ಲ್ಯಾಬ್ಗಳು, ಕರ್ಬ್ಗಳು ಸೇರಿದಂತೆ ಅಗತ್ಯ ನಾಗರಿಕ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್. ಹಾಗೂ ಡಾ. ರಾಜೇಂದ್ರ ಕೆ.ವಿ., ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತರು ಹಾಗೂ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.