ಎನ್ಯುಮರೇಶನ್ ಅರ್ಜಿ ಭರ್ತಿ ಮಾಡಿ ಮತದಾನದ ಹಕ್ಕು ಉಳಿಸಿಕೊಳ್ಳಿ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೂ ಮುನ್ನ ಸಿಎಂ ಡಿ.ಕೆ. ಶಿವಕುಮಾರ್ ಕರೆ
ಬೆಂಗಳೂರು, ಜೂನ್ 29: ರಾಜ್ಯದಲ್ಲಿ ಜೂನ್ 30ರಿಂದ ಆರಂಭವಾಗಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರೂ ಎನ್ಯುಮರೇಶನ್ ಅರ್ಜಿ (ಗಣತಿ ನಮೂನೆ) ಭರ್ತಿ ಮಾಡಿ ಸಲ್ಲಿಸುವ ಮೂಲಕ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 30ರಿಂದ ಜುಲೈ 29ರವರೆಗೆ ಚುನಾವಣಾ ಆಯೋಗದ ವತಿಯಿಂದ ನೇಮಕಗೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಶನ್ ಅರ್ಜಿಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿಯೊಬ್ಬ ಮತದಾರರೂ ಅರ್ಜಿ ಸಲ್ಲಿಸಬೇಕು
ಮತದಾರರು 30 ದಿನಗಳೊಳಗೆ ಅಗತ್ಯ ದಾಖಲೆಗಳು ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಎನ್ಯುಮರೇಶನ್ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.
“ಬಿಎಲ್ಒಗಳು ಮೂರು ಬಾರಿ ಮನೆಗೆ ಬಂದು ಅರ್ಜಿ ನೀಡಲಿದ್ದಾರೆ. ಅರ್ಜಿ ಸ್ವೀಕರಿಸಿ ಸಲ್ಲಿಸದಿದ್ದರೆ ಮತದಾನದ ಹಕ್ಕು ಕಳೆದುಕೊಳ್ಳುವ ಸಾಧ್ಯತೆ ಇದೆ” ಎಂದು ಅವರು ಎಚ್ಚರಿಸಿದರು.
ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದೂ ತಿಳಿಸಿದರು.
ಬಿಎಲ್ಎಗಳೂ ಸಹಾಯ ಮಾಡಬಹುದು
ರಾಜಕೀಯ ಪಕ್ಷಗಳು ನೇಮಿಸಿರುವ ಬೂತ್ ಲೆವೆಲ್ ಏಜೆಂಟ್ಗಳು (BLA) ಕೂಡ ಮತದಾರರಿಗೆ ಅರ್ಜಿ ಭರ್ತಿ ಹಾಗೂ ಸಲ್ಲಿಕೆಯಲ್ಲಿ ನೆರವಾಗಬಹುದು ಎಂದು ಮುಖ್ಯಮಂತ್ರಿ ಹೇಳಿದರು.
ಈಗಾಗಲೇ ರಾಜ್ಯ ಸರ್ಕಾರದ ಬಳಿ 5.50 ಕೋಟಿ ಜಾತಿ ಪ್ರಮಾಣಪತ್ರಗಳ ದಾಖಲೆ ಲಭ್ಯವಿದ್ದು, ಅದರಲ್ಲಿ 2,54,95,767 ಹಿಂದುಳಿದ ವರ್ಗದ ಪ್ರಮಾಣಪತ್ರಗಳು ಹಾಗೂ 2,94,51,027 ಎಸ್ಸಿ ಮತ್ತು ಎಸ್ಟಿ ಪ್ರಮಾಣಪತ್ರಗಳು ಸೇರಿವೆ. ಅಗತ್ಯವಿದ್ದಲ್ಲಿ ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದರು.
11 ವಿಧದ ದಾಖಲೆಗಳಿಗೆ ಅವಕಾಶ
ಎನ್ಯುಮರೇಶನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಮತದಾರರು ತಮ್ಮ EPIC ಸಂಖ್ಯೆ ಜೊತೆಗೆ 11 ವಿಧದ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ಅಂಗೀಕರಿಸಲಾದ ದಾಖಲೆಗಳಲ್ಲಿ:
- ಜನನ ಪ್ರಮಾಣಪತ್ರ
- ಪಾಸ್ಪೋರ್ಟ್
- ಜಾತಿ ಪ್ರಮಾಣಪತ್ರ
- ಅರಣ್ಯ ಹಕ್ಕು ಪತ್ರ
- ಸರ್ಕಾರದಿಂದ ನೀಡಲಾದ ಮನೆ ಅಥವಾ ನಿವೇಶನದ ದಾಖಲೆ
- ಕೇಂದ್ರ ಸರ್ಕಾರದ ಪಿಂಚಣಿ ದಾಖಲೆ
ಸೇರಿವೆ ಎಂದು ವಿವರಿಸಿದರು.
ರಾಜ್ಯಾದ್ಯಂತ 49,320 ಸಹಾಯ ಕೇಂದ್ರಗಳು
ಈ ಪ್ರಕ್ರಿಯೆಗೆ ನೆರವಾಗಲು ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್ ಮಟ್ಟದಲ್ಲಿ ಒಟ್ಟು 49,320 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.
ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರರಿಗೆ ಅಧಿಕಾರ ನೀಡಲಾಗಿದೆ. ಜಾತಿ ಪ್ರಮಾಣಪತ್ರದಲ್ಲಿ ಮೊಬೈಲ್ ಸಂಖ್ಯೆ ಸರಿಯಾಗಿ ದಾಖಲಾಗಿರುವವರು ವಾಟ್ಸ್ಆಪ್ ಮೂಲಕವೂ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
5.50 ಕೋಟಿ ಜನರಿಗೆ ಮನೆ ಮನೆಗೆ ನೆರವು
ಸುಮಾರು 5.50 ಕೋಟಿ ಜನರಿಗೆ ಮನೆ ಮನೆಗೆ ತೆರಳಿ ಸಹಾಯ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಶಿವಕುಮಾರ್ ಹೇಳಿದರು.
ಮತದಾನದ ಹಕ್ಕು ಉಳಿಸಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಹಾಗೂ ಚುನಾವಣಾ ಆಯೋಗ ಎರಡೂ ಸೇರಿ ವ್ಯಾಪಕ ಮಾಹಿತಿ ಅಭಿಯಾನ ಕೈಗೊಳ್ಳಲಿವೆ ಎಂದರು.
ಮತದಾನದ ಹಕ್ಕು ಕಳೆದುಕೊಂಡರೆ ಸೌಲಭ್ಯ ಪಡೆಯಲು ತೊಂದರೆ
ಮುಂದಿನ ದಿನಗಳಲ್ಲಿ ಮತದಾನದ ಹಕ್ಕು ಉಳಿಸಿಕೊಳ್ಳದಿದ್ದರೆ ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯ ಪಡೆಯುವಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಹೇಳಿದರು.
ಸದ್ಯ ಸರ್ಕಾರ ಯಾವುದೇ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿಲ್ಲ. ಆದರೆ ಪ್ರತಿಯೊಬ್ಬ ನಾಗರಿಕರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
“ಮತದಾನದ ಹಕ್ಕು ಬದುಕಿನ ಹಕ್ಕು”
“ಮತದಾನದ ಹಕ್ಕು ಎಂದರೆ ಬದುಕಿನ ಹಕ್ಕು. ಅದನ್ನು ರಕ್ಷಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ,” ಎಂದು ಶಿವಕುಮಾರ್ ಹೇಳಿದರು.
18 ವರ್ಷ ಪೂರೈಸಿರುವ ಯುವಕರು ನಮೂನೆ-6 ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಹೊಸದಾಗಿ ಮತದಾರರಾಗಿ ನೋಂದಾಯಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ
ಸುದ್ದಿಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ:
- ಬಾಡಿಗೆ ಮನೆಯಲ್ಲಿ ವಾಸಿಸುವವರು ಅಥವಾ ಶಾಶ್ವತ ನಿವಾಸ ದಾಖಲೆ ಇಲ್ಲದವರಿಗೂ ಆಧಾರ್ ಸೇರಿದಂತೆ ಮಾನ್ಯ ದಾಖಲೆಗಳ ಆಧಾರದಲ್ಲಿ ಸ್ಥಳೀಯ ಆಡಳಿತದಿಂದ ಪ್ರಮಾಣಪತ್ರ ನೀಡುವ ವ್ಯವಸ್ಥೆ ಇದೆ ಎಂದು ಹೇಳಿದರು.
- ಎನ್ಯುಮರೇಶನ್ ಅರ್ಜಿಯನ್ನು ಆನ್ಲೈನ್ನಲ್ಲಿಯೂ ಡೌನ್ಲೋಡ್ ಮಾಡಿ ಸಲ್ಲಿಸಬಹುದು ಎಂದರು.
- ಬಿಎಲ್ಒಗಳು ಪ್ರತಿದಿನ ಸುಮಾರು 50 ಅರ್ಜಿಗಳನ್ನು ವಿತರಿಸಲಿದ್ದು, ಒಂದು ತಿಂಗಳ ಕಾಲಾವಕಾಶ ನೀಡಿರುವುದರಿಂದ ಯಾವುದೇ ಆತಂಕ ಬೇಡ ಎಂದು ಹೇಳಿದರು.
- ಮಂಗಳವಾರ ತಾವು ಸಹ ತಮ್ಮ ನಿವಾಸದಲ್ಲೇ ಎನ್ಯುಮರೇಶನ್ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದರು.
ಜಾಗೃತಿ ಅಭಿಯಾನಕ್ಕೆ ಸರ್ಕಾರ ಒತ್ತು
ರಾಜ್ಯದ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳಬಾರದು ಎಂಬುದೇ ಸರ್ಕಾರದ ಉದ್ದೇಶ ಎಂದು ಮುಖ್ಯಮಂತ್ರಿ ಹೇಳಿದರು.
ಇದಕ್ಕಾಗಿ ಸಹಾಯ ಕೇಂದ್ರಗಳು, ಜಾಗೃತಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಜಾಹೀರಾತುಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಇತರೆ ಪ್ರಶ್ನೆಗಳಿಗೆ ಉತ್ತರ
ಇತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು:
- ಜುಲೈ 2ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ನಂತರ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದರು.
- ಬರ ನಿರ್ವಹಣೆಗೆ ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ ಎಂದು ಹೇಳಿದರು.
- ಮಾವು ಬೆಳೆಗಾರರ ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಕಳೆದ ವರ್ಷದಂತೆ ಈ ವರ್ಷವೂ ನೆರವು ನೀಡುವ ನಿರೀಕ್ಷೆ ಇದೆ ಎಂದರು.
- ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.