Home ಬೆಂಗಳೂರು ನಗರ BBMP Chief Commissioner Tushar Girinath directs to prepare List for construction of...

BBMP Chief Commissioner Tushar Girinath directs to prepare List for construction of public toilets in Bengaluru | ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸ್ಥಳ ಪಟ್ಟಿ ಮಾಡಿ: ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ

44
0
BBMP Chief Commissioner Tushar Girinath directs to prepare List for construction of public toilets in Bengaluru
BBMP Chief Commissioner Tushar Girinath directs to prepare List for construction of public toilets in Bengaluru

ಬೆಂಗಳೂರು:

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಸಂಬಂಧ ಆಯಾ ವಲಯ ವ್ಯಾಪ್ತಿಯಲ್ಲಿ ಸ್ಥಳಗಳನ್ನು ಗುರುತಿಸಿ ಕೂಡಲೆ ಪಟ್ಟಿ ನೀಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.

ಬುಧವಾರ ನಗರದಲ್ಲಿರುವ ಬಿಎಸ್‍ಡಬ್ಲ್ಯೂಎಂಎಲ್ ಕಛೇರಿಯ ಸಭಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಗರದ ಆಯಾ ವಲಯ ವ್ಯಾಪ್ತಿಯಲ್ಲಿ ಜನದಟ್ಟಣೆ ಪ್ರದೇಶ, ಮಾರುಕಟ್ಟೆಗಳು, ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಸಂಬಂಧ ತ್ವರಿತವಾಗಿ ಸ್ಥಳಗಳನ್ನು ಗುರುತಿಸಿ ಪಟ್ಟಿ ನೀಡಲು ಸೂಚನೆ ನೀಡಲಾಗಿದೆ ಎಂದರು.

ನಗರದಲ್ಲಿ ಈಗಾಗಲೇ 255 ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸ್ಥಳಗಳನ್ನು ಗುರುತಿಸಲಾಗಿದ್ದು, ಶೌಚಾಲಯಗಳನ್ನು ನಿರ್ಮಿಸುವ ಸ್ಥಳ ವಿಶಾಲವಾಗಿರಬೇಕಿದೆ. ಈ ಸಂಬಂಧ ವಿಶಾಲವಾದ ಸ್ಥಳಗಳನ್ನು ಗುರುತಿಸಬೇಕಿದೆ. ಜೊತೆಗೆ ನಗರದ ಕೇಂದ್ರ ಪ್ರದೇಶದಲ್ಲಿ ಹೆಚ್ಚಾಗಿ ಶೌಚಾಲಯಗಳನ್ನು ನಿರ್ಮಿಸಬೇಕು. ಈ ಪೈಕಿ ಸೂಕ್ತ ಸ್ಥಳಗಳನ್ನು ಗುರುತಿಸಬೇಕು. ಅಲ್ಲದೆ ಹೊಸದಾಗಿ 46 ಶೌಚಾಲಯಗಳನ್ನು ನಿರ್ಮಾಣ ಮಾಡಲು ಸೂಕ್ತ ಸ್ಥಳಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಸಲುವಾಗಿ ಸಂಕ್ಷಿಪ್ತ ಯೋಜನೆಗಳನ್ನು ರೂಪಿಸುವ ಕುರಿತು ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಸಮಿತಿಗಳನ್ನು ರಚಿಸಲು ಹೈಕೋರ್ಟ್ ಆದೇಶಿಸಲಾಗಿರುತ್ತದೆ. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದರು.

ನಗರದಲ್ಲಿ 393 ಸಾರ್ವಜನಿಕ ಶೌಚಾಲಯಗಳಿದ್ದು, ಈ ಪೈಕಿ 360 ಸಾರ್ವಜನಿಕ ಶೌಚಾಲಯ, 6 ಕಮ್ಯುನಿಟಿ ಶೌಚಾಲಯ, 17 ಮಾಡ್ಯುಲಾರ್ ಶೌಚಾಲಯ ಹಾಗೂ 10 ಪ್ರೀಕಾಸ್ಟ್ ಶೌಚಾಲಯಗಳಿವೆ. ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ವರಿತಗತಿಯಲ್ಲಿ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಬೇಕೆಂದು ಹೇಳಿದರು.

ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ: ನಗರದಲ್ಲಿ ಮಹಿಳೆಯರು ಸಂಚರಿಸುವ, ಓಡಾಡುವ ಸ್ಥಳಗಳನ್ನು ಗುರುತಿಸಿ ಮಹಿಳಾ ಶೌಚಾಲಯಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಪೈಕಿ ಎಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ ಎಂಬುದನ್ನು ಗುರುತಿಸಿ ಮಹಿಳಾ ಶೌಚಾಲಯ ನಿರ್ಮಾಣ ಮಾಡಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಇ-ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡಿ: ನಗರದಲ್ಲಿ 229 ಇ-ಶೌಚಾಲಯಗಳಿದ್ದು, ಸದ್ಯ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ. ಇ-ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ಸಲುವಾಗಿ ಕೂಡಲೆ ಟೆಂಡರ್ ಕರೆದು ಸರಿಯಾಗಿ ನಿರ್ವಹಣೆ ಮಾಡಬೇಕು. ಜೊತೆಗೆ ಬಸ್ ತಂಗುದಾಣಗಳ ಬಳಿ ಇ-ಶೌಚಾಲಯಗಳನ್ನು ಅಳವಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಸಾಧ್ಯವಾದಲ್ಲಿ ಕೆಲ ಪ್ರಮುಖ ಬಸ್ ತಂಗುದಾನಗಳ ಬಳಿ ಇ-ಶೌಚಾಲಯಗಳನ್ನು ಅಳವಡಿಸಬೇಕು ಎಂದು ತುಷಾರ್ ಗಿರಿನಾಥ್ ಹೇಳಿದರು.

ಇಂದಿರಾ ಕ್ಯಾಂಟೀನ್ ನಲ್ಲಿರುವ ಶೌಚಾಲಯ ಸಾರ್ವಜನಿಕರಿಗೆ ಬಳಕೆ: ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ನಿರ್ಮಿಸಿರುವ ಶೌಚಾಲಯಗಳನ್ನು ಸಾರ್ವಜನಿಕರು ಉಪಯೋಗಿಸಲು ಅನುವು ಮಾಡಬೇಕು. ಈ ಸಂಬಂಧ ಕೂಡಲೇ ಆದೇಶ ಹೊರಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಘನತ್ಯಾಜ್ಯ ವಿಭಾಗದ ವಿಶೇಷ ಅಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಕಲ್ಯಾಣ ವಿಶೇಷ ಆಯುಕರಾದ ರೆಡ್ಡಿ ಶಂಕರ ಬಾಬು, ಎಲ್ಲಾ ವಲಯ ಆಯುಕ್ತರು, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಪ್ರತಿಭಾ, BSWML ನ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ್ ಕಬಾಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರದಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಸಂಕ್ಷಿಪ್ತ ಯೋಜನೆಗಳನ್ನು ರೂಪಿಸುವ ಸಲುವಾಗಿ ಸಮಿತಿ ರಚನೆ:

ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶನದನ್ವಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸಂಕ್ಷಿಪ್ತ ಯೋಜನೆಗಳನ್ನು ರೂಪಿಸುವ ಕುರಿತು ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಸಮಿತಿಗಳನ್ನು ರಚಿಸಲು ಆದೇಶಿಲಾಗಿರುತ್ತದೆ. ಅದರಂತೆ ಘನ ಕರ್ನಾಟಕ ಸರ್ಕಾರದ ಆದೇಶದನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಹಾಗೂ ನಿರ್ವಹಣೆ ಮಾಡುವ ಸಂಕ್ಷಿಪ್ತ ಯೋಜನೆಗಳನ್ನು (Comprehensive Schemes) ರೂಪಿಸುವ ಕುರಿತು ಈ ಕೆಳಕಂಡಂತೆ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯ ವಿವರ:

ಅಧ್ಯಕ್ಷರು:

  1. ಮುಖ್ಯ ಆಯುಕ್ತರು, ಬಿ.ಬಿ.ಎಂ.ಪಿ

ಸದಸ್ಯರು:

  1. ವಿಶೇಷ ಆಯುಕ್ತರು (ಘ.ತ್ಯಾ.ನಿ)
  2. ವಿಶೇಷ ಆಯುಕ್ತರು (ಕಲ್ಯಾಣ)
  3. ಎಲ್ಲಾ ವಲಯ ಆಯುಕ್ತರು(ಪೂರ್ವ, ಪಶ್ಚಿಮ,ದಕ್ಷಿಣ,ಯಲಹಂಕ,ಆರ್.ಆರ್.ನಗರ,ದಾಸರಹಳ್ಳಿ,ಬೊಮನಹಳ್ಳಿ ಹಾಗೂ ಮಹದೇವಪುರ ವಲಯ).
  4. ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು (ರಸ್ತೆ ಮೂಲ ಭೂತ ಸೌಕರ್ಯ)
  5. ಮುಖ್ಯ ಅಭಿಯಂತರರು (ಘ.ತ್ಯಾ.ನಿ)
  6. ಮಹಿಳಾ ಸದಸ್ಯರು (ಕೌನ್ಸಿಲರ್)
  7. ಮುಖ್ಯ ಆರೋಗ್ಯಾಧಿಕಾರಿಗಳು (ಸಾರ್ವಜನಿಕ)
  8. ಉಪ ಆಯುಕ್ತರು (ಕಲ್ಯಾಣ)
  9. NGO ಓರ್ವ ಸಕ್ರಿಯ ಮಹಿಳಾ ಪ್ರತಿನಿಧಿ

ಸದಸ್ಯ ಕಾರ್ಯದರ್ಶಿ:

  1. ಜಂಟಿ ಆಯುಕ್ತರು(ಘ.ತ್ಯಾ.ನಿ)

LEAVE A REPLY

Please enter your comment!
Please enter your name here