ಹೃದಯಾಘಾತಕ್ಕೆ ನಟ ದಿಲೀಪ್ ರಾಜ್ ಬಲಿ; 47ನೇ ವಯಸ್ಸಿನಲ್ಲಿ ಸ್ಯಾಂಡಲ್ವುಡ್ಗೆ ಭಾರೀ ಶಾಕ್
ಬೆಂಗಳೂರು: ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕದ ಜನಪ್ರಿಯ ನಟ ದಿಲೀಪ್ ರಾಜ್ ಅವರು ಹೃದಯಾಘಾತದಿಂದ 47ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಸ್ಯಾಂಡಲ್ವುಡ್ಗೆ ಭಾರೀ ಶಾಕ್ ಉಂಟಾಗಿದೆ.
ಮಾಹಿತಿಯ ಪ್ರಕಾರ, ದಿಲೀಪ್ ರಾಜ್ ಅವರಿಗೆ ಮನೆಯಲ್ಲಿ ಇದ್ದಾಗಲೇ ಹೃದಯಾಘಾತ ಸಂಭವಿಸಿದೆ. ಬಳಿಕ ಪತ್ನಿ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ದಿಲೀಪ್ ರಾಜ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಅವರು ‘ಹಿಟ್ಲರ್ ಕಲ್ಯಾಣ’ ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ಜೊತೆಗೆ ಹಲವು ಕನ್ನಡ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಅವುಗಳಲ್ಲಿ: ಮಿಲನ, ಯು ಟರ್ನ್, ಅಂಬಿ ನಿಂಗ್ ವಯಸ್ಸಾಯ್ತೋ, ಟೋನಿ, ಭೈರವಿ, ಮಿಂಚಿನ ಓಟ, ನೀನು ಬರಲು, ಬರ್ಫಿ, ಬಾಯ್ಫ್ರೆಂಡ್ ಚಿತ್ರಗಳು ಪ್ರಮುಖವಾಗಿವೆ.
ವಿಶೇಷವಾಗಿ ಮಿಲನ ಸಿನಿಮಾದಲ್ಲಿ ಅವರು ಅಭಿನಯಿಸಿದ್ದ ಹೇಮಂತ್ ಪಾತ್ರವನ್ನು ಸಿನಿಪ್ರೇಕ್ಷಕರು ಇಂದಿಗೂ ಮರೆಯಲಾಗುವುದಿಲ್ಲ.
ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ನಟ
ನಟನೆ ಜೊತೆಗೆ ದಿಲೀಪ್ ರಾಜ್ ಅವರು ಕಿರುತೆರೆ ಕ್ಷೇತ್ರದಲ್ಲಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಪಾರು ಹಾಗೂ ನಾನಿನ್ನ ಬಿಡಲಾರೆ ಧಾರಾವಾಹಿಗಳ ನಿರ್ಮಾಣದಲ್ಲೂ ಅವರು ತೊಡಗಿಸಿಕೊಂಡಿದ್ದರು.
ಫಿಟ್ನೆಸ್ಗೆ ಹೆಸರುವಾಸಿ
ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಅಭಿಮಾನಿಗಳು ಮತ್ತು ಸಹ ಕಲಾವಿದರಿಗೆ ಮತ್ತಷ್ಟು ಶಾಕ್ ನೀಡಿರುವುದು ಅವರು ಅತ್ಯಂತ ಫಿಟ್ ಮತ್ತು ಆಕ್ಟಿವ್ ವ್ಯಕ್ತಿಯಾಗಿದ್ದ ಕಾರಣ.
ಕನ್ನಡ ಕಿರುತೆರೆ ಲೋಕದಲ್ಲಿ ನಡೆಯುತ್ತಿದ್ದ ಕ್ರೀಡಾಕೂಟಗಳು ಮತ್ತು ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿಗಳಲ್ಲೂ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಇತ್ತೀಚೆಗಷ್ಟೇ ನಡೆದ ಕ್ರೀಡಾ ಟೂರ್ನಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
47 ವರ್ಷ ವಯಸ್ಸಾದರೂ ಯುವಕರಂತೆ ಫಿಟ್ನೆಸ್ ಕಾಪಾಡಿಕೊಂಡಿದ್ದ ದಿಲೀಪ್ ರಾಜ್ ಅವರ ಹಠಾತ್ ನಿಧನ ಮತ್ತೊಮ್ಮೆ ಯುವ ವಯಸ್ಸಿನವರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಆತಂಕ ಮೂಡಿಸಿದೆ.
ಅವರ ನಿಧನಕ್ಕೆ ಕನ್ನಡ ಚಿತ್ರರಂಗ, ಕಿರುತೆರೆ ಕಲಾವಿದರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
