ಬೆಂಗಳೂರು:
“ನಾನು ಟೆರರಿಸ್ಟ್, ಏರ್‌ಪೋರ್ಟ್‌ನಲ್ಲಿ ಬಾಂಬ್ ಇದೆ. ಎಚ್ಚರವಾಗಿರಿ” ಎಂದು ನಗುವ ಇಮೋಜಿ ಸಂದೇಶ ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ ಬಂದಿದೆ. ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ಈ ಕುರಿತು ಏರ್‌ಪೋರ್ಟ್ ಸಿಬ್ಬಂದಿ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಆ.28ರಂದು ಬೆಳಗ್ಗೆ 11.43ರ ಸುಮಾರಿಗೆ ಪ್ರಯಾಣಿಕರ ಹೆಲ್ಪ್‌ಲೈನ್‌ನ ವಾಟ್ಸ್ಯಾಪ್ ನಂಬರ್‌ಗೆ ಅಪರಿಚಿತ ನಂಬರ್‌ನಿಂದ “ನಾನು ಟೆರರಿಸ್ಟ್, ಏರ್‌ಪೋರ್ಟ್‌ನಲ್ಲಿ ಬಾಂಬ್ ಇದೆ. ಎಚ್ಚರವಾಗಿರಿ” ಎಂದು ನಗುವ ಇಮೋಜಿ ಸಂದೇಶ ಬಂದಿತ್ತು. ಈ ಸಂದೇಶ ಗಮನಿಸಿದ ಟರ್ಮಿನಲ್ ಸಿಬ್ಬಂದಿ ಕೆಲಕಾಲ ಆತಂಕಗೊಂಡಿದ್ದರು.
ಆದರೆ, ಕೆಲವೇ ನಿಮಿಷಗಳಲ್ಲಿ ಅದೇ ನಂಬರ್‌ನಿಂದ ”ದಯವಿಟ್ಟು ಕ್ಷಮಿಸಿ ನನ್ನ ಮಗನ ಬಳಿ ಮೊಬೈಲ್ ಕೊಟ್ಟಿದ್ದು ಅವನೇ ಈ ರೀತಿ ಸಂದೇಶ ಕಳುಹಿಸಿದ್ದಾನೆ” ಎಂಬ ಸಂದೇಶ ಬಂದಿತ್ತು. ಜತೆಗೆ, ಕ್ಷಮೆ ಕೋರಿ ಮತ್ತೊಂದು ಸಂದೇಶ ಬಂದ ಬಳಿಕ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈ ಬೆದರಿಕೆ ಸಂದೇಶ ಸಂಬಂಧ ಸಂದೇಶ ಕಳುಹಿಸಿದ ನಂಬರ್ ಉಲ್ಲೇಖಿಸಿ ಏರ್‌ಪೋರ್ಟ್ ಟರ್ಮಿನಲ್ ಸಿಬ್ಬಂದಿ ಮೊಹಮದ್ ಜಮೀರ್ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬಾಂಬ್ ಬೆದರಿಕೆ ಸಂದೇಶ ಕೋಲ್ಕತ್ತಾ ಮೂಲದ ಮಹಿಳೆ ಮೊಬೈಲ್ ನಂಬರ್‌ನಿಂದ ಬಂದಿದ್ದು, ಅವರ ಮಗ ಸಂದೇಶ ಕಳುಹಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ಅಲ್ಲಿನ ಸ್ಥಳೀಯ ಪೊಲೀಸರು ಕೂಡ ಮೊಬೈಲ್ ನಂಬರ್ ಟ್ರೇಸ್ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.