ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಆರ್.ವಿ. ಶಿಕ್ಷಣ ಸಂಸ್ಥೆಗಳ ವಿಷನ್ 2030 ವಿದ್ಯಾರ್ಥಿ ಇಂಟರ್ನ್ಶಿಪ್ ಉಪಕ್ರಮಕ್ಕೆ ಚಾಲನೆ
ಬೆಂಗಳೂರು, ಜುಲೈ 18: ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ವಿಷನ್ 2030 ಕಾರ್ಯಕ್ರಮದಡಿ ಆರ್.ವಿ. ಶಿಕ್ಷಣ ಸಂಸ್ಥೆಗಳೊಂದಿಗೆ ಕೈಜೋಡಿಸಿ, ವಿದ್ಯಾರ್ಥಿಗಳ ಹೊಸ ಆಲೋಚನೆಗಳ ಮೂಲಕ ನಗರ ಸವಾಲುಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಹಿಡಿಯುವ ಉದ್ದೇಶದಿಂದ ವಿದ್ಯಾರ್ಥಿಗಳು, ನುರಿತ ತಜ್ಞರು ಹಾಗೂ ಪಾಲಿಕೆ ಅಧಿಕಾರಿಗಳ ತಂಡವನ್ನು ರಚಿಸುವ ಮೂಲಕ ತನ್ನ ಸಹಯೋಗದ ಮುಂದಿನ ಹಂತಕ್ಕೆ ಚಾಲನೆ ನೀಡಿದೆ.
ಪಾಲಿಕೆ ಮತ್ತು ಆರ್.ವಿ. ಶಿಕ್ಷಣ ಸಂಸ್ಥೆಗಳ ನಡುವಿನ ವಿದ್ಯಾರ್ಥಿ ಇಂಟರ್ನ್ಶಿಪ್ ತಿಳುವಳಿಕೆ ಒಪ್ಪಂದದ ಮುಂದುವರಿದ ಭಾಗವಾಗಿ ಆಯುಕ್ತ ಕೆ. ಎನ್. ರಮೇಶ್ ಅವರ ಅಧ್ಯಕ್ಷತೆಯಲ್ಲಿ ನುರಿತ ತಜ್ಞರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆ ನಡೆಯಿತು.
ಪಾಲಿಕೆಯ ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಇಂಟರ್ನ್ಶಿಪ್ ಕಾರ್ಯಕ್ರಮದ ಮೂಲಕ ಆಡಳಿತದಲ್ಲಿ ತೊಡಗಿಸಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಯೋಜನೆಗೆ ವಲಯವಾರು ಮುಖ್ಯ ಎಂಜಿನಿಯರ್ಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.
ಜಯನಗರ ವಲಯ-1ರ ಮುಖ್ಯ ಎಂಜಿನಿಯರ್ ಅವರನ್ನು ಇಂಟರ್ನ್ಶಿಪ್ ಕಾರ್ಯಕ್ರಮದ ಪ್ರಧಾನ ನೋಡಲ್ ಅಧಿಕಾರಿ ಹಾಗೂ ನಗರ ವಿನ್ಯಾಸ ವಿಭಾಗದ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಬೊಮ್ಮನಹಳ್ಳಿ ವಲಯ-2ರ ಮುಖ್ಯ ಎಂಜಿನಿಯರ್ ಅವರಿಗೆ ಪರಿಸರ ಮತ್ತು ಹವಾಮಾನ ಅಧ್ಯಯನ ವಿಭಾಗದ ಜವಾಬ್ದಾರಿ ನೀಡಲಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ದತ್ತಾಂಶ ವಿಶ್ಲೇಷಣೆ ವಿಭಾಗವನ್ನು ಆಯುಕ್ತ ಕೆ. ಎನ್. ರಮೇಶ್ ಸ್ವತಃ ಮೇಲ್ವಿಚಾರಣೆ ಮಾಡಲಿದ್ದು, ಆರೋಗ್ಯ ಸೇವೆಗಳ ವಿಭಾಗವನ್ನು ಅಪರ ಆಯುಕ್ತ ಡಾ. ನವೀನ್ ಕುಮಾರ್ ರಾಜು ನೋಡಿಕೊಳ್ಳಲಿದ್ದಾರೆ. ಉಳಿದ ಅಧಿಕಾರಿಗಳ ಪಟ್ಟಿಯನ್ನು ಶೀಘ್ರದಲ್ಲೇ ಅಧಿಕೃತ ವಾಟ್ಸಾಪ್ ಗುಂಪಿನ ಮೂಲಕ ಹಂಚಿಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗಾಗಿ ಎರಡು ಮಾದರಿಯ ಇಂಟರ್ನ್ಶಿಪ್ಗಳನ್ನು ರೂಪಿಸಲಾಗಿದೆ. ಮೊದಲನೆಯದು ನಗರ ಸಮಸ್ಯೆಗಳ ಕುರಿತು ಆಳವಾದ ಸಂಶೋಧನೆ ನಡೆಸಿ ವರದಿ ಸಿದ್ಧಪಡಿಸುವುದು. ಎರಡನೆಯದು ತಳಮಟ್ಟದಲ್ಲಿ ಅನುಷ್ಠಾನಗೊಳಿಸಬಹುದಾದ ಪ್ರಾಯೋಗಿಕ ಮಾದರಿಗಳನ್ನು ರೂಪಿಸುವುದು. ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಪರೀಕ್ಷೆಗಳಿಗೆ ತೊಂದರೆಯಾಗದಂತೆ ಇತರೆ ಸೆಮಿಸ್ಟರ್ಗಳ ವಿದ್ಯಾರ್ಥಿಗಳನ್ನು ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಆಯುಕ್ತರು ಸೂಚಿಸಿದ್ದಾರೆ.
ಕಸದ ನಿರ್ವಹಣೆ, ಶಿಕ್ಷಣ ಸಂಸ್ಥೆಗಳ ಆವರಣಗಳನ್ನು ಶೂನ್ಯ ತ್ಯಾಜ್ಯ ವಲಯಗಳಾಗಿ ರೂಪಿಸುವ ಯೋಜನೆ, ವಾಹನಗಳಿಗೆ ಕ್ಯಾಮೆರಾ ಅಳವಡಿಸಿ ರಸ್ತೆ ಗುಣಮಟ್ಟ ಹಾಗೂ ಜಾಹೀರಾತುಗಳ ಪರಿಶೀಲನೆ, ಕೃತಕ ಬುದ್ಧಿಮತ್ತೆ ಆಧಾರಿತ ಆಸ್ತಿ ತೆರಿಗೆ ಮೌಲ್ಯಮಾಪನ ಹಾಗೂ ವಾರ್ಡ್ ಮಟ್ಟದ ನಾಗರಿಕ ಸೌಲಭ್ಯಗಳ ಡಿಜಿಟಲ್ ಮ್ಯಾಪಿಂಗ್ ಮೂಲಕ ದತ್ತಾಂಶ ಆಧಾರಿತ ವರದಿಗಳನ್ನು ಸಿದ್ಧಪಡಿಸುವುದು ಪ್ರಮುಖ ಅಧ್ಯಯನ ಕ್ಷೇತ್ರಗಳಾಗಿವೆ.
ಜಯನಗರ, ಎಚ್.ಎಸ್.ಆರ್. ಲೇಔಟ್ ಹಾಗೂ ಕೋರಮಂಗಲದಲ್ಲಿ ಜಾರಿಯಲ್ಲಿರುವ ಆನ್-ಸ್ಟ್ರೀಟ್ ಪಾರ್ಕಿಂಗ್ ನಿರ್ವಹಣೆಯನ್ನು ಸುಧಾರಿಸುವುದು, ರಸ್ತೆಗಳನ್ನು ಪಾದಚಾರಿ ಸ್ನೇಹಿಯಾಗಿಸುವುದು ಹಾಗೂ ವಿಷನ್ 2030 ಪರಿಕಲ್ಪನಾ ದಾಖಲೆಯನ್ನು ಸಿದ್ಧಪಡಿಸುವ ಕಾರ್ಯದಲ್ಲೂ ವಿದ್ಯಾರ್ಥಿಗಳು ಸಹಕರಿಸಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.
ಕೆರೆಗಳ ನೀರಿನ ಗುಣಮಟ್ಟ ಸುಧಾರಣೆ, ಹಸಿರು ದಕ್ಷಿಣ ಬೆಂಗಳೂರಿಗಾಗಿ ಸಸಿ ನೆಡುವಿಕೆ, ರಾಜಕಾಲುವೆಗಳಲ್ಲಿ ಪ್ರವಾಹ ನಿಯಂತ್ರಣಕ್ಕೆ ಸೆನ್ಸರ್ ದತ್ತಾಂಶ ಬಳಕೆ, ಸಾರ್ವಜನಿಕ ಕುಂದುಕೊರತೆಗಳ ತಾಂತ್ರಿಕ ವಿಶ್ಲೇಷಣೆ, ಮತದಾರರ ದತ್ತಾಂಶ ಕ್ರೋಡೀಕರಣ ಹಾಗೂ ಕಾನೂನು ಇಲಾಖೆಯ ಪ್ರಕರಣಗಳ ಅಧ್ಯಯನವೂ ಯೋಜನೆಯ ಭಾಗವಾಗಿರಲಿದೆ.
ಪಾಲಿಕೆ ಶಾಲೆಗಳ ಫಲಿತಾಂಶ ಸುಧಾರಣೆಗೆ ಶಿಕ್ಷಕರಿಗೆ ವಿಶೇಷ ತರಬೇತಿ ಮತ್ತು ಮೌಲ್ಯಮಾಪನ ನಡೆಸಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕುರಿತು ಅಧ್ಯಯನ ನಡೆಸಲು ಹಾಗೂ ತರಕಾರಿ ವ್ಯಾಪಾರಿಗಳ ವಲಯಗಳ ವ್ಯವಸ್ಥಿತ ನಿರ್ವಹಣೆ ಮತ್ತು ವಲಯವಾರು ಕಾರ್ಯಕ್ರಮಗಳ ಕುರಿತು ವಿದ್ಯಾರ್ಥಿಗಳು ಅಧ್ಯಯನ ಕೈಗೊಳ್ಳಬಹುದಾಗಿದೆ.
ಮುಂದಿನ ಒಂದು ವಾರವನ್ನು ಪರಿಚಯಾತ್ಮಕ ಅವಧಿಯಾಗಿ ನಿಗದಿಪಡಿಸಲಾಗಿದ್ದು, ಈ ಅವಧಿಯಲ್ಲಿ ತಜ್ಞರು ಪಾಲಿಕೆಯ ಕಾರ್ಯವೈಖರಿಯನ್ನು ಅಧ್ಯಯನ ಮಾಡಿ ತಕ್ಷಣದ ಹಾಗೂ ದೀರ್ಘಾವಧಿಯ ಯೋಜನೆಗಳನ್ನು ವರ್ಗೀಕರಿಸಲಿದ್ದಾರೆ. ಪ್ರತಿ ವಲಯಕ್ಕೆ ಪ್ರತ್ಯೇಕ ಇಮೇಲ್ ಐಡಿ ಹಾಗೂ ವಾಟ್ಸಾಪ್ ಗುಂಪುಗಳನ್ನು ರಚಿಸಿ ಸಮನ್ವಯ ಸಾಧಿಸಲಾಗುವುದು. ಪಾಲಿಕೆಯ ಅಭಿವೃದ್ಧಿಗೆ ಆಸಕ್ತಿ ಹೊಂದಿರುವ ತಜ್ಞರು ಮತ್ತು ವಿದ್ಯಾರ್ಥಿಗಳಿಗೆ ನೇರವಾಗಿ ಚರ್ಚೆಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ ಎಂದು ತಿಳಿಸಲಾಗಿದೆ.
ಸಭೆಯಲ್ಲಿ ಅಪರ ಆಯುಕ್ತ ಡಾ. ನವೀನ್ ಕುಮಾರ್ ರಾಜು, ಮುಖ್ಯ ಎಂಜಿನಿಯರ್ಗಳಾದ ಬಸವರಾಜ್ ಆರ್. ಕಬಾಡೆ ಮತ್ತು ಕೆ.ವಿ. ರವಿ, ಆರ್.ವಿ. ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು, ನುರಿತ ತಜ್ಞರು ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.