ಬೆಳ್ಳಂದೂರು ಬಫರ್ ರಸ್ತೆ ಕಾಮಗಾರಿ ತ್ವರಿತಗೊಳಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ
ಬೆಂಗಳೂರು, ಜುಲೈ 18: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಬೆಳ್ಳಂದೂರು ಬಫರ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಅವರು, ಮೊದಲ ಹಂತದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಪ್ರಗತಿಯಲ್ಲಿದ್ದು, ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳ್ಳಂದೂರು ಬಫರ್ ರಸ್ತೆಯ ಒಟ್ಟು ಉದ್ದ ಸುಮಾರು 18 ಕಿಲೋಮೀಟರ್ ಆಗಿದ್ದು, ಮೊದಲ ಹಂತದಲ್ಲಿ ಮಾರತ್ತಹಳ್ಳಿ ರಿಂಗ್ ರಸ್ತೆಯಿಂದ ವರ್ತೂರು ಕೋಡಿಯವರೆಗೆ 12 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. ಕಚ್ಚಾ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ನಿರ್ಮಾಣಕ್ಕೂ ಮುನ್ನ ರಾಜಕಾಲುವೆಯ ಅಗತ್ಯ ಅಗಲವನ್ನು ಕಾಯ್ದಿರಿಸಿ, ಸರ್ವೇ ಮೂಲಕ ಗುರುತಿಸಲಾದ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.
ದೇವರಬೀಸನಹಳ್ಳಿ ಸಕ್ರಾ ಆಸ್ಪತ್ರೆ ಸಮೀಪ ರಾಜಕಾಲುವೆಯ ಅಗಲ ಕಡಿಮೆಯಿರುವುದರಿಂದ ಮಳೆಗಾಲದಲ್ಲಿ ಜಲಾವೃತ ಸಮಸ್ಯೆ ಉಂಟಾಗುತ್ತಿದೆ ಎಂದು ಗಮನಿಸಿದ ಅವರು, ಕೂಡಲೇ ಸರ್ವೇ ನಡೆಸಿ ಅಗತ್ಯ ಅಗಲವನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಅದರಂತೆ ರಾಜಕಾಲುವೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಳ್ಳಂದೂರು ಲೇಕ್ ಬಂಡ್ ರಸ್ತೆಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಕಾಮಗಾರಿ ವಿಳಂಬಕ್ಕೆ ಕಾರಣಗಳ ಕುರಿತು ಮಾಹಿತಿ ಪಡೆದು ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಲೇಕ್ ಬಂಡ್ ರಸ್ತೆ ಅಭಿವೃದ್ಧಿಯನ್ನು ತ್ವರಿತಗೊಳಿಸಿ, ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್ ಹಾಗೂ ಇತರೆ ಮೂಲಸೌಕರ್ಯಗಳನ್ನು ಒಳಗೊಂಡ ಸಮಗ್ರ ವಿನ್ಯಾಸದಡಿ ಕಾಮಗಾರಿ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಪರಿಶೀಲನೆ ವೇಳೆ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್, ಮುಖ್ಯ ಅಭಿಯಂತರರಾದ ಲೋಕೇಶ್ ಮತ್ತು ಮಾಲತಿ, ಬಿಡಿಎ ಅಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.