ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು 63 ವಾಣಿಜ್ಯ ಉದ್ದಿಮೆಗಳನ್ನು ಮುಚ್ಚಿಸಿ ಬೀಗಮುದ್ರೆ ಹಾಕಲಾಗಿದೆ ಎಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆದಿದೆ.
40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿ ನಿಯಮಬಾಹಿರವಾಗಿ ನಡೆಯುತ್ತಿದ್ದ ವಾಣಿಜ್ಯ ಮಳಿಗೆಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.
ವಿಧಾನಸಭಾ ಕ್ಷೇತ್ರವಾರು ಬೀಗಮುದ್ರೆ
- ಬಿಟಿಎಂ ಲೇಔಟ್: 30 ಅಂಗಡಿಗಳು
- ಬೆಂಗಳೂರು ದಕ್ಷಿಣ: 10 ಅಂಗಡಿಗಳು
- ಬೊಮ್ಮನಹಳ್ಳಿ: 9 ಅಂಗಡಿಗಳು
- ಪದ್ಮನಾಭನಗರ: 8 ಅಂಗಡಿಗಳು
- ಜಯನಗರ: 4 ಅಂಗಡಿಗಳು
- ಆನೇಕಲ್ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸಿಂಗಸಂದ್ರ ವಾರ್ಡ್: 2 ಅಂಗಡಿಗಳು
ಈ ವಿಶೇಷ ಕಾರ್ಯಾಚರಣೆಯನ್ನು ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ನಡೆಸಲಾಗಿದ್ದು, ಅಧಿಕಾರಿಗಳ ತಂಡಗಳು ಸ್ಥಳದಲ್ಲೇ ಬೀಗಮುದ್ರೆ ಹಾಕಿವೆ. ಕುಮಾರಸ್ವಾಮಿ ಲೇಔಟ್, ಶಾಕಾಂಬರಿ ನಗರ, ಜೆ.ಪಿ. ನಗರ, ಆಡುಗೋಡಿ, ಸುದ್ದಗುಂಟೆಪಾಳ್ಯ, ಮಡಿವಾಳ, ಕೋರಮಂಗಲ, ಈಜಿಪುರ, ಜಕ್ಕಸಂದ್ರ, ಕೋಣನಕುಂಟೆ, ಬೇಗೂರು, ಸಿಂಗಸಂದ್ರ, ಯಲಚೇನಹಳ್ಳಿ, ವಸಂತಪುರ, ಉತ್ತರಹಳ್ಳಿ, ಗೊಟ್ಟಿಗೆರೆ, ಪುಟ್ಟೇನಹಳ್ಳಿ, ಜರಗನಹಳ್ಳಿ, ಬಿಲೇಕಹಳ್ಳಿ ಹಾಗೂ ಅರಕೆರೆ ಸೇರಿದಂತೆ ಹಲವು ವಾರ್ಡ್ಗಳಲ್ಲಿ ಕಾರ್ಯಾಚರಣೆ ನಡೆದಿದೆ.
ಏಕೆ ಬೀಗಮುದ್ರೆ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವಸತಿ ಪ್ರದೇಶಗಳ 40 ಅಡಿಗಿಂತ ಕಿರಿದಾದ ರಸ್ತೆಗಳಲ್ಲಿ ವಾಣಿಜ್ಯ ಉದ್ದಿಮೆಗಳನ್ನು ನಡೆಸಲು ಅವಕಾಶವಿಲ್ಲ. ಅಂಗಡಿಗಳಿಗೆ ಹಲವು ಬಾರಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ ವ್ಯಾಪಾರ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದ ಬೇಕರಿಗಳು, ಕಾಂಡಿಮೆಂಟ್ಸ್ಗಳು, ತಿಂಡಿ-ತಿನಿಸು ಕೇಂದ್ರಗಳು, ಸಲೂನ್ ಹಾಗೂ ಬ್ಯೂಟಿ ಪಾರ್ಲರ್ಗಳು, ಹಣ್ಣು-ತರಕಾರಿ ಅಂಗಡಿಗಳು, ಹಾರ್ಡ್ವೇರ್ ಅಂಗಡಿ ಹಾಗೂ ಇತರ ಮಳಿಗೆಗಳನ್ನು ಗುರುತಿಸಿ ಬೀಗಮುದ್ರೆ ಹಾಕಲಾಗಿದೆ.
ವಸತಿ ಪ್ರದೇಶಗಳ ಶಾಂತತೆ, ನೈರ್ಮಲ್ಯ ಮತ್ತು ಸುರಕ್ಷತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ವಸತಿ ವಲಯಗಳಲ್ಲಿ ಅನಧಿಕೃತವಾಗಿ ಅಥವಾ ಪರವಾನಗಿ ಇಲ್ಲದೆ ವಾಣಿಜ್ಯ ಚಟುವಟಿಕೆ ಮುಂದುವರಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತ ಕೆ. ಎನ್. ರಮೇಶ್ ಎಚ್ಚರಿಕೆ ನೀಡಿದ್ದಾರೆ.
