ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ ಆರ್ ಅವರು ಮಂಗಳವಾರ ಚಿಕ್ಕಪೇಟೆ ವಿಭಾಗದ ವಾರ್ಡ್-38ರ ಕನಕನಪಾಳ್ಯ ವ್ಯಾಪ್ತಿಯ ಜಯನಗರ 2ನೇ ಬ್ಲಾಕ್ನ 9ನೇ ಮುಖ್ಯ ರಸ್ತೆಯಲ್ಲಿ ‘ವಾರ್ಡ್ ಒನ್’ ಅಭಿಯಾನದ ಕಾಮಗಾರಿಗಳನ್ನು ಪರಿಶೀಲಿಸಿ, ಹಾಳಾದ ಪಾದಚಾರಿ ಮಾರ್ಗದ ಬ್ಲಾಕ್ಗಳನ್ನು ಬದಲಾಯಿಸಿ, ಒಂದು ಬದಿಯಲ್ಲಿ ಸಂಪೂರ್ಣ ಹಾಳಾಗಿರುವ ಪಾದಚಾರಿ ಮಾರ್ಗವನ್ನು ಪುನರ್ ನಿರ್ಮಿಸಿ, ಎಲ್ಲ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳಿಗೆ ನೀಡಿದ ಸೂಚನೆಗಳು
- ಹಾಳಾದ ಪಾದಚಾರಿ ಮಾರ್ಗದ ಬ್ಲಾಕ್ಗಳನ್ನು ಬದಲಾಯಿಸಿ ಸಮರ್ಪಕವಾಗಿ ದುರಸ್ತಿಗೊಳಿಸಬೇಕು; ಒಂದು ಬದಿಯಲ್ಲಿ ಸಂಪೂರ್ಣ ಹಾಳಾಗಿರುವ ಪಾದಚಾರಿ ಮಾರ್ಗವನ್ನು ಪೂರ್ಣ ಪ್ರಮಾಣದಲ್ಲಿ ಪುನರ್ ನಿರ್ಮಿಸಬೇಕು.
- ಪಾದಚಾರಿ ಮಾರ್ಗಗಳಲ್ಲಿರುವ ಮರಗಳ ಸುತ್ತಲೂ ಸಿಮೆಂಟ್ ಕಾಂಕ್ರಿಟ್ ಹಾಕಬಾರದು; ಮಳೆನೀರು ಮರಗಳ ಬೇರುಗಳಿಗೆ ತಲುಪುವಂತೆ ವ್ಯವಸ್ಥೆ ಕಲ್ಪಿಸಬೇಕು.
- ಪಾದಚಾರಿ ಮಾರ್ಗಗಳಲ್ಲಿ ಬಿದ್ದಿರುವ ಕಸವನ್ನು ತಕ್ಷಣ ತೆರವುಗೊಳಿಸಿ, ಮತ್ತೆ ಕಸ ಹಾಕದಂತೆ ಕ್ರಮ ಕೈಗೊಳ್ಳಬೇಕು.
- ವಾಹನಗಳ ಅನಧಿಕೃತ ಪ್ರವೇಶ ತಡೆಯಲು ಹಾಳಾಗಿರುವ ಬೊಲ್ಲಾರ್ಡ್ಗಳನ್ನು (ಕಬ್ಬಿಣದ ತಡೆಗಂಬಗಳು) ತೆಗೆದು ಸದೃಢವಾದ ಹೊಸ ಬೊಲ್ಲಾರ್ಡ್ಗಳನ್ನು ಅಳವಡಿಸಬೇಕು.
- ರಸ್ತೆ ಬದಿಯ ಶೋಲ್ಡರ್ ಡ್ರೈನ್ಗಳಲ್ಲಿ ತುಂಬಿರುವ ಮಣ್ಣನ್ನು ತೆರವುಗೊಳಿಸಿ ಮಳೆನೀರು ಚರಂಡಿಗೆ ಹರಿಯುವಂತೆ ಮಾಡಬೇಕು; ಮಾಧವನ ಪಾರ್ಕ್ ಬಳಿ ಗಾಳಿ-ಮಳೆಯಿಂದ ಬಿದ್ದಿರುವ ಮರದ ಕೊಂಬೆಗಳನ್ನು ತಕ್ಷಣ ತೆರವುಗೊಳಿಸಬೇಕು.
ನಿಮಾನ್ಸ್ ರಸ್ತೆಯಲ್ಲಿ ಡಾಂಬರೀಕರಣ, ಬೀದಿ ದೀಪ ಕಾಮಗಾರಿ
ನಿಮಾನ್ಸ್ ಆಸ್ಪತ್ರೆ ಬಳಿ ರಸ್ತೆಯ ಒಂದು ಬದಿಯಲ್ಲಿ ಸುಮಾರು 2 ಕಿ.ಮೀ ಉದ್ದದ ಡಾಂಬರೀಕರಣ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಡಾಂಬರೀಕರಣದ ಸಂದರ್ಭದಲ್ಲಿ ಶೋಲ್ಡರ್ ಡ್ರೈನ್ಗಳ ನಿರ್ವಹಣೆಯ ಬಗ್ಗೆಯೂ ಗಮನಹರಿಸಬೇಕು ಎಂದು ಸೂಚಿಸಿದರು. ಬಾಕಿ ಉಳಿದಿರುವ ಮತ್ತೊಂದು ಬದಿಯ ಡಾಂಬರೀಕರಣವನ್ನು ಆದಷ್ಟು ಬೇಗ ಆರಂಭಿಸಬೇಕು ಹಾಗೂ ಡಾಂಬರೀಕರಣ ಮತ್ತು ಸ್ವಚ್ಛತಾ ಕಾರ್ಯ ಪೂರ್ಣಗೊಂಡ ನಂತರ ರಸ್ತೆ ಬದಿಯ ಹೆಚ್ಚುವರಿ ಮಣ್ಣನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಇದೇ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಂಚಾರ ದಟ್ಟಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ರಾತ್ರಿ ವೇಳೆ ದೀಪಗಳ ಬೆಳಕು ಮತ್ತು ಕಾರ್ಯನಿರ್ವಹಣೆಯನ್ನು ಪುನಃ ಪರಿಶೀಲಿಸಬೇಕು ಎಂದು ತಿಳಿಸಿದರು.
ರಸ್ತೆ ಗುಂಡಿ, ಬ್ಲ್ಯಾಕ್ ಸ್ಪಾಟ್, ಕೇಬಲ್
ರಸ್ತೆ ಗುಂಡಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ಗುಣಮಟ್ಟದೊಂದಿಗೆ ಮುಚ್ಚಬೇಕು, ಬ್ಲ್ಯಾಕ್ ಸ್ಪಾಟ್ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಪುನಃ ಕಸ ಸಂಗ್ರಹವಾಗದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು ಹಾಗೂ ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವ ಅನಧಿಕೃತ ಒಎಫ್ಸಿ ಕೇಬಲ್ಗಳನ್ನು ತೆರವುಗೊಳಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ನಗರ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಕ್ರಮವಹಿಸಬೇಕೆಂದೂ ಅವರು ತಿಳಿಸಿದರು.
ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಅಭಿಯಂತರ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
