ಬೆಂಗಳೂರು: ‘ವಾರ್ಡ್ ಒನ್’ ಅಭಿಯಾನದ ಭಾಗವಾಗಿ ಬೆಂಗಳೂರು ಉತ್ತರ ನಗರ ಪಾಲಿಕೆ ಮಂಗಳವಾರ ವಿದ್ಯಾರಣ್ಯಪುರ, ಸರ್ವಜ್ಞನಗರ ಮತ್ತು ಪುಲಿಕೇಶಿನಗರ ವಿಭಾಗಗಳ ಒಟ್ಟು 6.5 ಕಿ.ಮೀ. ರಸ್ತೆ ವ್ಯಾಪ್ತಿಯಲ್ಲಿ 24 ರಸ್ತೆ ಗುಂಡಿಗಳನ್ನು ಮುಚ್ಚಿ, 87 ಟನ್ ನಿರ್ಮಾಣ ತ್ಯಾಜ್ಯ ತೆರವುಗೊಳಿಸಿ, 133 ಮಳಿಗೆಗಳ ಪರಿಶೀಲನೆ ನಡೆಸಿದೆ.
ಪರಿಶೀಲಿಸಿದ 133 ಮಳಿಗೆಗಳ ಪೈಕಿ 59 ಮಳಿಗೆಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ, ಸ್ವಚ್ಛತೆ ಹಾಗೂ ವ್ಯಾಪಾರ ಪರವಾನಗಿ ನಿಯಮಗಳ ಉಲ್ಲಂಘನೆ ಕಂಡುಬಂದಿದ್ದು, ಒಟ್ಟು ₹82,700 ದಂಡ ವಿಧಿಸಲಾಗಿದೆ. ಯಲಹಂಕ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದ 2 ಮಳಿಗೆಗಳನ್ನು ಮುಚ್ಚಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಇಂದಿನ ಕಾಮಗಾರಿಯ ಪ್ರಗತಿ
- 6.5 ಕಿ.ಮೀ. ರಸ್ತೆಗಳಲ್ಲಿ ಕಾರ್ಯಾಚರಣೆ; 24 ರಸ್ತೆ ಗುಂಡಿಗಳ ದುರಸ್ತಿ
- 17 ಕಸದ ಕಪ್ಪು ಚುಕ್ಕೆಗಳ ತೆರವು; 8 ಟನ್ ಕಸ ತೆರವು
- 123 ನಿರ್ಮಾಣ ತ್ಯಾಜ್ಯ ಸಂಗ್ರಹಣಾ ಸ್ಥಳಗಳ ತೆರವು; 87 ಟನ್ ನಿರ್ಮಾಣ ತ್ಯಾಜ್ಯ ತೆರವು
- 0.6 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ; 42 ಪಾದಚಾರಿ ಮಾರ್ಗ ಅಡೆತಡೆಗಳ ತೆರವು
- 2 ಜಂಕ್ಷನ್ಗಳ ಸುಧಾರಣೆ
- 0.62 ಕಿ.ಮೀ. ರಸ್ತೆ ಬದಿಯ ಚರಂಡಿಗಳ ಹೂಳೆತ್ತುವಿಕೆ
- 2 ಹೊಸ ಬೀದಿ ದೀಪಗಳ ಅಳವಡಿಕೆ; 46 ಬೀದಿ ದೀಪಗಳ ದುರಸ್ತಿ
- 3 ಉದ್ಯಾನವನಗಳ ಸ್ವಚ್ಛತೆ
- 52 ಅನಧಿಕೃತ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ಗಳ ತೆರವು; ಅನಧಿಕೃತವಾಗಿ ನಿಲ್ಲಿಸಿದ್ದ 3 ವಾಹನಗಳ ತೆರವು
- 26 ಮರದ ಕೊಂಬೆಗಳ ಕತ್ತರಿಸುವಿಕೆ; 3.8 ಟನ್ ಮರದ ತ್ಯಾಜ್ಯ ತೆರವು
- 24 ಸಾರ್ವಜನಿಕ ದೂರುಗಳ ಸ್ಥಳದಲ್ಲೇ ಪರಿಹಾರ
ಇತರೆ ಸಂಸ್ಥೆಗಳ ಕಾರ್ಯ
- ಜಲಮಂಡಳಿ (BWSSB): 8 ನೀರಿನ ಸೋರಿಕೆ ಸಮಸ್ಯೆಗಳ ಪರಿಹಾರ ಮತ್ತು 1 ಚೇಂಬರ್ ಮಟ್ಟದ ದುರಸ್ತಿ ಕಾರ್ಯ.
- ಬೆಸ್ಕಾಂ: 3 ಅಡೆತಡೆಗಳ ತೆರವು.
- ಬಿಎಂಆರ್ಸಿಎಲ್ ಸಂಬಂಧಿತ 1 ಸಮಸ್ಯೆಯ ಪರಿಹಾರ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಮತ್ತು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ‘ವಾರ್ಡ್ ಒನ್’ ಅಭಿಯಾನದ ಮೂಲಕ ವಾರ್ಡ್ಗಳಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ, ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಪರಿಹರಿಸುವ ಕಾರ್ಯ ಮುಂದುವರಿಯಲಿದೆ ಎಂದು ಪಾಲಿಕೆ ತಿಳಿಸಿದೆ.
