ಕರ್ನಾಟಕದ ಅತಿದೊಡ್ಡ ‘ಡಿಜಿಟಲ್ ಅರೆಸ್ಟ್’ ಸೈಬರ್ ವಂಚನೆ ಬಹಿರಂಗ; ಬೆಂಗಳೂರಿನ ವೃದ್ದೆಯಿಂದ ₹24 ಕೋಟಿ ದೋಚಿದ ಖದೀಮರು
ಬೆಂಗಳೂರು, ಮೇ 25: ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಕರ್ನಾಟಕದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ರಾಜ್ಯದ ಅತಿದೊಡ್ಡ “ಡಿಜಿಟಲ್ ಅರೆಸ್ಟ್” ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ ಸೈಬರ್ ಖದೀಮರು 74 ವರ್ಷದ ವೃದ್ದೆಯೊಬ್ಬರಿಂದ ಸುಮಾರು ₹24 ಕೋಟಿ ಹಣ ದೋಚಿರುವ ಪ್ರಕರಣ ಸಂಚಲನ ಮೂಡಿಸಿದೆ.
ವಂಚನೆಗೆ ಒಳಗಾದ ಲಕ್ಷ್ಮಿ ರಾಮಮೂರ್ತಿ ಅವರು ದುಬೈನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಬೆಂಗಳೂರಿನಲ್ಲಿದ್ದ ತಮ್ಮ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿ ಅಮೆರಿಕಾದಲ್ಲಿರುವ ಮಕ್ಕಳ ಜೊತೆ ನೆಲೆಸಲು ಯೋಜನೆ ರೂಪಿಸಿದ್ದರು.
ಮೂಲಗಳ ಪ್ರಕಾರ, ಸೈಬರ್ ವಂಚಕರು ವಿಡಿಯೋ ಕಾಲ್ ಮೂಲಕ ವೃದ್ದೆಯನ್ನು ಸಂಪರ್ಕಿಸಿ, ಅವರ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಹಾಗೂ ಮನಿ ಲಾಂಡರಿಂಗ್ ನಡೆದಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ.
ಸಿಬಿಐ ಅಧಿಕಾರಿಗಳಂತೆ ನಟಿಸಿದ ಖದೀಮರು ತನಿಖೆ ಪೂರ್ಣಗೊಳ್ಳುವವರೆಗೆ ಯಾರ ಜೊತೆಯೂ ಮಾತನಾಡಬಾರದು ಎಂದು ಬೆದರಿಕೆ ಹಾಕಿ ವೃದ್ದೆಯನ್ನು ತಿಂಗಳಾನುಗಟ್ಟಲೆ “ಡಿಜಿಟಲ್ ಅರೆಸ್ಟ್” ನಲ್ಲಿ ಇರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭಯಭೀತಳಾದ ಲಕ್ಷ್ಮಿ ರಾಮಮೂರ್ತಿ ಅವರು ಜನವರಿಯಿಂದ ಮೇ 2026ರವರೆಗೆ ಹಂತ ಹಂತವಾಗಿ RTGS ಮೂಲಕ ಖದೀಮರು ಸೂಚಿಸಿದ 22 ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು ₹24 ಕೋಟಿ ಹಣ ವರ್ಗಾವಣೆ ಮಾಡಿದ್ದಾರೆ.
ಇಷ್ಟೊಂದು ದೊಡ್ಡ ಮೊತ್ತದ ಹಣ ಪಡೆದ ಬಳಿಕವೂ ಖದೀಮರು ಇನ್ನಷ್ಟು ಹಣಕ್ಕಾಗಿ ವೃದ್ದೆಯನ್ನು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಈ ನಡುವೆ ಲಕ್ಷ್ಮಿ ರಾಮಮೂರ್ತಿ ಅವರು ಒಂದು ಕಿಲೋಗ್ರಾಂ ಗೂ ಅಧಿಕ ಚಿನ್ನಾಭರಣವನ್ನು ಅಡಮಾನ ಇಡುವ ಉದ್ದೇಶದಿಂದ ಬೆಂಗಳೂರಿನ ಕ್ಯಾಂಟೋನ್ಮೆಂಟ್ ಪ್ರದೇಶದ ಐಸಿಐಸಿಐ ಬ್ಯಾಂಕ್ ಶಾಖೆಗೆ ತೆರಳಿದ್ದರು.
ಅವರ ಬಳಿ ಇದ್ದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ಅನುಮಾನಾಸ್ಪದ ವರ್ತನೆ ಗಮನಿಸಿದ ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದಾಗ ಇಡೀ ಡಿಜಿಟಲ್ ಅರೆಸ್ಟ್ ಮಹಾವಂಚನೆ ಬಯಲಾಗಿದೆ.
ನಂತರ ದೆಹಲಿ ಹಾಗೂ ಅಲಹಾಬಾದ್ನಲ್ಲಿ ಶೋಧ ಕಾರ್ಯ ನಡೆಸಿದ ಪೊಲೀಸರು ಗೌರವ್ ಕುಮಾರ್ ಹಾಗೂ ಓಂ ಪ್ರಕಾಶ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಲ್ಲಿಯವರೆಗೆ ಸುಮಾರು ₹3 ಕೋಟಿ ಹಣವನ್ನು ಮಾತ್ರ ಫ್ರೀಸ್ ಮಾಡಲು ಸಾಧ್ಯವಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ಪ್ರಕರಣದ ಮೂಲಕ ಕಾನೂನು ಜಾರಿ ಸಂಸ್ಥೆಗಳ ಹೆಸರಿನಲ್ಲಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುವ ಸಂಘಟಿತ ಸೈಬರ್ ಗ್ಯಾಂಗ್ಗಳ ಕಾರ್ಯವೈಖರಿ ಮತ್ತೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಕರ್ನಾಟಕದಲ್ಲಿ ಹೂಡಿಕೆ ವಂಚನೆ, ಆನ್ಲೈನ್ ಟ್ರೇಡಿಂಗ್ ವಂಚನೆ, ನಕಲಿ ಪಾರ್ಟ್ಟೈಮ್ ಉದ್ಯೋಗ ವಂಚನೆ ಪ್ರಕರಣಗಳೂ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವುದಾಗಿ ಪೊಲೀಸ್ ಇಲಾಖೆ ಎಚ್ಚರಿಸಿದೆ.
WhatsApp, Telegram ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ನಕಲಿ ಹೂಡಿಕೆ ಯೋಜನೆಗಳು, ಅಧಿಕ ಲಾಭದ ಆಮಿಷ ಹಾಗೂ ಸುಲಭ ಹಣ ಗಳಿಕೆ ಜಾಹೀರಾತುಗಳನ್ನು ಹರಿಬಿಡಲಾಗುತ್ತಿದೆ.
ಮೊದಲಿಗೆ ಸಣ್ಣ ಪ್ರಮಾಣದ ಲಾಭ ತೋರಿಸಿ ಬಳಿಕ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿಸಿ ವಂಚಕರು ಪರಾರಿಯಾಗುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ದಾಖಲಾಗುವ ಪ್ರತೀ ಮೂರು ಸೈಬರ್ ಪ್ರಕರಣಗಳಲ್ಲಿ ಒಂದು ಹೂಡಿಕೆ ವಂಚನೆ ಪ್ರಕರಣವಾಗಿದೆ.
2026ರ ಏಪ್ರಿಲ್ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 4,040 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 1,324 ಪ್ರಕರಣಗಳು ಹೂಡಿಕೆ ವಂಚನೆಗೆ ಸಂಬಂಧಿಸಿದ್ದಾಗಿವೆ. ಈ ಪೈಕಿ 956 ಪ್ರಕರಣಗಳು ಶೇರು ಮಾರುಕಟ್ಟೆ ಹಾಗೂ ಟ್ರೇಡಿಂಗ್ ವಂಚನೆಗೆ ಸಂಬಂಧಿಸಿದ್ದಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, 2023ರಲ್ಲಿ ಸುಮಾರು 30 ಪ್ರಕರಣಗಳಿಗೆ ಸೀಮಿತವಾಗಿದ್ದ ಹೂಡಿಕೆ ಹಾಗೂ ಉದ್ಯೋಗ ವಂಚನೆ ಪ್ರಕರಣಗಳು 2024ರಲ್ಲಿ 1,821ಕ್ಕೆ ಏರಿಕೆಯಾಗಿದ್ದು, 2025ರಲ್ಲಿ 6,153 ಪ್ರಕರಣಗಳವರೆಗೆ ಏರಿಕೆಯಾಗಿದೆ.
ಕೊರೋನಾ ಬಳಿಕ ದೇಶದಲ್ಲಿ ಆನ್ಲೈನ್ ಅವಲಂಬನೆ ಹೆಚ್ಚಾದ ಹಿನ್ನೆಲೆ, ಸೈಬರ್ ಖದೀಮರು ಜನರ ಹಣಕಾಸು ಆಸೆ, ನಂಬಿಕೆ ಹಾಗೂ ಡಿಜಿಟಲ್ ವ್ಯವಹಾರಗಳನ್ನು ದುರುಪಯೋಗಪಡಿಸಿಕೊಂಡು ಸಂಘಟಿತ ರೀತಿಯಲ್ಲಿ ವಂಚನೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಟಿ-ಬಿಟಿ ಉದ್ಯೋಗಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರೇ ಹೆಚ್ಚಾಗಿ ಇಂತಹ ವಂಚನೆಗೆ ಬಲಿಯಾಗುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
