ದೇವೇಗೌಡರ ರಾಜ್ಯಸಭೆ ಮರು ಆಯ್ಕೆ ಬಗ್ಗೆ ಅಂತಿಮ ತೀರ್ಮಾನ ಬಿಜೆಪಿ ನಾಯಕತ್ವದದು: ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು, ಮೇ 24: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ರಾಜ್ಯಸಭೆ ಮರು ಆಯ್ಕೆ ಕುರಿತ ಅಂತಿಮ ತೀರ್ಮಾನವನ್ನು ಬಿಜೆಪಿ ನಾಯಕತ್ವವೇ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ದೇವೇಗೌಡರ ರಾಜ್ಯಸಭೆ ಮರು ಆಯ್ಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತಾವಾಗಲಿ ಅಥವಾ ದೇವೇಗೌಡರಾಗಲಿ ಈ ಸಂಬಂಧ ಬಿಜೆಪಿ ಬಳಿ ಯಾವುದೇ ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
“ನಾವು ಯಾರನ್ನೂ ಮರು ಆಯ್ಕೆ ಮಾಡಿ ಎಂದು ಕೇಳಿಲ್ಲ. ನಮ್ಮ ಮೈತ್ರಿ ಪಕ್ಷ ಬಿಜೆಪಿಗೆ ವಿಧಾನಸಭೆಯಲ್ಲಿ 63 ಸ್ಥಾನಗಳಿವೆ. ಹೀಗಾಗಿ ಅಂತಿಮ ನಿರ್ಧಾರವನ್ನು ಬಿಜೆಪಿಯವರೇ ತೆಗೆದುಕೊಳ್ಳುತ್ತಾರೆ,” ಎಂದು ಕುಮಾರಸ್ವಾಮಿ ಹೇಳಿದರು.
ಈ ವಿಚಾರವಾಗಿ ತಾವು ಅಥವಾ ದೇವೇಗೌಡರು ಯಾವುದೇ ಚರ್ಚೆ ನಡೆಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
“ದೇವೇಗೌಡರ ಅವಶ್ಯಕತೆ ಬಗ್ಗೆ ದೆಹಲಿ ಮಟ್ಟದಲ್ಲಿ ನಾಯಕತ್ವ ತೀರ್ಮಾನ ಮಾಡಲಿ. ನಾವು ಈ ವಿಷಯವನ್ನು ಪ್ರಸ್ತಾಪ ಮಾಡಿಲ್ಲ, ಚರ್ಚೆಗೂ ಹೋಗಿಲ್ಲ,” ಎಂದು ಹೇಳಿದರು.
ಮೈತ್ರಿ ರಾಜಕಾರಣದಲ್ಲಿ ಮತ್ತೊಬ್ಬರ ಅವಕಾಶ ತಪ್ಪಿಸಿ ನಮಗೆ ಸ್ಥಾನ ನೀಡಿ ಎಂದು ಕೇಳುವ ರಾಜಕೀಯವನ್ನು ಜೆಡಿಎಸ್ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
“ಇನ್ನೊಬ್ಬರಿಗೆ ತಪ್ಪಿಸಿ ನಮಗೆ ಕೊಡಿ ಎಂದು ನಾವು ಯಾವತ್ತೂ ಕೇಳುವುದಿಲ್ಲ,” ಎಂದು ಅವರು ಹೇಳಿದರು.
