ಸಿದ್ದರಾಮಯ್ಯಗೆ ದೆಹಲಿ ಬುಲಾವ್; ಕರ್ನಾಟಕ ಕಾಂಗ್ರೆಸ್ನಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ ಜೋರಾ?
ಬೆಂಗಳೂರು, ಮೇ 25: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ದಿಢೀರ್ ದೆಹಲಿ ಬುಲಾವ್ ನೀಡಿರುವುದು ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ ಹಾಗೂ ರಾಜ್ಯಸಭೆ ಟಿಕೆಟ್ ಹಂಚಿಕೆ ಕುರಿತ ಊಹಾಪೋಹಗಳು ಮತ್ತೊಮ್ಮೆ ಜೋರಾಗಿವೆ.
ಮೂಲಗಳ ಪ್ರಕಾರ, ಎಸ್ಐಆರ್ ವಿಚಾರಕ್ಕೆ ಸಂಬಂಧಿಸಿದ ಸಭೆಯ ಮಧ್ಯೆಯೇ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ನಿಂದ ದೂರವಾಣಿ ಕರೆ ಬಂದಿದ್ದು, ಮೇ 26ರಂದು ದೆಹಲಿಗೆ ಬರುವಂತೆ ಸೂಚಿಸಲಾಗಿದೆ.
ಕೇರಳ ಚುನಾವಣೆಯ ಬಳಿಕ ಕರ್ನಾಟಕ ರಾಜಕೀಯದತ್ತ ಗಮನ ಹರಿಸುವುದಾಗಿ ಕಾಂಗ್ರೆಸ್ ವರಿಷ್ಠರು ಹಿಂದೆ ಸೂಚನೆ ನೀಡಿದ್ದ ಹಿನ್ನೆಲೆ, ಇದೀಗ ಸಿಎಂಗೆ ಬಂದಿರುವ ದೆಹಲಿ ಬುಲಾವ್ ರಾಜ್ಯ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದೆ.
ರಾಜ್ಯ ಕಾಂಗ್ರೆಸ್ನಲ್ಲಿ ಪದೇಪದೇ ಚರ್ಚೆಯಾಗುತ್ತಿರುವ ನಾಯಕತ್ವ ಬದಲಾವಣೆ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಸಿದ್ದರಾಮಯ್ಯ ಬಣ ಅಹಿಂದ ರಾಜಕೀಯ ಅಸ್ತ್ರದ ಮೂಲಕ ಪ್ರತಿಕ್ರಿಯಿಸಲು ಸಜ್ಜಾಗಿದೆ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಮೂಲ ಅಜೆಂಡಾ ರಾಜ್ಯಸಭೆ ಟಿಕೆಟ್ ಹಂಚಿಕೆ ಆಗಿರಬಹುದು ಎನ್ನಲಾಗುತ್ತಿದೆ. ಕರ್ನಾಟಕದಿಂದ ಕಾಂಗ್ರೆಸ್ಗೆ ಮೂರು ರಾಜ್ಯಸಭೆ ಸ್ಥಾನಗಳು ಸಿಗುವ ಸಾಧ್ಯತೆ ಇದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದುವರಿಯುವ ನಿರೀಕ್ಷೆಯಿದೆ. ಉಳಿದ ಎರಡು ಸ್ಥಾನಗಳ ಕುರಿತು ಸಿಎಂ ಹಾಗೂ ಡಿಸಿಎಂ ಜೊತೆ ಹೈಕಮಾಂಡ್ ಚರ್ಚೆ ನಡೆಸಬಹುದು ಎಂದು ಹೇಳಲಾಗುತ್ತಿದೆ.
ಆದರೆ ರಾಜ್ಯಸಭೆ ಚರ್ಚೆ ಹೊರತಾಗಿ ಸಂಪುಟ ಪುನರ್ರಚನೆ ಹಾಗೂ ನಾಯಕತ್ವ ಬದಲಾವಣೆ ವಿಚಾರಗಳೂ ಚರ್ಚೆಗೆ ಬರಬಹುದೇ ಎಂಬ ಊಹಾಪೋಹಗಳು ಕಾಂಗ್ರೆಸ್ ವಲಯದಲ್ಲಿ ತೀವ್ರಗೊಂಡಿವೆ.
ಸಿದ್ದರಾಮಯ್ಯ ಬಳಿಕ ಡಿ.ಕೆ. ಶಿವಕುಮಾರ್ ಅವರನ್ನೂ ದೆಹಲಿಗೆ ಕರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಬೆಳವಣಿಗೆಯ ನಡುವೆ ಮಾಜಿ ಸಂಸದ ಡಿ.ಕೆ. ಸುರೇಶ್ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಹೋದರರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಸಭೆಯ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, “ನನ್ನನ್ನು ಇನ್ನೂ ದೆಹಲಿಗೆ ಕರೆದಿಲ್ಲ. ಕರೆದರೆ ಹೋಗುತ್ತೇನೆ. ಸಿಎಂ ಯಾಕೆ ದೆಹಲಿಗೆ ಹೋಗುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ,” ಎಂದು ಪ್ರತಿಕ್ರಿಯಿಸಿದರು.
ಇದಕ್ಕೂ ಮೊದಲು ಮಾತನಾಡಿದ್ದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. “ಮೊದಲು ಪಕ್ಷ, ನಂತರ ಉಳಿದ ಹುದ್ದೆಗಳು,” ಎಂದು ಹೇಳುವ ಮೂಲಕ ಒಳಜಗಳದ ಸುದ್ದಿಗಳನ್ನು ತಳ್ಳಿಹಾಕಲು ಪ್ರಯತ್ನಿಸಿದರು.
ಇದೇವೇಳೆ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ದೇವನಹಳ್ಳಿ ಹೊರವಲಯದ ಹೋಟೆಲ್ನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಶಾಸಕರು ಭಾಗವಹಿಸಿದ್ದರು.
ಸಭೆಗೆ ಆಗಮಿಸುವ ವೇಳೆ ಡಿ.ಕೆ. ಶಿವಕುಮಾರ್ ಬೆಂಬಲಿಗರು “ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್” ಎಂಬ ಪೋಸ್ಟರ್ಗಳನ್ನು ಪ್ರದರ್ಶಿಸಿದ್ದು, ಕಾಂಗ್ರೆಸ್ನ ಒಳರಾಜಕೀಯ ಚರ್ಚೆಗೆ ಮತ್ತಷ್ಟು ಇಂಧನ ತುಂಬಿದೆ.
