ಗ್ರೇಟರ್ ಬೆಂಗಳೂರು ಚುನಾವಣೆ ಸಿದ್ಧತೆಗೆ ಜೆಡಿಎಸ್ ಕಸರತ್ತು; ಎಲ್ಲಾ ವಾರ್ಡುಗಳಲ್ಲಿ ಬಿರುಸಿನ ಕೆಲಸಕ್ಕೆ ಕುಮಾರಸ್ವಾಮಿ ಸೂಚನೆ
ಬೆಂಗಳೂರು, ಮೇ 24: ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆಯ ಸಿದ್ಧತೆ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಪಕ್ಷದ ನಾಯಕರ ಮಹತ್ವದ ಸಭೆ ನಡೆಸಿ, ಎಲ್ಲಾ ವಾರ್ಡುಗಳಲ್ಲಿ ಬೂತ್ ಮಟ್ಟದಿಂದಲೇ ಸಂಘಟನೆ ಬಲಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜನಪ್ರತಿನಿಧಿಗಳು, ಪಕ್ಷದ ಹಿರಿಯ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಯ ಕಾರ್ಯತಂತ್ರ, ಅಭ್ಯರ್ಥಿಗಳ ಆಯ್ಕೆ ಹಾಗೂ ಸಂಘಟನೆ ಬಲವರ್ಧನೆ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಗ್ರೇಟರ್ ಬೆಂಗಳೂರು ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಈಗಾಗಲೇ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ ಎಂದು ಹೇಳಿ, ಚುನಾವಣೆ ಮುಂದೂಡಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಿತ್ತು ಎಂದು ಆರೋಪಿಸಿದರು.
ಬೆಂಗಳೂರು ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಕಸಿಯಲು ಸರ್ಕಾರ ಯತ್ನಿಸಿತ್ತು. ಆದರೆ ನ್ಯಾಯಾಲಯ ಸರ್ಕಾರಕ್ಕೆ ಚಾಟಿ ಬೀಸಿದೆ ಎಂದು ಅವರು ಹೇಳಿದರು.
ಪಕ್ಷದ ಮುಖಂಡರಿಗೆ ಕಠಿಣ ಸೂಚನೆ ನೀಡಿದ ಕುಮಾರಸ್ವಾಮಿ, ಮತಗಟ್ಟೆ ಹಾಗೂ ವಾರ್ಡು ಮಟ್ಟದಲ್ಲಿ ಪಕ್ಷ ಸಂಘಟನೆ ಬಲಪಡಿಸಿ ಎಲ್ಲಾ 369 ವಾರ್ಡುಗಳಲ್ಲಿ ಬಿರುಸಿನ ಕೆಲಸ ನಡೆಸುವಂತೆ ಸೂಚಿಸಿದರು.
“ಎಷ್ಟು ಸೀಟು ಗೆಲ್ಲುತ್ತೇವೆ ಎಂಬ ಚಿಂತೆಯನ್ನು ನನಗೆ ಬಿಡಿ. ನಿಮ್ಮ ಕೆಲಸ ಸಂಘಟನೆಯನ್ನು ಗಟ್ಟಿಗೊಳಿಸುವುದು ಮತ್ತು ಪ್ರತಿಯೊಂದು ವಾರ್ಡಿನಲ್ಲಿ ಜನರ ನಡುವೆ ಕೆಲಸ ಮಾಡುವುದು,” ಎಂದು ಅವರು ಹೇಳಿದರು.
ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ನಗರದ ಜನರನ್ನು ಹೇಗೆ ಮೋಸ ಮಾಡಿದೆ ಎಂಬುದನ್ನು ಮನೆ ಮನೆಗೆ ತಲುಪಿಸಬೇಕು. ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಲೂಟಿ ನಡೆಯುತ್ತಿದೆ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪಕ್ಷದ ನಾಯಕರಿಗೆ ಸೂಚನೆ ನೀಡಿದರು.
ಇದೇ ವೇಳೆ, ಗ್ರೇಟರ್ ಬೆಂಗಳೂರು ಜಿಲ್ಲಾ ಸಮಿತಿಗೆ ಈಗಿನಿಂದಲೇ ಅಭ್ಯರ್ಥಿಗಳ ಗುರುತಿಸುವ ಪ್ರಕ್ರಿಯೆ ಆರಂಭಿಸುವಂತೆ ನಿರ್ದೇಶನ ನೀಡಿದ ಕುಮಾರಸ್ವಾಮಿ, ನಗರ ಘಟಕ, ಜನಪ್ರತಿನಿಧಿಗಳು ಹಾಗೂ ಮುಖಂಡರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಸಭೆಯಲ್ಲಿ ಗ್ರೇಟರ್ ಬೆಂಗಳೂರು ಸಮಿತಿ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಟಿ.ಎನ್. ಜವರಾಯಿಗೌಡ, ಮಾಜಿ ಎಂಎಲ್ಸಿ ಕೆ.ಎ. ತಿಪ್ಪೇಸ್ವಾಮಿ ಸೇರಿದಂತೆ ಬೆಂಗಳೂರಿನ ಐದು ವಿಭಾಗಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಲವು ಹಿರಿಯ ಜೆಡಿಎಸ್ ನಾಯಕರು ಭಾಗವಹಿಸಿದ್ದರು.
