ಬೆಂಗಳೂರು:
ಚುನಾವಣಾ ಫಲಿತಾಂಶ ನಾಳೆ ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ನಾಯಕರು ಸಭೆ ನಡೆಸುತ್ತಿದ್ದಾರೆ.
ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಭೇಟಿ ನೀಡಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಸಭೆಗೂ ಮುನ್ನ ಆರ್’ಟಿ ನಗರದ ತಮ್ಮ ನಿವಾಸದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, ಚುನಾವಣೆಗೆ ಮುಂಚೆ, ನಂತರ ಯಾವುದೇ ಇರಲಿ. ಸಮೀಕ್ಷೆಗಳು ಏನೇ ಹೇಳಿರಲಿ. ನನ್ನದು ಆಗಲೂ ಈಗಲೂ ಒಂದೇ ಮಾತು. ಅದು, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಗ್ರೌಡ್ ರಿಪೋರ್ಟ್ ಕೂಡ ಅದೇ ಹೇಳುತ್ತದೆ ಎಂದು ಹೇಳಿದರು.
ವಸ್ತುಸ್ಥಿತಿ ವರದಿಯನ್ನು ವರಿಷ್ಠರಿಗೆ ಸಲ್ಲಿಸಿದ್ದೇನೆ. ಬಿಜೆಪಿ ಗಳಿಸಲಿರುವ ನಂಬರ್ ಗಳ ಬಗ್ಗೆ ಹಿರಿಯ ನಾಯಕರು ಹೇಳಿದ್ದೇ ನನ್ನ ನಂಬರ್. ಇಬ್ಬರದೂ ಬೇರೆ ನಂಬರ್ ಗಳಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ನವರಿಗೆ ಬಹುಮತ ಬರುವುದಿಲ್ಲ. ಹೀಗಾಗಿ ಬೇರೆ ಪಕ್ಷದವರ ಜತೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಪಕ್ಷದ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದಾಯಿತು ಎಂದು ಹೇಳಿದರು.
ಈ ಬಾರಿ ಮೈತ್ರಿ ಪರಿಸ್ಥಿತಿ ಎದುರಾಗುವಿದಿಲ್ಲ. ನಮ್ಮ ಮುಂದೆ ಆ ಪ್ರಶ್ನೆಗಳಿಲ್ಲ. ನಾವು ಬಹುಮತ ಪಡೆಯುವುದು ಖಚಿತ. ಕಾಂಗ್ರೆಸ್ ಸಭೆ ಏನೇ ಆಗಲೀ, ನಾವು ಆ ಬಗ್ಗೆ ಚಿಂತಿಸುವುದಿಲ್ಲ. ಅವರಿಗೆ ಸಭೆ ಮಾಡುವ ಹಕ್ಕಿದೆ, ಮಾಡುತ್ತಾರೆ. ಎಲ್ಲಾ ಪಕ್ಷಗಳೂ ಸಭ ಮಾಡುತ್ತೇವೆ. ಇದರಲ್ಲಿ ಹೊಸದೇನೂ ಇಲ್ಲ ಎಂದರು.