BJP Making false allegations for politics: Karnataka DY CM DK Shivakumar | ರಾಜಕೀಯಕ್ಕಾಗಿ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಳಗಾವಿ:
“ರಾಜಕೀಯಕ್ಕಾಗಿ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆ ವಿಚಾರವಾಗಿ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುವರ್ಣ ಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು.
ನಿನ್ನೆಯ ಕಲಾಪದಲ್ಲಿ ಬಿಜೆಪಿ ನಾಯಕರು ಪೃಥ್ವಿ ಸಿಂಗ್ ಅವರ ಮೇಲಿನ ಹಲ್ಲೆ ವಿಚಾರವಾಗಿ ಗದ್ದಲ ಸೃಷ್ಟಿಸಿದ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು.
“ಅದೆಲ್ಲವೂ ಸುಳ್ಳು ಆರೋಪ. ಯಾವುದೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆಯಾಗಿಲ್ಲ. ಇದೆಲ್ಲವೂ ಸೃಷ್ಟಿ ಮಾಡಲಾಗಿರುವ ಕಥೆ. ರಾಜಕೀಯ ಉದ್ದೇಶಕ್ಕೆ ಈ ವಿಚಾರವನ್ನು ಎತ್ತುತ್ತಿದ್ದಾರೆ” ಎಂದರು.
ತೆಲಂಗಾಣ ಚುನಾವಣೆಯ ಜವಾಬ್ದಾರಿಯ ನಿರ್ವಹಣೆ ಬಗ್ಗೆ ಕೇಳಿದಾಗ, “ತೆಲಂಗಾಣದ ಜವಾಬ್ದಾರಿಯನ್ನು ನಿಭಾಯಿಸಿದ್ದು ನಾನಲ್ಲ. ನನ್ನ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ನಿಭಾಯಿಸಿದರು” ಎಂದು ತಿಳಿಸಿದರು.
