ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು. ಚಿತ್ರ: ಒದಗಿಸಿದ್ದು
ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಚಾಕು, ಚೂರಿ ಕಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಎಫ್‌ಐಆರ್ ದಾಖಲಾಗಬೇಕು ಎಂದು ಮಾಜಿ ಸಂಸದ ಎಸ್. ಮುನಿಸ್ವಾಮಿ ಆಗ್ರಹಿಸಿದರು ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಬ್ಲಿಂಕಿಟ್‌ನಂತಹ ಆ್ಯಪ್ ಮೂಲಕ ಆರ್ಡರ್ ಮಾಡಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಚಾಕು, ಚೂರಿ ಸೇರಿದಂತೆ ಮಾರಕ ವಸ್ತುಗಳನ್ನು ಕಳುಹಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಶನಿವಾರ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿ ಗೂಂಡಾ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿದ ಮುನಿಸ್ವಾಮಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಯಾವಾಗಲೂ ದ್ವೇಷ ಸಾಧಿಸುತ್ತಿದ್ದಾರೆ, ಚಾಕು ಚೂರಿ ಕಳಿಸಿದ ಪ್ರಕರಣಕ್ಕೆ ಗೃಹ ಸಚಿವರೇ ನೇರ ಹೊಣೆ ಎಂದು ಆರೋಪಿಸಿದರು. “ಅವರ ಮೇಲೆಯೇ ಮೊದಲು ಎಫ್‌ಐಆರ್ ದಾಖಲಿಸಬೇಕು” ಎಂದು ಒತ್ತಾಯಿಸಿದರು. ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಈ ಪ್ರಕರಣದಲ್ಲಿ ಯಾರಿದ್ದಾರೆ ಎಂಬುದನ್ನು ತನಿಖೆ ಮಾಡಬೇಕು, ಕುಮ್ಮಕ್ಕು ನೀಡಿದವರು ಯಾರೆಂದು ತನಿಖೆ ಮಾಡಿ ಬಂಧಿಸಬೇಕು ಎಂದರು. “ಮುಂದಿನ ದಿನ ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡೋಣ” ಎಂದು ಹೇಳಿದರು.
ಕಾಂಗ್ರೆಸ್‌ನವರು ಚಾಕು ಚೂರಿ ಕಳಿಸಿದರೆ ಬಿಜೆಪಿಯವರು ಕಾನೂನು ಉಲ್ಲಂಘಿಸಿ ಏನೂ ಮಾಡುವುದಿಲ್ಲ, ಆದರೆ ಏನು ಮಾಡಲೂ ತಯಾರಿದ್ದೇವೆ ಎಂದ ಮುನಿಸ್ವಾಮಿ, “ನಮ್ಮ ಶಕ್ತಿ ಏನು ಎಂದು ತೋರಿಸುತ್ತೇವೆ” ಎಂದರು. ಬರದಿಂದ ತತ್ತರಿಸಿರುವ ರಾಜ್ಯದ ಜನರ ಮೇಲೆ ಬೆಲೆ ಏರಿಕೆ ಮಾಡಿ ಲೂಟಿ ಮಾಡುತ್ತಿರುವ ಸರ್ಕಾರ, ರೈತರು ಹಣ ಕೇಳಿದರೆ ಜೇಬಿನಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಾರೆ, ಈ ಕಡೆ ಗಮನ ಹರಿಸದೆ ಗೂಂಡಾಗಳ ಹಾಗೆ ಪಕ್ಷದ ಕಾರ್ಯಕರ್ತರಿಗೆ ಕೆಲಸ ನೀಡಿದ್ದಾರೆ ಎಂದು ಆರೋಪಿಸಿದರು. “ಬಿಜೆಪಿ ಕಾರ್ಯಕರ್ತರಿಗೂ ಚಾಕು, ಚೂರಿ ಸಿಗುತ್ತವೆ ಎಂಬುದನ್ನು ಕಾಂಗ್ರೆಸ್ ತಿಳಿಯಬೇಕು” ಎಂದು ಎಚ್ಚರಿಸಿದರು. ಸರ್ಕಾರ ಸರಿಯಾದ ದಾರಿಯಲ್ಲಿ ನಡೆಯದೇ ಇದ್ದಾಗ ಪ್ರಶ್ನಿಸಿದ ನಾರಾಯಣಸ್ವಾಮಿ ಅವರು ರಾಜ್ಯ ನಾಯಕ, ಈ ಸರ್ಕಾರದ ಗೂಂಡಾಗಿರಿ ಹೆಚ್ಚು ದಿನ ನಡೆಯುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಗೂಂಡಾ ಸಂಸ್ಕೃತಿ ಇನ್ನೂ ಇದೆ, ಅದಕ್ಕೆಂದೇ ವಿರೋಧ ಪಕ್ಷದ ನಾಯಕರ ಮನೆಗೆ ಚಾಕು, ಚೂರಿ ಕಳಿಸಿದ್ದಾರೆ ಎಂದು ಮಾಜಿ ಶಾಸಕ ವೈ. ಸಂಪಂಗಿ ಹೇಳಿದರು. ಕಾರ್ಯಕರ್ತರ ಪರವಾಗಿ ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್‌ನವರದ್ದು ಕೊತ್ವಾಲ್ ಮತ್ತು ಗೂಂಡಾ ಸಂಸ್ಕೃತಿ, ಇದು ನೀಚ ಸರ್ಕಾರ ಎಂದು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಆರೋಪಿಸಿದರು. ಬಿಜೆಪಿ ಎಂದೂ ಪ್ರಜಾತಂತ್ರದಲ್ಲಿ, ನ್ಯಾಯಾಂಗದಲ್ಲಿ ವಿಶ್ವಾಸ ಇಟ್ಟುಕೊಂಡಿದೆ ಎಂದ ಅವರು, “ಮುಂದೆ ಏನಾದರೂ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ನುಗ್ಗಿದರೆ ನಾವೂ ಕಾಂಗ್ರೆಸ್ ನಾಯಕರ ಮನೆಗೆ ನುಗ್ಗುತ್ತೇವೆ” ಎಂದು ಎಚ್ಚರಿಸಿದರು.
ಮಚ್ಚು ಕಳಿಸುವುದು ಬಿಜೆಪಿ ಸಂಸ್ಕೃತಿ ಅಲ್ಲ, ಪಕ್ಷದ ಯಾವುದೇ ನಾಯಕರು ಮತ್ತು ಕಾರ್ಯಕರ್ತರಿಗೆ ಏನಾದರೂ ಆದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ಹೊಣೆಯಾಗುತ್ತಾರೆ ಎಂದು ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ನಾಯಕರೊಬ್ಬರು ಹೇಳಿದರು. ಬಿಜೆಪಿ ಕರ್ನಾಟಕದ ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ.
ಇನ್ನಷ್ಟು ಸಂಬಂಧಿತ ಸುದ್ದಿಗಳನ್ನು ಓದಿ:
